‘ಈ ರೊಟ್ಟಿನ ನಾಯಿ ಸಹ ತಿನ್ನಲ್ಲ’ ಎಂದಿದ್ದ ಪೊಲೀಸ್ ಪೇದೆಗೆ 600 ಕಿಮೀ ದೂರದೂರಿಗೆ ವರ್ಗಾವಣೆ | ಟ್ರಾನ್ಸ್ ಫರ್ ಗೆ ತಡೆ ನೀಡಿದ ಅಲಹಾಬಾದ್ ಹೈಕೋರ್ಟ್ !

ಪೊಲೀಸ್ ಮೆಸ್‌ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ಪೊಲೀಸ್ ಪೇದೆಯ ಸಹಾಯಕ್ಕೆ ಕೋರ್ಟು ಬಂದಿದೆ. ಮನೋಜ್ ಕುಮಾರ್ ಸಹಾಯಕ್ಕೆ ಅಲಹಾಬಾದ್ ಹೈಕೋರ್ಟ್ ಕೋರ್ಟ್ ಅವರ ವರ್ಗಾವಣೆಗೆ ತಡೆ ನೀಡಿದೆ.

ಉತ್ತರ ಪ್ರದೇಶದ ಫಿರೋಜಾಬಾದ್‌ನಿಂದ ಗಾಜಿಪುರಕ್ಕೆ ವರ್ಗಾವಣೆಗೊಂಡ ಮನೋಜ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ಪಂಕಜ್ ಭಾಟಿಯಾ ಅವರು ಈ ಆದೇಶ ನೀಡಿದ್ದಾರೆ.

‘ಈ ರೊಟ್ಟಿನ ನಾಯಿ ಸಹ ತಿನ್ನಲ್ಲ’ ಎನ್ನುವ ಮನೋಜ್ ಕುಮಾರ್ ಅವರ ವೀಡಿಯೋ ಭಾರೀ ವೈರಲ್ ಆಗಿದ್ದು, ಪೊಲೀಸರ ಇರಿಸುಮುರಿಸಿಗೆ ಕಾರಣ ಆಗಿತ್ತು. 2022ರ ಸೆಪ್ಟೆಂಬರ್ 20 ರ ವರ್ಗಾವಣೆ ಆದೇಶವು ಆಡಳಿತಾತ್ಮಕ ಆಧಾರದ ಮೇಲೆ ಮಾಡಲಾಗಿದೆ ಎಂದು ಪೋಲಿಸ್ ಇಲಾಖೆ ಹೇಳಿಕೊಂಡಿದೆ. ಆದರೆ ಪೊಲೀಸ್ ಮೆಸ್‌ನಲ್ಲಿ ನೀಡಲಾಗುತ್ತಿರುವ ಕಳಪೆ ಆಹಾರದ ವಿರುದ್ಧ ಪ್ರತಿಭಟಿಸಿದ್ದರಿಂದ ಮನೋಜ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ಕೋರ್ಟಿನಲ್ಲಿ ವಾದಿಸಿದ್ದಾರೆ.

ಅರ್ಜಿದಾರ ಮನೋಜ್ ಕುಮಾರ್ ಅವರ ಪರ ವಾದವನ್ನು ಆಲಿಸಿದ ನ್ಯಾಯಾಲಯ, ಈ ವಿಚಾರವನ್ನು ಪರಿಗಣಿಸುವ ಅಗತ್ಯವಿದೆ ಎಂದು. ಅಭಿಪ್ರಾಯ ಪಟ್ಟಿದೆ. ಪ್ರತಿವಾದಿಗಳು ನಾಲ್ಕು ವಾರಗಳಲ್ಲಿ ಅಫಿಡವಿಟ್ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿದಾರರು ಮರುಪ್ರಮಾಣ ಪತ್ರ ಸಲ್ಲಿಸಲು ಇನ್ನೂ ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು ಎಂದಿದೆ ಹೈಕೋರ್ಟು. ಅಲ್ಲದೆ ಮುಂದಿನ ವಿಚಾರಣೆಯನ್ನು ಫೆಬ್ರವರಿ 28ಕ್ಕೆ ಮುಂದೂಡಿದೆ.

ವಿಚಾರಣೆಯ ಮುಂದಿನ ದಿನಾಂಕದವರೆಗೆ, ಅರ್ಜಿದಾರರು ಈಗಾಗಲೇ ಹೊಸ ಸ್ಥಳದಲ್ಲಿ ಸೇವೆಗೆ ಹಾಜರಾಗದ ಹೊರತು ಸೆಪ್ಟೆಂಬರ್ 20 ರ ವರ್ಗಾವಣೆ ಆದೇಶವನ್ನು ಜಾರಿಗೆ ತರಲಾಗುವುದಿಲ್ಲ ಎಂದು ಅದು ಹೇಳಿದೆ.

Leave A Reply

Your email address will not be published.