ಗಮನಿಸಿ : ಸರಕಾರಿ ನೌಕರರೇ ನಿಮಗೊಂದು ಮಹತ್ವದ ಮಾಹಿತಿ | ಈ ಪರೀಕ್ಷೆ ಪಾಸಾಗದಿದ್ದರೆ, ಹಲವು ಸೌಲಭ್ಯ ಕೊಕ್!

ಇಂದಿನ ದಿನಗಳಲ್ಲಿ ಹೆಚ್ಚಾಗಿ ಎಲ್ಲಾ ರೀತಿಯ ಕೆಲಸಕ್ಕೂ ತಂತ್ರಜ್ಞಾನದ ಮಾಹಿತಿ ಅಗತ್ಯವಾಗಿದೆ. ಎಲ್ಲಾ ಕ್ಷೇತ್ರಗಳು ಕೂಡ ಕಂಪ್ಯೂಟರ್ಮಯವಾಗಿದೆ. ಹಾಗಾಗಿ ಸರ್ಕಾರಿ ನೌಕರರು ಕಂಪ್ಯೂಟರ್ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು. ಇಲ್ಲವಾದಲ್ಲಿ ತಮಗೆ ಸಿಗುವ ಹಲವು ಸೌಲಭ್ಯಗಳಿಗೆ ಕುತ್ತು ಬರುವುದು ಖಂಡಿತ.

 

ರಾಜ್ಯ ಸರ್ಕಾರ, ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು ಎಂದು ಕಡ್ಡಾಯ ಮಾಡಿದೆ. ಆದರೆ ಈ ಬಗ್ಗೆ ಹಲವಾರು ಸರ್ಕಾರಿ ನೌಕರರು ನಿರ್ಲಕ್ಷ್ಯ ವಹಿಸಿದ್ದಾರೆ, ಸರ್ಕಾರದ ನಿಯಮವನ್ನು ಪಾಲನೆ ಮಾಡುತ್ತಿಲ್ಲ ಎಂದು ಹೇಳಲಾಗಿದೆ.

ಈ ಮೊದಲು 2021ರ ಅಂತ್ಯದವರೆಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆಂದು ಸುಮಾರು 2.55 ಲಕ್ಷ ಸರ್ಕಾರಿ ನೌಕರರು ನೋಂದಣಿ ಮಾಡಿಕೊಂಡಿದ್ದರು. ಆದರೆ ಇವರಲ್ಲಿ 2.46 ಲಕ್ಷ ನೌಕರರು ಮಾತ್ರ ಪರೀಕ್ಷೆ ಬರೆದಿದ್ದಾರೆ. ಹಾಗೂ 1.65 ಲಕ್ಷ ನೌಕರರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, 90 ಸಾವಿರಕ್ಕೂ ಅಧಿಕ ಮಂದಿ ಫೇಲ್ ಆಗಿದ್ದಾರೆ. ಇದಿಷ್ಟೇ ಅಲ್ಲದೆ, ಸುಮಾರು ಮೂರೂವರೆ ಲಕ್ಷಕ್ಕೂ ಅಧಿಕ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಬರೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಪರೀಕ್ಷೆ ಬರೆಯದ ಮತ್ತು ಫೇಲ್ ಆದ ನೌಕರರಿಗೆ ರಾಜ್ಯ ಸರ್ಕಾರವು ಕೊನೆಯ ಅವಕಾಶವನ್ನು ನೀಡಿದ್ದು, ಡಿಸೆಂಬರ್ 31ರ ಒಳಗೆ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕು. ಒಂದು ವೇಳೆ ಉತ್ತೀರ್ಣರಾಗದಿದ್ದರೆ ಅಂತಹ ನೌಕರರ ಮುಂಬಡ್ತಿ, ವಾರ್ಷಿಕ ವೇತನ ಬಡ್ತಿ ಸೇರಿದಂತೆ ಹಲವು ಸೌಲಭ್ಯಗಳು ಸಿಗುವುದಿಲ್ಲ ಎಂದು ತಿಳಿಸಲಾಗಿದೆ. ಹಾಗೂ ಕೆಲವು ಹುದ್ದೆಗಳನ್ನು ಹೊರತುಪಡಿಸಿ ಗ್ರೂಪ್ ಎ, ಬಿ, ಸಿ ಸೇವೆಯಲ್ಲಿರುವವರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯು ಕಡ್ಡಾಯವಾಗಿದೆ ಎನ್ನಲಾಗಿದೆ.

Leave A Reply

Your email address will not be published.