ತಂಬಾಕು ಸೇಲ್ ಗೆ ಇನ್ನು ಲೈಸೆನ್ಸ್ – ತಪ್ಪಿದರೆ ಬೀಳಲಿದೆ ಭಾರೀ ದಂಡ
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಇತ್ತೀಚೆಗೆ ಶಾಲಾ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಂಬಾಕು ಸೇವನೆಗೆ ದಾಸರಾಗುತ್ತಿರುವುದು ಸಮೀಕ್ಷೆಗಳಲ್ಲಿ ಕಂಡು ಬರುತ್ತಿದೆ. ಮೊದಲೇ ಇದ್ದ ನಿಯಮದ ಪ್ರಕಾರ ಶಾಲಾ-ಕಾಲೇಜುಗಳಿಂದ 100 ಮೀಟರ್ ಒಳಗಡೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಆದರೆ ಇದರ ಉಲ್ಲಂಘನೆ ಆಗುತ್ತಿದೆ. ಹಾಗಾಗಿ ಇನ್ಮುಂದೆ ತಂಬಾಕು ಸೇಲ್‌ಗೆ ಟ್ರೇಡ್ ಲೈಸೆನ್ಸ್ ಜಾರಿಯಾಗಲಿದೆ.
ರಾಜ್ಯದಲ್ಲಿ ಇನ್ನುಂದೆ ಟ್ರೇಡ್ ಲೈಸೆನ್ಸ್ ಇಲ್ಲದೆ ತಂಬಾಕು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಲೈಸೆನ್ಸ್ ಇಲ್ಲದೆ ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದರೆ ಭಾರೀ ದಂಡ ತೆರಬೇಕಾಗುತ್ತದೆ. ಬೀಡಿ, ಸಿಗರೇಟ್, ಗುಟ್ಕಾ ಹಾಗೂ ತಂಬಾಕು ಮಾರಾಟ ಮಾಡುವ ಅಂಗಡಿಗಳು ಪ್ರತ್ಯೇಕವಾದ ಟ್ರೇಡ್ ಲೈಸೆನ್ಸ್ ಹೊಂದಿರಬೇಕು ಎಂಬ ನಿಯಮ ಈ ತಿಂಗಳ ಅಂತ್ಯದ ಒಳಗೆ ಜಾರಿಗೆ ಬರಲಿದೆ.
ಈ ನಿಯಮ ಕೇವಲ ದೊಡ್ಡ ಅಥವಾ ಸಗಟು ಮಾರಾಟಗಾರರಿಗೆ ಮಾತ್ರವಲ್ಲ ಸಣ್ಣಪುಟ್ಟ ಅಂಗಡಿಗಳು ಕೂಡ ಸ್ಥಳೀಯ ಸಂಸ್ಥೆಗಳಿಂದ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಟ್ರೇಡ್ ಲೈಸನ್ಸ್ ಅನ್ನು ಪಡೆಯಬೇಕು. ಅದನ್ನು ಅಂಗಡಿಗಳಲ್ಲಿ ಪ್ರದರ್ಶಿಸಬೇಕಾಗುತ್ತದೆ.
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ ಎಂಬ ಬೋರ್ಡ್ ಹಾಕಿರುತ್ತಾರೆ ಹಾಗಾಗಿ ಇದು ಎಲ್ಲರಿಗೂ ತಿಳಿದಿರುವುದೇ. ಹಾಗೂ ಈ ಬಗ್ಗೆ ದಂಡ ಕೂಡ ಜಾರಿಯಲ್ಲಿದೆ. ಆದರೆ ಇದು ಸರಿಯಾದ ರೀತಿಯಲ್ಲಿ ಅನುಷ್ಠಾನ ಆಗುತ್ತಿಲ್ಲ. ಸರಿಯಾಗಿ ಪಾಲನೆ ಆಗುತ್ತಿಲ್ಲ. ಹಾಗಾಗಿ ಟ್ರೇಡ್ ಲೈಸನ್ಸ್ ಜಾರಿಗೆ ಬಂದರೆ ನಿಯಂತ್ರಣ ಆಗಬಹುದು ಎನ್ನಲಾಗುತ್ತಿದೆ.
