New Scheme : ಈ ಯೋಜನೆ ಹಿರಿಯ ನಾಗರಿಕರಿಗೆ ಕೊಡುತ್ತೆ ತಿಂಗಳಿಗೆ ರೂ.18,500 ಪಿಂಚಣಿ!
ಇದೀಗ ಸರ್ಕಾರ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ, ಹಿರಿಯ ನಾಗರಿಕರಿಗಾಗಿ ಸರ್ಕಾರ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಅಡಿಯಲ್ಲಿ ಹೊಸ ಪಿಂಚಣಿ ಯೋಜನೆಯೊಂದನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಪಿಂಚಣಿ, ಮೂಲ ಹಣ ಉಳಿತಾಯ, ನಿಯಮಿತ ಮಧ್ಯಂತರಗಳಲ್ಲಿ ಆದಾಯ ಹೀಗೆ ಹಲವು ಪ್ರಯೋಜನಗಳು ಇವೆ. ಇನ್ನೂ, ಈ ಯೋಜನೆಯ ಬಗ್ಗೆ ಹಲವು ಮಾಹಿತಿಗಳನ್ನು ತಿಳಿಯೋಣ.
ಈ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರು ಒಮ್ಮೆ 15 ಲಕ್ಷ ರೂ. ಹೂಡಿಕೆ ಮಾಡಿದ್ರೆ, 60 ವರ್ಷ ವಯಸ್ಸಿನ ನಂತರ ಗಂಡ, ಹೆಂಡತಿ ಇಬ್ಬರೂ ಪ್ರತಿ ತಿಂಗಳು 18,500 ರೂ ಪಿಂಚಣಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಡೆಯಬಹುದಾಗಿದೆ. ಹಾಗೇ ಖಾತೆದಾರರಿಗೆ 10 ವರ್ಷಗಳವರೆಗೆ ಪಿಂಚಣಿ ನೀಡಲಾಗುತ್ತದೆ. 10 ವರ್ಷಗಳ ನಂತರ ನಿಮ್ಮ ಸಂಪೂರ್ಣ ಹೂಡಿಕೆಯನ್ನು ಹಿಂತಿರುಗಿಸಲಾಗುತ್ತದೆ.
ಇನ್ನೂ ಈ ಯೋಜನೆ ಅಡಿಯಲ್ಲಿ 60 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಹೂಡಿಕೆ ಮಾಡಬಹುದು. ಆದರೆ ಇದು ಮಾರ್ಚ್ 31, 2023 ರವರೆಗೆ ಮಾತ್ರ, ಅಂದು ಹೂಡಿಕೆಯ ಕೊನೆಯ ದಿನವಾಗಿದೆ. PMVVY ಮಾರಾಟವು ಅಂತ್ಯವಾಗಲು ಕೆಲವೇ ತಿಂಗಳುಗಳು ಬಾಕಿ ಉಳಿದಿದೆ. ಇದರ ಅವಧಿ ಮುಕ್ತಾಯವಾಗುವ ಮೊದಲು ಹಿರಿಯ ನಾಗರಿಕರು ಹೂಡಿಕೆ ಮಾಡಿ ಪಿಂಚಣಿ ಪಡೆಯಬಹುದಾಗಿದೆ.
ಹಿರಿಯ ನಾಗರಿಕರಿಗೆ ಈ ಪಿಎಂವಿವಿವೈ ಯೋಜನೆಯ ಅವಧಿ 10 ವರ್ಷಗಳಾಗಿದ್ದು, ಈ ಯೋಜನೆಯನ್ನು ಎಲ್‌ಐಸಿ ಮೂಲಕ ಸರ್ಕಾರ ಒದಗಿಸಿಕೊಡುತ್ತದೆ. ಎಲ್‌ಐಸಿ ವೆಬ್‌ಸೈಟ್‌ನ ಪ್ರಕಾರ, 60 ವರ್ಷ ವಯಸ್ಸಿನ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತದ ಹಿರಿಯ ನಾಗರಿಕರು ಪಿಎಂವಿವಿವೈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇನ್ನೂ ಪಿಎಂವಿವಿವೈ ಯೋಜನೆಯ ಅಡಿಯಲ್ಲಿ ಪಿಂಚಣಿ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಖರೀದಿದಾರರು ಆಯ್ಕೆ ಮಾಡಿದ ವಿಧಾನವನ್ನು ಅವಲಂಬಿಸಿ ಪಡೆಯಬಹುದು.
