ಶಾಲೆಯಲ್ಲಿ ವ್ಯಾಕ್ಸಿನ್ ಪಡೆದ ಬಾಲಕ ಸಾವು- ಪೋಷಕರ ಆಕ್ರೋಶ, ಆರೋಪ!!
ಮಕ್ಕಳಿಗೆ ಮಾರಕವಾಗಿ ಕಾಡುವ ಮೆದುಳು ಜ್ವರ ತಡೆಗಾಗಿ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಜಪಾನೀಸ್ ಎನ್ಸೆಫಾಲಿಟಿಸ್ (ಜೆಇ) ವ್ಯಾಕ್ಸಿನ್ ನೀಡಲಾಗುತ್ತಿದೆ. ಇದೇ ರೀತಿ ಕಲಬುರಗಿಯಲ್ಲಿ ಕೂಡ ವಾಕ್ಸಿನ್ ನೀಡಲಾಗಿದ್ದು, ಹೀಗೆ ವ್ಯಾಕ್ಸಿನ್ ಪಡೆದ ಬಾಲಕನೋರ್ವ ತೀವ್ರ ಜ್ವರದಿಂದ ಬಳಲಿ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.
ಮೆದುಳು ಜ್ವರ ತಡೆಯುವ ನಿಟ್ಟಿನಲ್ಲಿ ಶಾಲೆಯಲ್ಲಿ ನೀಡಲಾಗುತ್ತಿದ್ದ ವ್ಯಾಕ್ಸಿನ್ ಪಡೆದಿದ್ದ 9 ವರ್ಷದ ಬಾಲಕ ತೀವ್ರ ಜ್ವರದಿಂದ ಬಳಲಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಕಲಬುರಗಿಯ ಹೀರಾಪೂರ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕ ಆಕಾಶ ಎಂಬಾತ ತೀವ್ರ ಜ್ವರಕ್ಕೆ ತುತ್ತಾಗಿದ್ದಾನೆ. ಆಕಾಶ ಓದುತ್ತಿದ್ದ ಹೀರಾಪುರ ಸರ್ಕಾರಿ ಶಾಲೆಯಲ್ಲಿ ಕೂಡ ಕಳೆದ ಡಿ.5 ರಂದು ಮಕ್ಕಳಿಗೆ ಜೆಇ ವ್ಯಾಕ್ಸಿನ್ ನೀಡಲಾಗಿದೆ. ಉಳಿದ ಮಕ್ಕಳಿಗೆ ನೀಡಿದಂತೆ ಆಕಾಶನಿಗೂ ಕೂಡಾ ವಾಕ್ಸಿನ್ ಹಾಕಲಾಗಿದ್ದು, ಆದರೆ ಎರಡು ದಿನಗಳ ನಂತರ ಆಕಾಶನಿಗೆ ಜ್ವರ ಕಾಣಿಸಿಕೊಂಡಿದೆ.
ಹೀಗಾಗಿ,ಡಿ.9 ರಂದು ವಿಪರೀತ ಜ್ವರದಿಂದ ಬಳಲಿದ ಆಕಾಶನ ಪೋಷಕರು ನಗರದ ಸಂಗಮೇಶ್ವರ ಆಸ್ಪತ್ರೆಗೆ ಕರೆದೊಯ್ದ ಸಂದರ್ಭ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ . ಈ ಮೊದಲು ಆರೋಗ್ಯವಾಗಿದ್ದ ಬಾಲಕ ವ್ಯಾಕ್ಸಿನ್ ಕೊಟ್ಟ ಬಳಿಕ ಜ್ವರಕ್ಕೆ ತುತ್ತಾಗಿದ್ದರಿಂದ ಬಾಲಕನ ಸಾವಿಗೆ ಜೆಇ ವಾಕ್ಸಿನ್ ಕಾರಣ ಎಂದು ಪೊಷಕರು ಆರೋಪ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ತಮ್ಮ ಮಗನ ಸಾವಿಗೆ, ಇದರಲ್ಲಿ ಆರೋಗ್ಯ ಅಧಿಕಾರಿ ಸಿಬ್ಬಂದಿ ಬೇಜವಾಬ್ದಾರಿಯೇ ಕಾರಣ ಎಂದು ಪೊಷಕರು ಹಾಗೂ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಆದರೆ, ಈ ಆರೋಪವನ್ನು ಆರೋಗ್ಯಾಧಿಕಾರಿ ತಳ್ಳಿಹಾಕಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ರಾಜಶೇಖರ ಮಾಲಿ ಅವರು ಪ್ರತಿಕ್ರಿಯೆ ನೀಡಿದ್ದು ಬಾಲಕನ ಸಾವು ಜೆಇ ವ್ಯಾಕ್ಸಿನ್‌ದಿಂದ ಆಗಿದ್ದಲ್ಲ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಜಿಲ್ಲೆಯ ಹಲವೆಡೆ ವ್ಯಾಕ್ಸಿನ್ ಕಾರ್ಯ ಸುಗಮವಾಗಿ ನಡೆದಿದ್ದು, ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ ಎಂದಿದ್ದಾರೆ.
ಇಷ್ಟೇ ಅಲ್ಲದೆ ಬಾಲಕ ಆಕಾಶ ಕೂಡಾ ವ್ಯಾಕ್ಸಿನ್ ಪಡೆದ ಬಳಿಕ ಕೂಡ ಆರೋಗ್ಯವಾಗಿದ್ದ. ಆದರೆ, ಎರಡು ದಿನಗಳ ನಂತರ ಜ್ವರ ಕಂಡು ಬಂದಿದೆ. ಡಿ.9 ರಂದು ತೀವ್ರ ಜ್ವರದಿಂದ ಬಳಲಿದ್ದರಿಂದ ಜ್ವರ ಹೆಚ್ಚಾಗಿ ಆಸ್ಪತ್ರೆಗೆ ಕರೆದೊಯ್ಯವಾಗ ಮಾರ್ಗಮಧ್ಯೆ ಸಾವಿಗೀಡಾಗಿದ್ದಾನೆ.
ಬಾಲಕನ ಸಾವಿನ ವಿಷಯ ತಿಳಿದು ಸ್ಥಳಕ್ಕೆ ಎಕ್ಸಪರ್ಟ್ ಟಿಂ ಜೊತೆ ಆರೋಗ್ಯಾಧಿಕಾರಿ ಸಹ ಭೇಟಿ ನೀಡಿ ಕೂಲಂಕಶವಾಗಿ ಪರೀಶಿಲನೆ ಮಾಡಿದ್ದಾರೆ ಎನ್ನಲಾಗಿದ್ದು, ಜೆಇ ವ್ಯಾಕ್ಸಿನ್ ನಿಂದ ಬಾಲಕನ ಸಾವು ಸಂಭವಿಸಿಲ್ಲ ಎನ್ನಲಾಗುತ್ತಿದೆ. ಇದೊಂದು ಮೆದುಳು ರೋಗ ತಡೆಯುವ ವ್ಯಾಕ್ಸಿನ್‌ನಾಗಿದ್ದು, ಮಕ್ಕಳ ಜೀವಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಆರೋಗ್ಯಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಏನೇ ಆದರೂ.. ಬಾಲಕನ ಸಾವಿಗೆ ನೈಜ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ದೊರೆತಿಲ್ಲ. ಸಂಪೂರ್ಣ ತನಿಖೆಯ ಬಳಿಕವಷ್ಟೆ ಸತ್ಯಾಂಶ ಹೊರಬೀಳಬೇಕಾಗಿದೆ.