ಮುಖಕ್ಕೆ ಹಾಲಿನ ಕೆನೆ ಹಚ್ಚಿ, ಮಗುವಿನಂತಹ ನುಣುಪಾದ ಚರ್ಮ ನಿಮ್ಮದಾಗಿಸಿಕೊಳ್ಳಿ!
ಮುಖವು ಅಂದವಾಗಿರಬೇಕು, ಬೆಳ್ಳಗಿರಬೇಕು ಎಂದು ಎಲ್ಲರೂ ಬಯಸುವುದು ಸಾಮಾನ್ಯ. ಮುಖದ ಸೌಂದರ್ಯವನ್ನು ಹೆಚ್ಚಿಸಲು ಮಾರುಕಟ್ಟೆಗಳಲ್ಲಿ ನೂರಾರು ಕ್ರೀಮ್’ಗಳು,ಫೇಸ್ ಪ್ಯಾಕ್ಗಳು ಇವೆ. ಆದರೆ ಇದರಿಂದ ಹೆಚ್ಚಿನವರಿಗೆ ಅಡ್ಡ ಪರಿಣಾಮಗಳು ಕಂಡುಬರುತ್ತದೆ. ಹಾಗಾಗಿ ನಾವಿಂದು ನಿಮಗೆ ಮನೆಯಲ್ಲೇ ತಯಾರಿಸಿದ ಉತ್ಪನ್ನಗಳಿಂದ ಮುಖದ ಸೌಂದರ್ಯ ಹೆಚ್ಚಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ.
ಹಾಲಿನಿಂದ ನಮ್ಮ ಸೌಂದರ್ಯವನ್ನು ವೃದ್ಧಿಸಿ ಕೊಳ್ಳಬಹುದು ಎನ್ನುವ ಸತ್ಯ ಹಲವರಿಗೆ ತಿಳಿದಿಲ್ಲ. ಹಾಲು ಮತ್ತು ಹಾಲಿನ ಕ್ರೀಮ್’ಗಳನ್ನು ನಮ್ಮ ತ್ವಚೆಗೆ ಬಳಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ.
ನೈಸರ್ಗಿಕ ತ್ವಚೆ:- ಎಲ್ಲರ ಮನೆಯಲ್ಲಿ ಹಾಲಂತೂ ಇದ್ದೇ ಇರುತ್ತದೆ. ಇದು ನಿಮ್ಮ ತ್ವಚೆಯನ್ನು ಕೋಮಲವಾಗಿರುವಂತೆ ಮಾಡುವುದು ಮಾತ್ರವಲ್ಲದೆ ಚರ್ಮದಲ್ಲಿನ ಕಲ್ಮಶಗಳನ್ನು ಹೋಗಲಾಡಿಸಿ ಸುಂದರವಾಗಿ ಕಾಣುವಂತೆ ಮಾಡುತ್ತದೆ. ನೈಸರ್ಗಿಕವಾದ ರೀತಿಯಲ್ಲಿ ಯಾವುದೇ ತೊಂದರೆ ಇಲ್ಲದೆ ಇರುವ ನಿಮ್ಮ ಸಾಧಾರಣ ತ್ವಚೆಯನ್ನು ಆರೈಕೆ ಮಾಡುವುದಾದರೆ ,ಶ್ರೀಗಂಧ, ಮಲಾಯಿ, ಕಡಲೆ ಹಿಟ್ಟು, ರೋಸ್ ಆಯಿಲ್, ಜೇನುತುಪ್ಪ ಮತ್ತು ಅರಿಶಿನ ಎಲ್ಲವನ್ನು ಒಮ್ಮೆ ಮಿಶ್ರಣ ಮಾಡಿ ನಿಮ್ಮ ಮುಖದ ಹಾಗೂ ಕುತ್ತಿಗೆಯ ಭಾಗದಲ್ಲಿ ಅನ್ವಯಿಸಿ. ಸ್ವಲ್ಪ ಹೊತ್ತು ಹಾಗೆ ಇರಲು ಬಿಟ್ಟು ಆನಂತರ ಸಾಧಾರಣ ನೀರಿನಲ್ಲಿ ತೊಳೆದುಕೊಳ್ಳಿ.