ಈ ಯೋಜನೆ ಅಡಿಯಲ್ಲಿ ಪಿಂಚಣಿಯ ಮೊದಲ ಕಂತು 1 ವರ್ಷ, 6 ತಿಂಗಳು, 3 ತಿಂಗಳು ಅಥವಾ 1 ತಿಂಗಳ ನಂತರ ಯೋಜನೆಯನ್ನು ಖರೀದಿಸಿದ ದಿನಾಂಕದಿಂದ ಆರಂಭ ಆಗುತ್ತದೆ. ಅಂದರೆ, ನೀವೇನಾದರೂ ಮಾಸಿಕ ಪಿಂಚಣಿ ಪಾವತಿಯ ವಿಧಾನವನ್ನು ಆಯ್ಕೆ ಮಾಡಿ, ನೀವು ಯೋಜನೆಯನ್ನು ಖರೀದಿಸಿದರೆ ಆಗ ನಿಮ್ಮ ಪಿಂಚಣಿ 1 ತಿಂಗಳ ನಂತರ ಪ್ರಾರಂಭವಾಗುತ್ತದೆ.
ಇನ್ನೂ, ಪಿಎಂವಿವಿವೈ ಮೇಲಿನ ಬಡ್ಡಿ ದರದ ಬಗ್ಗೆ ಹೇಳಬೇಕಾದರೆ, ಬಡ್ಡಿಯ ಮೊತ್ತ ಪಿಂಚಣಿಯಾಗಿ ಸಿಗಲಿದೆ. ಹಾಗೂ ಈ ಯೋಜನೆಯಡಿ ಮಾಡುವ ಹೂಡಿಕೆಗೆ 2022-23 ರ ಹಣಕಾಸು ವರ್ಷಕ್ಕೆ 7.40% ಬಡ್ಡಿದರವನ್ನು ನಿಗದಿ ಮಾಡಲಾಗಿದೆ. ಹಾಗೇ ಮಾರ್ಚ್ 31, 2023 ರವರೆಗೆ ಖರೀದಿಸಿದ ಪಾಲಿಸಿಗಳಿಗೆಲ್ಲಾ 10 ವರ್ಷಗಳ ಪೂರ್ಣ ಪಾಲಿಸಿ ಅವಧಿಗೆ ಈ ಖಚಿತವಾದ ಪಿಂಚಣಿ ದರವನ್ನು ಪಾವತಿಸಲಾಗುತ್ತದೆ.
ಈ ಯೋಜನೆಯ ಅಡಿಯಲ್ಲಿ ಹೂಡಿಕೆಗೆ ಅನುಮತಿಸಲಾದ ಕನಿಷ್ಠ ಪಿಂಚಣಿ ಎಷ್ಟೆಂದರೆ,ತಿಂಗಳಿಗೆ ರೂ 1,000 ಆಗಿದೆ. ಹಾಗೇ ಗರಿಷ್ಠ ಪಿಂಚಣಿ ತಿಂಗಳಿಗೆ ರೂ 9,250 ಆಗಿದೆ. ಇನ್ನೂ, ಯೋಜನೆ ಅಡಿಯಲ್ಲಿ ಸಿಗುವ ಕನಿಷ್ಠ ಖರೀದಿ ಬೆಲೆ ಮಾಸಿಕ ಪಿಂಚಣಿಗೆ ರೂ.1,62,162 ಆಗಿದ್ದು, ತ್ರೈಮಾಸಿಕ ಪಿಂಚಣಿಗೆ ರೂ.1,61,074 . ಹಾಗೇ ಅರ್ಧವಾರ್ಷಿಕ ಪಿಂಚಣಿಗೆ ರೂ.1,59,574 ಮತ್ತು ವಾರ್ಷಿಕ ಪಿಂಚಣಿಗೆ ರೂ.1,56,658 ಆಗಿದೆ. ಗರಿಷ್ಠ ಖರೀದಿ ಬೆಲೆ ಬಗ್ಗೆ ಹೇಳಬೇಕಾದರೆ, ಮಾಸಿಕ ಪಿಂಚಣಿಗೆ 15 ಲಕ್ಷ ಆಗಿದ್ದು, ತ್ರೈಮಾಸಿಕ ಪಿಂಚಣಿಗೆ 14,89,933 ಜೊತೆಗೆ ಅರ್ಧ ವಾರ್ಷಿಕ ಪಿಂಚಣಿಗೆ 14,76,064 ಮತ್ತು ವಾರ್ಷಿಕ ಪಿಂಚಣಿಗೆ 1449,086 ಆಗಿರುತ್ತದೆ.