ಕಾಂತಾರ ಚಿತ್ರವನ್ನು ಮುಸ್ಲಿಂರು ನೋಡುವಂತಿಲ್ಲ – ಏನಿದು ಹೊಸ ರೂಲ್ಸ್ ?!
ವಿಶ್ವವ್ಯಾಪಿ ಸಿನಿಮಾ ಕಾಂತಾರ ( Kantara) ಹೆಚ್ಚು ಸದ್ದು ಮಾಡಿದ್ದರೂ, ವಿದೇಶಗಳಲ್ಲಿ ಪ್ರಶಂಸೆ ಗಳಿಸಿದ್ದರೂ ಸ್ವದೇಶದಲ್ಲಿ ಮಾತ್ರ ಧಾರ್ಮಿಕ ಕಾರಣಕ್ಕೆ ಸ್ವಲ್ಪ ಹಿನ್ನಡೆ ಸಾಧಿಸುತ್ತಿದೆಯೇ ಎನ್ನುವ ಅನುಮಾನವೊಂದು ಹುಟ್ಟಿಕೊಂಡಿದೆ. ಸಿನಿಮಾ ಪ್ರಿಯರ ಅನುಮಾನಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಇದೀಗ ಸುಳ್ಯದಲ್ಲಿ ನಡೆದಿದ್ದು, ಜಗಮೆಚ್ಚಿದ ಕಾಂತಾರ ಸಿನಿಮಾವನ್ನು ಕೆಲ ಮೂಲಭೂತವಾದಿ ಮುಸ್ಲಿಮರು ವಿರೋಧಿಸುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಬಲವಾಗಿ ಎದ್ದಿದೆ.
ಹೌದು, ಕನ್ನಡದ ಕಾಂತಾರ ಸಿನಿಮಾ ಇತ್ತೀಚೆಗೆ ತುಳು ಭಾಷೆಯಲ್ಲೂ ಬಿಡುಗಡೆಗೊಂಡಿದ್ದು, ಅಂತೆಯೇ ಸಿನಿಮಾ ವೀಕ್ಷಣೆಗೆ ಬಂದಿದ್ದ ಕೇರಳ ಮೂಲದ ಮುಸ್ಲಿಂ ವಿದ್ಯಾರ್ಥಿ-ವಿದ್ಯಾರ್ಥಿನಿಯ ಜೋಡಿಗೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆಯೊಂದು ಸುಳ್ಯದಲ್ಲಿ ನಡೆದಿದೆ.
ಇಲ್ಲಿನ ಸಂತೋಷ್ ಥಿಯೇಟರ್ ನಲ್ಲಿ ನಿನ್ನೆ ಸುಮಾರು ಹನ್ನೊಂದು ಗಂಟೆಯ ವೇಳೆಗೆ ಚಿತ್ರ ವೀಕ್ಷಣೆಗೆ ಕೇರಳ ಮೂಲದ ಸಹಪಾಠಿಗಳಿಬ್ಬರು ಬಂದಿದ್ದು, ಬಂದವರೇ ಥಿಯೇಟರ್ ಪಕ್ಕದ ಕಾಂಪೌಂಡ್ ಬಳಿಯಲ್ಲಿ ಬೈಕ್ ನಿಲ್ಲಿಸಿ, ತೆರಳಲು ತಯಾರಾಗುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಅಲ್ಲೇ ಪಕ್ಕದ ಅಂಗಡಿಯ ಬಳಿಯಲ್ಲಿ ಕುಳಿತಿದ್ದ ಯುವಕರ ತಂಡವೊಂದು ಆಗಮಿಸಿ ಏಕಾಏಕಿ ಹಲ್ಲೆ ನಡೆಸಿದ್ದು,ವಿದ್ಯಾರ್ಥಿ ಹಾಗೂ ಬುರ್ಖಾ ಧರಿಸಿದ್ದ ವಿದ್ಯಾರ್ಥಿನಿಗೆ ಹಲ್ಲೆ ನಡೆಸುತ್ತಿದ್ದ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ಬಳಿಕ ಪೊಲೀಸರಿಗೆ ವಿಷಯ ತಿಳಿದು ಪೊಲೀಸರು ಆಗಮಿಸಿದ್ದಾರೆ. ಘಟನೆಯ ವಿಡಿಯೋ ವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಆಧಾರದಲ್ಲಿ ಹಲ್ಲೆ ನಡೆಸಿದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಈ ವಿಚಾರ ಹಾಗೂ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಧಾರ್ಮಿಕ ಕಾರಣಕ್ಕಾಗಿ ಸಿನಿಮಾ ವೀಕ್ಷಿಸಲು ಯುವಕರ ತಂಡ ತಡೆಯೊಡ್ಡಿ ಹಲ್ಲೆ ನಡೆಸಿದ್ದಾರೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದ್ದು, ಕಾಂತಾರ ಸಿನಿಮಾವನ್ನು ಮುಸ್ಲಿಮರು ವೀಕ್ಷಿಸಬಾರದೇ ಎನ್ನುವ ಬಗ್ಗೆ ಗಂಭೀರ ಚರ್ಚೆಗಳು ಎದ್ದಿವೆ. ಕಾಂತಾರ ಹಿಂದೂ ಸಂಸ್ಕೃತಿಯ ಅನಾವರಣದ ಸಿನೆಮಾ. ಅದನ್ನು ಮುಸ್ಲಿಂರು ನೋಡಬಾರದು ಎಂಬುದು ಈ ಮೂಲಭೂತ ಮನಸ್ಸುಗಳ ಚಿಂತನೆಯೇ ? ಇದೀಗ ಪ್ರಕರಣ ಪೊಲೀಸ್ ತನಿಖೆಯಲ್ಲಿದ್ದು, ಹೆಚ್ಚಿನ ಮಾಹಿತಿ ಲಭ್ಯ ಆಗಲಿದೆ.