ದೇವಸ್ಥಾನದ ಬಾಗಿಲು ಒಡೆದು ಕಳ್ಳತನ ಮಾಡುವ ಸರಕಾರಿ ಶಾಲೆಯ ಶಿಕ್ಷಕ | ಈ ಶಿಕ್ಷಕ ಯಾಕೆ ಹೀಗೆ ಮಾಡ್ತಿದ್ದ ? ಇಲ್ಲಿದೆ ಉತ್ತರ
ಶಿಕ್ಷಕ ಅಂದರೆ ವಿದ್ಯಾರ್ಥಿಗಳ ಬಾಳಿಗೆ ಬೆಳಕು ತೋರಿಸುವ ದೇವರು. ತಪ್ಪು ಹಾದಿ ಹಿಡಿದರೆ ತಿದ್ದಿ ಬುದ್ದಿ ಹೇಳುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕ ಬೇಗ ಶ್ರೀಮಂತನಾಗುವ ಆಸೆಯಿಂದ ಕಳ್ಳತನ ಹಾದಿ ಹಿಡಿದು ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಸರ್ಕಾರಿ ಉದ್ಯೋಗ, ಕೈ ತುಂಬಾ ಸಂಬಳವಿದ್ದರೂ ತನ್ನ ಅತಿಯಾದ ಆಸೆಯಿಂದ, ಐಷಾರಾಮಿ ಜೀವನ ನಡೆಸಲು ಕಳ್ಳತನದ ಹಾದಿ ಹಿಡಿದಿರುವ ಈ ಕಿರಾತಕ ಮೇಷ್ಟ್ರಿನ ಸ್ಟೋರಿ ನಿಜಕ್ಕೂ ವಿಚಿತ್ರವಾಗಿದೆ!!
ಹೌದು, ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿರುವ ಈತ ಬರೋಬ್ಬರಿ 18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದಾನೆ. ಎರಡು ಮೂರು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಿದ್ದ ಖದೀಮ ಇದೀಗ ಪೋಲಿಸರ ಬಲೆಗೆ ಬಿದ್ದಿದ್ದಾನೆ.
ಮೂಲತಃ ಹಾವೇರಿ ರಟ್ಟಿಹಳ್ಳಿಯ ನಿವಾಸಿಯಾಗಿರುವ ವಸಂತ ಕುಮಾರ್ (40) ಹಾವೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ. ಶೋಕಿ ಜೀವನದ ಚಟಕ್ಕೆ ಬಿದ್ದ ಆರೋಪಿ ವಸಂತ ಕುಮಾರ್, ರಾಣೆಬೆನ್ನೂರ ಗುಡ್ಡದ ಬೇವಿನಹಳ್ಳಿಯ ಸಲೀಂ (28) ಮತ್ತು ಈ ಹಿಂದೆ ಇತರ ಸಹಚರರ ಜೊತೆ ಸೇರಿ ಕಳ್ಳತನ ಮಾಡುತ್ತಿದ್ದ. ಜನ ಸಂದಣಿ ಕಡಿಮೆಯಿರುವ ದೇವಸ್ಥಾನಗಳೇ ಇವರ ಟಾರ್ಗೆಟ್ ಆಗಿತ್ತು. ದೇವಸ್ಥಾನಗಳಲ್ಲಿ ಮೌಲ್ಯಯುತ ವಸ್ತುಗಳನ್ನು ಮಾತ್ರವಲ್ಲದೇ, ಸಿಸಿ ಕ್ಯಾಮೆರಾಗಳಿದ್ದರೆ ಅದರ ಡಿವಿಆರ್‌ಗಳನ್ನು ಕೂಡಾ ಕದ್ದು ಪರಾರಿಯಾಗುತ್ತಿದ್ದ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಮಂಚಿಕೇರಿ ಗ್ರಾಮದ ಶ್ರೀ ಮಹಾಗಜಲಕ್ಷ್ಮೀ ದೇವಸ್ಥಾನ ಹಾಗೂ ಗುಳ್ಳಾಪುರದ ಶ್ರೀ ಶಿವವ್ಯಾಘ್ರಶ್ವರ ದೇವಸ್ಥಾನದಲ್ಲಿ ದೇವರ ಹುಂಡಿ ಸೇರಿದಂತೆ ಹಲವು ಮೌಲ್ಯಯುತ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾದ ಬಳಿಕ ಇವರ ಗ್ರಹಚಾರ ಕೆಟ್ಟಿತ್ತು. ಯಲ್ಲಾಪುರದ ಸಿಪಿಐ ಸುರೇಶ್ ಯಲ್ಲೂರು ನೇತೃತ್ವದ ತಂಡ ನಡೆಸಿದ ಕಾರ್ಯತಂತ್ರಕ್ಕೆ ಆರೋಪಿಗಳು ತಗಲಕ್ಕೊಂಡಿದ್ದಾರೆ. ಕಳ್ಳತನ ಸಂಬಂಧಿಸಿ ತನಿಖೆ ನಡೆಸಿದಾಗ ಒಂದೊಂದೇ ವಿಚಾರ ಬಾಯ್ಬಿಟ್ಟ ಆರೋಪಿಗಳು, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳ ಒಟ್ಟು 18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗುವ ವಿಷಯ ಹೇಳಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷದಿಂದ ದರೋಡೆ ಮಾಡಿಕೊಂಡು ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ ಆರೋಪಿಗಳು ಯಲ್ಲಾಪುರ, ಅಂಕೋಲಾ, ಶಿರಸಿ ಗ್ರಾಮೀಣ, ಬನವಾಸಿ, ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ, ಹೊಸನಗರ, ಹಾವೇರಿ ಜಿಲ್ಲೆಯ ಹಂಸಬಾವಿ, ಹಿರೇಕೆರೂರ, ಹಾವೇರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ 18ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದರು. ಕೊನೆಗೂ ಯಲ್ಲಾಪುರದ ಪೊಲೀಸರ ಚಾಣಾಕ್ಷತೆಯಿಂದ ದೇವಸ್ಥಾನಗಳನ್ನು ಮಾತ್ರ ಟಾರ್ಗೆಟ್ ಮಾಡಿ ಕಳ್ಳತನ ಮಾಡುತಿದ್ದ ಆರೋಪಿಗಳನ್ನು ಬಂಧಿಸಿ ಒಟ್ಟು 19,20,285 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ 12 ಲಕ್ಷ ರೂ. ಮೌಲ್ಯದ 1 ಎಸ್ ಕ್ರಾಸ್ ಕಾರು, 30,000ರೂ. ಮೌಲ್ಯದ ಬಜಾಜ್ ಪ್ಲಾಟಿನಾ ಕಂಪೆನಿಯ ಮೋಟಾರ್ ಸೈಕಲ್, 2,29,000ರೂ. ನಗದು, 50,000ರೂ. ಮೌಲ್ಯದ 9 ಗ್ರಾಂ ತೂಕದ ದೇವರ ಆಭರಣ, 1,80,400ರೂ. ಮೌಲ್ಯದ 3ಕೆ.ಜಿ. 400 ಗ್ರಾಂ ತೂಕದ ದೇವರ ಬೆಳ್ಳಿಯ ಆಭರಣ, 1,45,000ರೂ. ಮೌಲ್ಯದ 140 ಹಿತ್ತಾಳೆಯ ಗಂಟೆಗಳು, 39,550ರೂ. ಮೌಲ್ಯದ 27 ಹಿತ್ತಾಳೆಯ ದೀಪದ ಶಮೆ, 9,600ರೂ. ಮೌಲ್ಯದ 22 ಹಿತ್ತಾಳೆಯ ತೂಗು ದೀಪಗಳು, 13,500ರೂ. ಮೌಲ್ಯದ 7 ತಾಮ್ರದ ಕೊಡಗಳು,13,235ರೂ. ಮೌಲ್ಯದ 35 ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಾಗ್ರಿಗಳು, 10,000ರೂ. ಮೌಲ್ಯದ ಡಿವಿಆರ್ ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಆರೋಪಿಗಳಿಂದ ಹೆಚ್ಚಿನ ಮಾಹಿತಿಗಾಗಿ ಇನ್ನಷ್ಟು ತನಿಖೆಗೆ ಒಳಪಡಿಸಲಾಗಿದೆ.
ಒಟ್ಟಿನಲ್ಲಿ ಹಲವು ತಿಂಗಳಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸರಣಿ ದೇವಸ್ಥಾನಗಳ ದರೋಡೆ ಪ್ರಕರಣ ಈ ಮೂಲಕ ಬೆಳಕಿಗೆ ಬಂದಿದ್ದು, ಶೋಕಿ ಜೀವನದ ಆಸೆಗೆ ಬಿದ್ದ ಶಿಕ್ಷಕ ಹಾಗೂ ಆತನ ಸಹಚರರಿಗೆ ದೇವರೇ ತಕ್ಕ ಶಾಸ್ತಿ ಕಲಿಸಿದ್ದಾರೆ.