ಸುರತ್ಕಲ್ : ಮನೆಮುಂದಿದ್ದ ಮಗು ಅಪಹರಣ ಮಾಡಲು ಬಂದ ವ್ಯಕ್ತಿ | ಸಿಸಿಟಿವಿಯಲ್ಲಿ ವ್ಯಕ್ತಿಯ ದೃಶ್ಯ ಸೆರೆ!

ಮಕ್ಕಳೆಂದರೆ ಮುಗ್ಧತೆಯ ಪ್ರತೀಕ..ಏನು ಅರಿಯದ ಪುಟ್ಟ ಕಂದಮ್ಮಗಳನ್ನು ಅಪಹರಿಸಿ ಹಣ ವಸೂಲಿ ಮಾಡುವ ಇಲ್ಲವೇ ತಮ್ಮ ಅಕ್ರಮ ಕಾರ್ಯಗಳಿಗೆ ಬಲಿಪಶು ಗಳನ್ನಾಗಿ ಮಾಡಿಕೊಳ್ಳುವ ದಂಧೆ ಈಗಲೂ ಕೆಲವೆಡೆ ನಡೆಯುತ್ತಿವೆ. ಈ ನಡುವೆ ಕರಾವಳಿಯಲ್ಲಿಯೂ ಕೂಡ ಮಗುವನ್ನು ಅಪಹರಣ ಮಾಡಲು ವಿಫಲ ಪ್ರಯತ್ನ ನಡೆಸಿದ ಘಟನೆ ಮುನ್ನಲೆಗೆ ಬಂದಿದೆ.

 

ಹೌದು!!..ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಎಂಬಲ್ಲಿ ಮನೆಯ ಮುಂದೆ‌ ನಿಂತಿದ್ದ ಮಗುವನ್ನು ಅಪಹರಿಸಲು ಯತ್ನಿಸಿ ವಿಫಲರಾಗಿರುವ ಘಟನೆ ಬೆಳಕಿಗೆ ಬಂದಿದೆ.

ಸುರತ್ಕಲ್‌ ಇಡೀ ಪಟ್ಟಣದಲ್ಲಿ ಸೋಮವಾರ ರಾತ್ರಿ 9ಗಂಟೆಯ ವೇಳೆಗೆ ವಿದ್ಯುತ್ ಕಡಿತಗೊಂಡಿದ್ದು, ಈ ಸಂದರ್ಭ ಚೊಕ್ಕಬೆಟ್ಟು ಜುಮಾ‌ ಮಸೀದಿಯ ಮುಂಭಾಗದ ಮನೆಯ ಮುಂದೆ ಮಗುವೊಂದು ನಿಂತಿತ್ತು. ಆ ಸಂದರ್ಭ ವನ್ನು ಬಳಸಿಕೊಂಡ ದುರುಳನೊಬ್ಬ ಅಲ್ಲಿಗೆ ನೀಲಿ ಬಣ್ಣದ ಟಿ ಶರ್ಟ್‌ ಹಾಕಿದ್ದ ಎನ್ನಲಾಗಿದ್ದು, ಮಗುವಿನ ಕೈ ಹಿಡಿದು ” ನಿನ್ನ ಅಣ್ಣ ಕಾರಿನಲ್ಲಿದ್ದಾನೆ ಅಲ್ಲಿಗೆ ಹೋಗೋಣ ಬಾ ಎಂದು ಕರೆದೊಯ್ಯಲು ಹರಸಾಹಸ ಪಟ್ಟಿದ್ದಾನೆ. ಈ ವೇಳೆ ಮಗು ಅಣ್ಣ ಮನೆಯಲ್ಲಿದ್ದಾನೆ ಎಂದು ಆತನ‌ ಕೈಯಿಂದ ತಪ್ಪಿಸಿಕೊಂಡು ಮನೆಯ ಒಳಗೆ ಓಡಿದೆ. ತಕ್ಷಣವೇ ಅಪಹರಣಕ್ಕೆ‌ ಬಂದಿದ್ದ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.

ಮಸೀದಿಯ ಸಿಸಿ ಕ್ಯಾಮರಾದಲ್ಲಿ ಮಗುವನ್ನು ಅಪಹರಿಸಲು ಪ್ರಯತ್ನಿಸಿದ ದುಷ್ಕರ್ಮಿಯ ಚಲನವಲನಗಳ ದೃಶ್ಯ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ. ಈ ಕುರಿತು ಸುರತ್ಕಲ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನಾ ಸ್ಥಳದ ಸಮೀಪದ ಸಿಸಿ ಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಘಟನೆಯ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.