ಒಣ ತ್ವಚೆ:- ಕೆಲವರ ಮುಖ ಒಣಗಿದ ರೀತಿಯಾಗಿ ಕಂಡು ಬರುತ್ತದೆ. ಏಕೆಂದರೆ ಅವರ ಚರ್ಮವು ತೇವಾಂಶವನ್ನು ಹೀರಿಕೊಳ್ಳುವುದರಿಂದ ತ್ವಚೆಯಲ್ಲಿ ತೇವಾಂಶ ಕಡಿಮೆಯಿರುತ್ತದೆ. ನಿಮ್ಮ ತ್ವಚೆಯ ತಾಜಾತನ ಮತ್ತು ಹೊಳಪನ್ನು ಹೆಚ್ಚಿಸಲು ಹಾಗೂ ಮುಖದಲ್ಲಿ ತೇವಾಂಶ ಇರುವಂತೆ ಮಾಡಲು ಈ ಮನೆಮದ್ದನ್ನು ಟ್ರೈ ಮಾಡಿ.
ಹಾಲಿನ ಕೆನೆ ಮತ್ತು ಕಡಲೆ ಹಿಟ್ಟು ಎರಡನ್ನು ತೆಗೆದುಕೊಂಡು ಹಾಲಿನ ಜೊತೆ ಮಿಶ್ರಣ ಮಾಡಿ ಅದನ್ನು ನಿಮ್ಮ ಮುಖ, ಕೈಕಾಲುಗಳಿಗೆ ಅನ್ವಯಿಸಿ, ಸ್ವಲ್ಪ ಹೊತ್ತು ಒಣಗಲು ಬಿಟ್ಟು ನಂತರ ನೀರಿನಿಂದ ತೊಳೆದುಕೊಳ್ಳಿ. ಅಥವಾ ನೀವು 15 ನಿಮಿಷಗಳ ಕಾಲ ಸ್ನಾನಕ್ಕೆ ಮುಂಚೆ ಅನುಸರಿಸಬಹುದು. ವಾರಕ್ಕೊಂದು ಸಾರಿ ಈ ಪ್ರಕ್ರಿಯೆಯನ್ನು ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.
ಬೆಳ್ಳಗಿನ ತ್ವಚೆ:- ಹಾಲು ನಿಮ್ಮ ತ್ವಚೆಯನ್ನು ಕ್ರಮೇಣವಾಗಿ ಬಿಳಿ ಬಣ್ಣಕ್ಕೆ ತಿರುಗಿಸುತ್ತದೆ. ಇದಕ್ಕೆ ಕಾರಣ ಹಾಲಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲ. ಇದು ಚರ್ಮದ ಮೇಲಿರುವ ಕಲೆಗಳನ್ನು ಹೋಗಲಾಡಿಸಿ ನಿಮ್ಮ ತ್ವಚೆಯ ಸೌಂದರ್ಯವನ್ನು ಮತ್ತು ಹೊಳಪನ್ನು ಹೆಚ್ಚಿಸುತ್ತದೆ. ಬೆಳ್ಳಗಾಗಿ ಕಾಣಲು ಒಂದು ಕಪ್ ಹಾಲಿನ ಕೆನೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ಕೇಸರಿ ಬೆರೆಸಿ ಅದನ್ನು ನಿಮ್ಮ ಮೈಗೆ ಹಚ್ಚಿ ಕೊಳ್ಳಿ. ಅರ್ಧ ಗಂಟೆ ಹಾಗೆ ಬಿಟ್ಟು ನಂತರ ಸ್ನಾನ ಮಾಡಿ.
