ಹೆತ್ತ ತಂದೆಯ ಕೊಲೆ | ಕೊಡಲಿಯಿಂದ 30 ಪೀಸ್‌ ಮಾಡಿ ಕೊಳವೆಬಾವಿಗೆ ಎಸೆದ ನಿರ್ದಯಿ ಮಗ

ದೆಹಲಿಯ ಶ್ರದ್ಧಾ ಕೊಲೆ (Delhi Shraddha Murder Case) ಪ್ರಕರಣ ಇಂದಿಗೂ ಜನಮನದಿಂದ ಇಲ್ಲಿಯವರೆಗೂ ಮಾಸಿಲ್ಲ. ಈ ಪ್ರಕರಣ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ನಂಬಿ ಪ್ರಿಯಕರನ ಜೊತೆ ಹೋದ ಪ್ರಿಯತಮೆ ಆತನ ಕೈಯಿಂದಲೇ ಭೀಕರವಾಗಿ ಕೊಲೆಯಾಗಿದ್ದು ನಿಜಕ್ಕೂ ವಿಪರ್ಯಾಸವೇ ಸರಿ. ಪ್ರಿಯಕರ ಕೊಲೆ ಮಾಡಿ ಶ್ರದ್ಧಾಳನ್ನು ಕೊಲೆಗೈದು ದೇಹವನ್ನು ತುಂಡರಿಸಿ ಫ್ರಿಡ್ಜ್​ನಲ್ಲಿ ಇರಿಸಿದ್ದು, ನಂತರ ದೇಹದ ಒಂದೊಂದೇ ಭಾಗಗಳನ್ನು ರಾತ್ರಿ ಸಾಗಿಸಿ ಅರಣ್ಯ ಪ್ರದೇಶದಲ್ಲಿ ಎಸೆದು ಬಂದಿದ್ದನು. ಈಗ ಅಂತಹುವುದೇ ಒಂದು ಭಯಾನಕ ಕೊಲೆ ಕರ್ನಾಟಕದಲ್ಲಿ (Karnataka) ನಡೆದಿದೆ. ಈ ಘಟನೆ ಡಿಸೆಂಬರ್ 6ರಂದು ಬಾಗಲಕೋಟೆ ಜಿಲ್ಲೆಯ ಮುಧೋಳ (Mudhol, Bagalkot) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ಯೆ ನಡೆದಿದೆ. ಕೊಡಲಿಯಿಂದ (Axe) ದೇಹವನ್ನು ತುಂಡಗಳನ್ನು ಮಾಡಿ ಬೋರ್​ವೆಲ್​ ನಲ್ಲಿ (borewell) ಎಸೆದು ಬಿಡಲಾಗಿದೆ. ಅಂದಹಾಗೆ ಈ ಮೃತದೇಹವನ್ನು 30ಕ್ಕೂ ಹೆಚ್ಚು ತುಂಡುಗಳನ್ನ ಮಾಡಲಾಗಿತ್ತು.

 

ಪರಶುರಾಮ್ ಕುಳಲಿ(54) ಎಂಬಾತನೇ ಕೊಲೆಯಾದ ವ್ಯಕ್ತಿ. ತಾನೇ ಹೆತ್ತು ಹೊತ್ತು ಸಾಕಿದ ಮಗನಿಂದ ಕೊಲೆಯಾದ ತಂದೆ. ಈತನ ಮಗ ವಿಠ್ಠಲ್ ಕುಳಲಿ(20) ಕೊಲೆ ಮಾಡಿದ ವ್ಯಕ್ತಿ. ಪರಶುರಾಮ್ ಮತ್ತು ವಿಠಲ್ ಮುಧೋಳ ನಗರದ ನಿವಾಸಿಗಳು. ಪ್ರತಿನಿತ್ಯ ಕುಡಿದು ಬರುತ್ತಿದ್ದ ಪರಶುರಾಮ್ ಮಗನ ಮೇಲೆ ಹಲ್ಲೆ ಮಾಡುತ್ತಿದ್ದನು. ಅವಾಚ್ಯ ಪದ ಬಳಸಿ ನಿಂದಿಸುತ್ತಿದ್ದನು. ಎಂದಿನಂತೆ ಡಿಸೆಂಬರ್ 6ರಂದು ಮದ್ಯ ಸೇವಿಸಿ ಮನೆಗೆ ಬಂದಿದ್ದನು. ಈ ವೇಳೆ ಮಗನ ಜೊತೆ ಪರಶುರಾಮ್ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಕೋಪದಲ್ಲಿ ರಾಡ್​ನಿಂದ ಹೊಡೆದು ತಂದೆಯನ್ನು ಕೊಲೆ ಮಾಡಿದ್ದಾನೆ.

ಕೊಲೆ ಬಳಿಕ ಉಪಾಯವಾಗಿ ಶವವನ್ನು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ತಮ್ಮದೇ ಹೊಲಕ್ಕೆ ಸಾಗಿಸಿದ್ದಾನೆ. ಶವವನ್ನು ಬೋರ್​ವೆಲ್ (ಕೊಳವೆ ಬಾವಿ) ಒಳಗೆ ಎಸೆಯಲು ಮುಂದಾಗಿದ್ದಾನೆ. ಆದ್ರೆ ಮೃತದೇಹ ಬಾವಿಯೊಳಗೆ ಬಿದ್ದಿಲ್ಲ. ಹಾಗಾಗಿ ಕೊಡಲಿಯಿಂದ ತಂದೆಯ ದೇಹವನ್ನು 30 ಅಧಿಕ ತುಂಡುಗಳನ್ನಾಗಿ ಮಾಡಿ ಕೊಳವೆ ಬಾವಿಗೆ ಎಸೆದಿದ್ದಾನೆ. ಇದೀಗ ಕೊಲೆಗಡುಕನ ಬಣ್ಣ ಬಯಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜೆಸಿಬಿಯಿಂದ ಕೊಳವೆಬಾವಿ ಅಗೆದು ದೇಹದ ತುಂಡುಗಳನ್ನು ಹೊರತೆಗೆದು ಮರಣೋತ್ತರ ಶವ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.