ಕಾರಿನಲ್ಲಿ ವ್ಯಕ್ತಿಯ ಸಜೀವವಾಗಿ ಸುಟ್ಟ ಆರೋಪಿ ಜೈಲಿನಲ್ಲಿ ನೇಣುಬಿಗಿದು ಆತ್ಮಹತ್ಯೆ
ಹಿರಿಯಡ್ಕ: ವಿಚಾರಾಣಾಧೀನ ಕೈದಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಹಿರಿಯಡ್ಕದ ಸಮೀಪದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಖೈದಿ ಸದಾನಂದ ಸೇರಿಗಾರ್ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ನಿವಾಸಿಯಾಗಿದ್ದಾರೆ. ಖೈದಿ ಸದಾನಂದ ಸೇರಿಗಾರ್ ಮೂವರೊಂದಿಗೆ ಸೇರಿಕೊಂಡು ಕಾರ್ಕಳದ ಆನಂದ ದೇವಾಡಿಗ ಎಂಬುವವರನ್ನು ಬೈಂದೂರು ತಾಲೂಕಿನ ಒತ್ತಿನೆಣೆ ಹೇನ್ ಬೇರು ಬಳಿ ನಿರ್ಜನ ಪ್ರದೇಶ ಒಂದರಲ್ಲಿ ಕಾರಿನಲ್ಲಿ ಸಜೀವವಾಗಿ ಸುಟ್ಟು ಹತ್ಯೆ ಮಾಡಿದ್ದರು.
ಆದರೆ ಪ್ರಕರಣದ ತನಿಖೆ ವೇಳೆ ಪ್ರಕರಣ ದಿಂದ ತಪ್ಪಿಸಿ ಕೊಳ್ಳುವ ನಿಟ್ಟಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಬಳಿಕ ಖಾಕಿ ಪಡೆಗೆ ಸಿಕ್ಕಿ ಬಿದ್ದು, ಸದಾನಂದ ಸೇರಿಗಾರ್ ಹಾಗೂ ಆತನ ಗೆಳತಿ ಶಿಲ್ಪ ಸಾಲಿಯಾನ್, ಸತೀಶ್ ದೇವಾಡಿಗ, ನಿತೀಶ್ ದೇವಾಡಿಗ ಸೆರೆಮನೆಯ ಅತಿಥಿಗಳಾಗಿದ್ದರು. ಜೈಲು ಸೇರಿದ ಬಳಿಕ ಸದಾನಂದ ಸೇರಿಗಾರ್ ಬಹಳಷ್ಟು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಹೀಗಾಗಿ, ಇಂದು ಮುಂಜಾನೆ 5 ಗಂಟೆಯ ಸುಮಾರಿಗೆ ಪಂಚೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನು ಗಮನಿಸಿದಂತಹ ಇತರೆ ಕೈದಿಗಳು ಅವರನ್ನು ನೇಣಿನ ಕುಣಿಕೆಯಿಂದ ಬಿಡಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದರೆ ದಾರಿ ಮಧ್ಯೆ ಸದಾನಂದ ಸೇರಿಗಾರ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಮೃತದೇಹವನ್ನು ಅಜ್ಜರಕಾಡು ಶವಗಾರದಲ್ಲಿ ಇರಿಸಲಾಗಿದ್ದು, ಸ್ಥಳದಲ್ಲಿ ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ಸುಧಾಕರ್ ನಾಯ್ಕ ಮತ್ತು ಸಿಬ್ಬಂದಿಗಳು ಸೇರಿದ್ದಾರೆ ಎಂದು ತಿಳಿದು ಬಂದಿದೆ.