ಭಾರೀ ಮಳೆ, ಚಳಿ : ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಣೆ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪ್ರಭಾವ ರಾಜ್ಯದ ಎಲ್ಲ ಕಡೆಗಳಲ್ಲಿ ಪ್ರಭಾವ ಬೀರಿದ್ದು, ಹೆಚ್ಚಿನ ಕಡೆಗಳಲ್ಲಿ ಮಳೆರಾಯ ಬೆಳಗ್ಗೆಯೇ ದರ್ಶನ ನೀಡಿದ್ದಾನೆ. ಹಾಗೆಯೇ ಕೋಲಾರ ಜಿಲ್ಲೆಯಲ್ಲಿ ಸತತವಾಗಿ ಕಳೆದ ಎರಡು ದಿನಗಳಿಂದ ಜಿಟಿ ಜಿಟಿ ಮಳೆ ಹಾಗೂ ಶೀತ ಗಾಳಿ ಹೆಚ್ಚಾಗಿದೆ. ಇಂದು ಸಹ ಅತಿಯಾದ ಚಳಿ ದಾಖಲಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಜೊತೆಗೆ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಜಿನುಗು ಮಳೆ ಹಾಗೂ ಕೊರೆಯುವ ಚಳಿ ವಾತಾವರಣ ಇರುವುದರಿಂದ, ಮಕ್ಕಳ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರ ಅನುಮೋದನೆ ಪಡೆದ ಬಳಿಕ ಶಾಲೆಗಳಿಗೆ ರಜೆ ನೀಡಲು ಅನುಮತಿಸಲಾಗಿದೆ ಎಂದು ಕೋಲಾರ ಜಿಲ್ಲಾ ಡಿಡಿಪಿಐ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.
ಇನ್ನು ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಮಕ್ಕಳಿಗೆ ಪ್ರಯಾಣ ನಡೆಸಲು ತೊಡಕು ಉಂಟಾಗಿದೆ. ಅಷ್ಟೆ ಅಲ್ಲದೆ, ಜಿಲ್ಲೆಯ ಕೆಲ ಶಾಲಾ ಕಟ್ಟಡಗಳು ಶಿಥಿಲವಾಗಿರುವುದರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಶನಿವಾರ ಒಂದು ದಿನ ಮಟ್ಟಿಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಇನ್ನು ಮುಂದಿನ ದಿನಗಳಲ್ಲಿ ಮಳೆ ಹೀಗೆ ಮುಂದುವರೆದರೆ ರಜೆ ಮತ್ತೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.