ಮೃದುವಾದ ಕೋಮಲ ತ್ವಚೆ:- ಜೇನುತುಪ್ಪ ಮತ್ತು ಹಾಲಿನ ಕೆನೆ ಎರಡನ್ನು ಮಿಶ್ರಣ ಮಾಡಿ ನಿಮ್ಮ ಮುಖದ ಮೇಲೆ ಹಚ್ಚಿ. 15 ರಿಂದ 20 ನಿಮಿಷಗಳು ಬಿಟ್ಟು ಮುಖ ತೊಳೆದುಕೊಳ್ಳಿ. ಇದನ್ನು ನೀವು ಪ್ರತಿದಿನ ಮಾಡಬಹುದು ಅಥವಾ ವಾರಕ್ಕೆ ಎರಡು ಬಾರಿ ಮಾಡಬಹುದು. ನಿಮ್ಮ ಮುಖದ ತ್ವಚೆಯನ್ನು ಇದು ಮೃದುವಾಗಿಸುವುದು ಮಾತ್ರವಲ್ಲದೆ ಚರ್ಮದ ಮೇಲಿನ ಮೊಡವೆಗಳನ್ನು ದೂರ ಮಾಡಿ ಕಲೆಗಳನ್ನು ಹೋಗಲಾಡಿಸುತ್ತದೆ ಜೊತೆಗೆ ನಿಮ್ಮ ತ್ವಚೆಯನ್ನು ಸಾಕಷ್ಟು ಕೋಮಲವಾಗಿ ರುವಂತೆ ಮಾಡುತ್ತದೆ.
ಹೊಳಪಿನ ತ್ವಚೆ:- ಹಾಲಿನ ಕೆನೆ, ಅರಿಶಿನ ಮತ್ತು ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಿಮ್ಮ ತ್ವಚೆಯ ಮೇಲೆ ಅನ್ವಯಿಸಿದ ನಂತರ 15 ನಿಮಿಷಗಳ ಕಾಲ ಹಾಗೆ ಬಿಟ್ಟು ಸಾಧಾರಣ ನೀರಿನಲ್ಲಿ ಮುಖ ತೊಳೆದುಕೊಂಡರೆ ಸಾಕು ನಿಮ್ಮ ಮುಖ ಲಕ ಲಕ ಹೊಳೆಯುತ್ತದೆ. ಈ ಮನೆಮದ್ದು ನಿಮ್ಮ ಚರ್ಮ ತಕ್ಷಣಕ್ಕೆ ಹೊಳಪು ಕಾಣುವಂತೆ ಮಾಡುತ್ತದೆ. ರಾತ್ರಿ ಮಲಗುವ ಮುಂಚೆ ಅನ್ವಯಿಸಿ ಮಲಗಿದರೆ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಮುಖ ಪಳಪಳ ಹೊಳೆಯುತ್ತದೆ.
ಇಷ್ಟೆಲ್ಲಾ ಸೌಂದರ್ಯದ ಗಣಿ ಹೊಂದಿರುವ ಹಾಲಿನ ಉತ್ಪನ್ನವಾದ ಹಾಲಿನ ಕೆನೆಯನ್ನು ಬಹಳ ಸುಲಭವಾಗಿ ತಯಾರಿಸಬಹುದು. ಹಾಲನ್ನು ಚೆನ್ನಾಗಿ ಕುದಿಸಿದ ನಂತರ ಅರ್ಧ ಗಂಟೆಗಳ ಕಾಲ ಅದನ್ನು ಆರಲು ಬಿಡಬೇಕು. ಈಗ ಮೇಲೆ ಕೆನೆ ಕಟ್ಟಿದ ಭಾಗವನ್ನು ತೆಗೆದುಕೊಳ್ಳಿ. ಇದೇ ಹಾಲಿನ ಕೆನೆ (ಮಲಯ) ಆಗಿರುತ್ತದೆ. ಹಾಲು ತನ್ನಲ್ಲಿ ಎಷ್ಟು ಪ್ರಮಾಣದಲ್ಲಿ ಕೊಬ್ಬು ಒಳಗೊಂಡಿರುತ್ತದೆ ಎಂಬ ಆಧಾರದ ಮೇಲೆ ನಿಮಗೆ ಹಾಲಿನ ಕೆನೆ ಸಿಗುತ್ತದೆ. ಸುಲಭವಾಗಿ ಸುಂದರ ವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಮನೆಮದ್ದನ್ನೊಮ್ಮೆ ಟ್ರೈ ಮಾಡಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ.