ದೊಡ್ಡ ಮಟ್ಟದಲ್ಲಿ ‘ ರೀಲು ‘ ಬಿಟ್ಟರೆ ದೈವಕ್ಕೆ ಬೇಜಾರಾಗಲ್ಲ, ಸಣ್ಣದಾಗಿ ‘ ರೀಲ್ಸು ‘ ಮಾಡೋರಿಗೆ ಮಾತ್ರ ಹೊಸ ರೂಲ್ಸು
ರಿಷಬ್ ಶೆಟ್ಟಿ ಲೆವೆಲ್ ಚೇಂಜ್ ಆಗಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಚಿತ್ರರಂಗದಲ್ಲಿ ಹೊಸ ದಾಖಲೆಗಳ ಸರಮಾಲೆಯನ್ನೇ ಬರೆದಿದೆ. ಈ ಚಿತ್ರ ಈಗಾಗಲೇ 400 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಗಳಿಕೆಯನ್ನು ಮಾಡಿದ್ದು, ವಿದೇಶಗಳಲ್ಲೂ ಕೂಡ ‘ಕಾಂತಾರ’ ಮೋಡಿ ಮಾಡಿದ್ದು, ಚಿತ್ರದ ಗಳಿಕೆ ಮುಂದುವರೆಯುತ್ತಲೇ ಇದೆ. ಇನ್ನೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮತ್ತಷ್ಟು ದಿನ, ಇನ್ನಷ್ಟು ಎತ್ತರಕ್ಕೆ ಸಿನೆಮಾ ಏರಲಿದೆ.
ಇದರ ಮಧ್ಯೆ ಕೆಲವರು ದೈವಾರಾಧನೆ ಕುರಿತು ರೀಲ್ಸ್ ಮಾಡಿದ್ದು, ಜೊತೆಗೆ ಇದರ ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದರು. ಇದೆಲ್ಲದರ ಕುರಿತು ಪ್ರತಿಕ್ರಿಯೆ ನೀಡಿದ್ದ ರಿಷಬ್ ಶೆಟ್ಟಿ, ದೈವಾರಾಧನೆ ರೀಲ್ಸ್ ಮಾಡುವುದು, ‘ಕಾಂತರಾ’ ಪಾತ್ರ ಅನುಸರಿಸುವುದು ಸರಿಯಲ್ಲ ಎಂದಿದ್ದರು. ದೈವವನ್ನು ರೀಲ್ಸು ಮಾಡೋದು ತಪ್ಪು ಅಂತ ಹೇಳಿದ್ದರು. ಈಗ ರಿಷಬ್ ಶೆಟ್ಟಿ ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡ ಬಹಳಷ್ಟು ನೆಟ್ಟಿಗರು ತಿರುಗಿ ಬಿದ್ದಿದ್ದಾರೆ.
” ಶೆಟ್ರೆ, ಇದು ಒಳ್ಳೆಯ ಸಂಗತಿ ಆಯ್ತಲ್ಲ ಮಾರ್ರೆ ನಿಮ್ಮದು ? ನಾವು ಮಾಡಿದ್ರೆ ದೈವಕ್ಕೆ ಅವಮಾನ ನೀವು ಮಾಡಿದ್ರೆ.ದೈವಕ್ಕೆ ಏನೂ ಬೇಜಾರಾಗಲ್ಲ – ಇದು ಒಳ್ಳೆ ತಮಾಷೆ ಉಂಟಲ್ಲ ” ಎಂದು ಮಂಗಳೂರಿನ ಭಾಷೆಯಲ್ಲಿ ಜನ ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವಾದರೆ ಅದನ್ನು ಮಾಡಬಹುದು. ಬೇರೆಯವರು ಮಾಡಬಾರದೇಕೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ ಕೆಲ ನೆಟ್ಟಿಗರು, ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಿ ಕೋಟಿಗಟ್ಟಲೆ ಹಣ ಗಳಿಸಿ. ಆದರೆ ಸಣ್ಣ ಪುಟ್ಟ ರೀಲ್ಸ್ ಮಾಡಬೇಡಿ ಎಂಬುದು ರಿಷಬ್ ಶೆಟ್ಟಿ ಅವರ ಮಾತಿನ ಅರ್ಥವೇ ಎಂದು ವ್ಯಂಗ್ಯವಾಡಿದ್ದಾರೆ.
ದೊಡ್ಡ ಮಟ್ಟದಲ್ಲಿ ‘ ರೀಲು ‘ ಬಿಟ್ಟರೆ ದೈವಕ್ಕೆ ಬೇಜಾರಾಗಲ್ಲ, ಬದಲಾಗಿ ಖುಷಿಯೇ ಆಗತ್ತೆ. ಸಣ್ಣದಾಗಿ ರೀಲ್ಸು ಮಾಡಿದರೆ ದೈವ ನೊಂದುಕೊಳ್ಳುತ್ತೆ. ‘ ರೀಲ್ಸು ನವರಿಗೆ ಮಾತ್ರ ಹೊಸ ರೂಲ್ಸು’ ಅಲ್ಲವೇ ಎಂದು ನೆಟ್ಟಗೆ ನೆತ್ತಿಗೆ ಹೊಡೆದಂತೆ ಮಾತಾಡಿದ್ದಾರೆ ನೆಟ್ಟಿಗರು.