ಈ ಟ್ರೇಡ್ ಲೈಸನ್ಸ್ ನಿಯಮ ಜಾರಿಗೆ ತರಬೇಕು ಎಂಬುದು ಈಗಿನ ಪ್ರಸ್ತಾಪ ಅಲ್ಲ. ಹಲವು ವರ್ಷಗಳಿಂದ ಈ ಬಗ್ಗೆ ಚರ್ಚೆ ಆಗುತ್ತಿದೆ. ಇದರ ಜಾರಿಗೆ ಮಕ್ಕಳ ಹಕ್ಕುಗಳ ಸಂಘಟನೆಗಳು, ವಕೀಲರು, ಸಾರ್ವಜನಿಕ ವಲಯದಿಂದ ಒತ್ತಾಯಿಸಲಾಗಿತ್ತು. ಆದರೆ ತಂಬಾಕು ಉತ್ಪನ್ನಗಳ ಮಾರಾಟಗಾರರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರ ಸಿಗರೇಟ್, ತಂಬಾಕು ಉತ್ಪನ್ನಗಳ ಮೇಲೆ ನಿಯಂತ್ರಣಕ್ಕೆ 2020ರಲ್ಲಿಯೇ ಕರ್ನಾಟಕ ಪೌರಸಂಸ್ಥೆಗಳ ಕಾಯ್ದೆಯಡಿ ನಿಯಮ ರೂಪಿಸಿತ್ತು. ಆದರೆ ಲಾಬಿ ಕಾರಣಕ್ಕೆ ಜಾರಿಗೆ ತರಲು ಆಗಿರಲಿಲ್ಲ. ಆದರೆ ಇದೀಗ ಅದರ ಜಾರಿಗೆ ಸಮಯ ಬಂದಿದೆ. ನಗರಾಭಿವೃದ್ಧಿ ಇಲಾಖೆ ಹೊಸದಾಗಿ ಮತ್ತೆ ನಿಯಮಗಳನ್ನು ರೂಪಿಸಿದೆ.
ವ್ಯಾಪಾರಿಗಳು ಟ್ರೇಡ್ ಲೈಸೆನ್ಸ್ ಪಡೆಯುವುದು ಹಾಗೂ ನವೀಕರಿಸುವ ಅವಧಿಯನ್ನು ಐದು ವರ್ಷಗಳಿಗೆ ಹೆಚ್ಚಿಸುವ ನಿರ್ಧಾರವನ್ನು ನಗರಾಭಿವೃದ್ಧಿ ಇಲಾಖೆ ತೆಗೆದುಕೊಂಡಿದೆ. ಹಾಗಾಗಿ ವರ್ಷಕ್ಕೊಮ್ಮೆ ಸ್ಥಳೀಯ ಸಂಸ್ಥೆಗಳಿಗೆ ಹೋಗಬೇಕಾಗಿಲ್ಲ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಲೈಸೆನ್ಸ್ ಪಡೆಯದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ 5000 ರೂಪಾಯಿ ದಂಡ ವಿಧಿಸಲು ನಿಯಮ ರೂಪಿಸಲಾಗಿದೆ. ಹಾಗೂ ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ದಂಡದ ಪ್ರಮಾಣ 4000 ರೂಪಾಯಿ ಆಗಿದೆ. ಒಂದೊಮ್ಮೆ ದಂಡ ವಿಧಿಸಿದ ಬಳಿಕ ಕೂಡ ಲೈಸೆನ್ಸ್ ಪಡೆಯದಿದ್ದರೆ ಪ್ರತಿನಿತ್ಯ ನೂರು ರೂಪಾಯಿ ಕಟ್ಟಬೇಕು.
ಇನ್ನೂ ಡಿಸೆಂಬರ್ ಅಂತ್ಯದೊಳಗೆ ಈ ಹೊಸ ನಿಯಮವನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟಾಗಿ 2 ಲಕ್ಷಕ್ಕೂ ಅಧಿಕ ಸಣ್ಣಪುಟ್ಟ ಅಂಗಡಿಗಳು ಇರಬಹುದು ಎಂದು ಅಂದಾಜು ಮಾಡಲಾಗಿದೆ. ಈಗಾಗಲೇ ತಮಿಳುನಾಡು, ಅರುಣಾಚಲಪ್ರದೇಶ, ಮೇಘಾಲಯ ರಾಜ್ಯಗಳಲ್ಲಿ ಟ್ರೇಡ್ ಲೈಸೆನ್ಸ್ ಜಾರಿಯಲ್ಲಿದೆ ಎನ್ನಲಾಗಿದೆ.