ತಾನೇ ಸತ್ತಿದ್ದೇನೆಂದು ನಂಬಿಸಲು ಅಮಾಯಕ ಮಾಲ್ ನೌಕರಳ ಮರ್ಡರ್ ಮತ್ತು ಎಣ್ಣೆ ಎರಚಿ ಮುಖ ವಿರೂಪ | ಆ ಕೊಲೆ ಮಾಡಿದ್ದೇ ಮತ್ತೆ 4 ಬಲಿ ಬೀಳಿಸಲು !

ಭೀಕರ ಹತ್ಯೆಗಳು, ಅದನ್ನು ಮುಚ್ಚಿಡಲು ವಿಭಿನ್ನ ಪ್ರಯತ್ನಗಳನ್ನು ನಾವು ದಿನವೂ ಕಾಣುತ್ತಲೇ ಇದ್ದೇವೆ. ಶ್ರದ್ಧಾ ವಾಕರ್ ಪ್ರಕರಣ, ರಾಜ್ಯದಲ್ಲಿ ಕೂಡಾ ಅಂತದ್ದೇ ಅನೇಕ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಅಂಥಹದ್ದೇ ಒಂದು ಮರ್ಡರ್ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

 

ಮಹಿಳೆಯೊಬ್ಬಳು ತನ್ನ ಪ್ರೇಮಿಯೊಂದಿಗೆ ಅಮಾಯಕ ಹುಡುಗಿಯೊಬ್ಬಳನ್ನು ಹತ್ಯೆ ಮಾಡಿದ್ದಾಳೆ. ಆ ಹತ್ಯೆಗೆ ಕಾರಣ ಮಾತ್ರ ತುಂಬಾ ವಿಚಿತ್ರವಾಗಿದೆ. ಸಂಬಂಧಿಕರನ್ನು ಹತ್ಯೆ ಮಾಡಿ ಸೇಡು ತೀರಿಸಿಕೊಳ್ಳುವುದು ಈ ಮಹಿಳೆಯ ಉದ್ದೇಶವಾಗಿತ್ತು. ಆದರೆ ಇದಕ್ಕಾಗಿ ಆಕೆ ಆಯ್ಕೆ ಮಾಡಿಕೊಂಡಿದ್ದು ಖತರ್ನಾಕ್ ಐಡಿಯಾವನ್ನು !

ಆಕೆಯ ಪೋಷಕರು 5 ಲಕ್ಷ ರೂಪಾಯಿಗಳ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಪೋಷಕರ ಸಂಬಂಧಿಕರು ಒತ್ತಾಯ ಮಾಡಿದ್ದರು. ಆ ಸಾಲಗಾರರ ಒತ್ತಡದಲ್ಲಿ ಆಕೆಯ ಪೋಷಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಪೋಷಕರ ಸಾವಿಗೆ ಕಾರಣ ಆದ ನಾಲ್ಕ ಜನರ ಮೇಲೆ ಸೇಡು ತೀರಿಸಿಕೊಳ್ಳುವ ಆತುರ ಆ ಹುಡುಗಿಗೆ. ಅದಕ್ಕಾಗಿ ಮೊದಲು ತಾನು ಸಾಯಬೇಕು, ಸತ್ತು ಹೋದೆ ಅಂತ ಎಲ್ಲರಿಗೂ ಕನ್ಫರ್ಮ್ ಆದ ನಂತರ ಮತ್ತೆ ಬಂದು ತನ್ನ ಪೋಷಕರ ಸಾವಿಗೆ ಕಾರಣವಾದ ಎಲ್ಲ ಸಂಬಂಧಿಕರನ್ನು ಮುಗಿಸಬೇಕು ಎನ್ನುವುದು ಆಕೆಯ ಕಚ್ಛಾ ಪ್ಲಾನ್.

ಅದಕ್ಕಾಗಿ ಯೋಚಿಸುತ್ತಾ ಕೂತಿದ್ದ ಪಾಯಲ್ ತನ್ನ ಪ್ರೇಮಿಯೊಂದಿಗೆ ಸೇರಿದ ಗ್ರೇಟರ್ ನೋಯ್ಡಾದ ಮಾಲ್ ಒಂದಕ್ಕೆ ತೆರಳುತ್ತಾಳೆ. ಅಲ್ಲಿ ಅಕಸ್ಮಾತಾಗಿ ಆಕೆ ತನ್ನ ದೇಹವನ್ನೇ ಹೋಲುವ ಹೇಮಾ ಚೌಧರಿ ಎಂಬ ಮಹಿಳೆಯನ್ನು ಕಂಡಾಗ ಮನಸ್ಸಿನಲ್ಲಿ ಅದಾಗಲೇ ಇದ್ದ ಮರ್ಡರ್ ಪ್ಲಾನ್ ಹೊಸ ರೂಪ ಪಡೆದುಗೊಳ್ಳುತ್ತದೆ.

ಪಾಯಲ್ ಈ ವಿಚಾರವನ್ನು ಠಾಕೂರ್ ಚೌಧರಿಯೊಂದಿಗೆ ಹೇಳಿಕೊಳ್ಳುತ್ತಾಳೆ. ಆತ ಪ್ರಿಯಕರೆ ಪಾಯಲ್ ನ ಸಲಹೆಯಂತೆ ಸ್ನೇಹ ಸಂಪಾದಿಸಿ ಆಕೆಯನ್ನು ತನ್ನ ಪ್ರೇಯಸಿ ಪಾಯಲ್ ಭಾಟಿಯಳ ಮನೆಗೆ ಕರೆದುತಂದಿದ್ದ. ಅಲ್ಲಿ ಹೇಮಾ ಚೌಧರಿಯನ್ನು ಅವರಿಬ್ಬರೂ ಸೇರಿ ಕೊಂದು ಮುಗಿಸಿದ್ದಾರೆ. ಆಕೆಯನ್ನು ಹತ್ಯೆ ಮಾಡಿ ಕುದಿಯುವ ಎಣ್ಣೆಯನ್ನು ಆ ಮೃತ ದೇಹದ ಮೇಲೆ ಎರೆಚಿ ವಿರೂಪಗೊಳಿಸಿದ್ದಾಳೆ.

ನಂತರ ಆರೋಪಿ ಪಾಯಲ್ ಭಾಟಿಯ ಇರುವ ಮನೆಯಲ್ಲೇ ಈ ಮುಖ ವಿರೂಪಗೊಂಡ ವ್ಯಕ್ತಿಯ ಶವವೂ ಪತ್ತೆಯಾಗಿದೆ. ಈ ಶವದೊಂದಿಗೆ ಪಾಯಲ್ ಭಾಟಿಯಾ ತನ್ನ ಹೆಸರಿನಲ್ಲಿ ಡೆತ್ ನೋಟ್ ಸಿಕ್ಕಿದೆ.
” ಸುಡುತ್ತಿರುವ ಸಾಸಿವೆ ಎಣ್ಣೆ ಮೈ ಮೇಲೆ ಬಿದ್ದಿದ್ದು, ಅಚಾನಕ್ ಆಗಿ ಈ ಘಟನೆ ನಡೆದಿದೆ. ಮುಖ ವಿರೂಪಗೊಂಡ ಸ್ಥಿತಿಯಲ್ಲಿ ಈ ನನ್ನನ್ನು ಈ ಜಗತ್ತು ಸ್ವೀಕರಿಸುವುದಿಲ್ಲ. ಆದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ” ಎಂಬ ಸಹಿ ಹಾಕಿದ ಪತ್ರ ಸತ್ತ ಮಾಲ್ ನೌಕರಳ ಶವದ ಪಕ್ಕದಲ್ಲಿ ಸಿಕ್ಕಿದೆ. ಪಾಯಲ್ ಭಾಟಿಯಾ ಎಣ್ಣೆ ಚೆಲ್ಲಿದ ಕಾರಣ ನೊಂದು ಸತ್ತು ಹೋಗಿದ್ದಾಳೆ ಎಂದು ಆಕೆಯ ಕುಟುಂಬದವರು ಎಲ್ಲಾ ಸೇರಿಕೊಂಡು ಆಕೆಯ ಶವಸಂಸ್ಕಾರ ಮಾಡಿದ್ದಾರೆ.

ಅತ್ತ ಮೃತ 28 ವರ್ಷದ ಹೇಮ ಚೌಧರಿ ಏಕಾಏಕಿ ಮನೆಯಿಂದ ಕಾಣೆಯಾಗಿ ಹೋಗಿದ್ದಳು. ಆಕೆ ಮಾಲ್ ನೌಕರಳಾಗಿದ್ದಳು ಹಾಗೂ ತನ್ನ ಮಗುವಿನೊಂದಿಗೆ ಅಕ್ಕನ ಮನೆಯಲ್ಲಿ ಜೀವಿಸುತ್ತಿದ್ದಳು. ಹೇಮಾ ಚೌಧರಿ ನಾಪತ್ತೆಯಾಗಿ ಮೂರು ದಿನಗಳ ಬಳಿಕ ಆಕೆಯ ಕುಟುಂಬ ಸದಸ್ಯರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆಗ ತನಿಖೆಗೆ ಇಳಿದ ಪೊಲೀಸರು ಕೊನೆಯ ದಿನ ಹೇಮಾ ಚೌಧರಿ ಕೊನೆಯ ದಿನಗಳಲ್ಲಿ ಸಂಪರ್ಕಿಸಿದ ಜನರ ತನಿಖೆಗೆ ಇಳಿದಾಗ ಸತ್ಯ ಬಹಿರಂಗವಾಗಿದೆ. ಸಣ್ಣ ಮಗುವಿನ ಅಮಾಯಕ ತಾಯಿ ಒಬ್ಬಳನ್ನು, ಇನ್ನೊಂದು ಸೇಡಿಗಾಗಿ ಕೊಲೆ ಮಾಡಿದ ಪಾಯಲ್ ಭಾಟಿಯಾ ಮತ್ತು ಟಾಕೂರ್ ಎಂಬ ದೂರ್ಥರು ಬಲಿ ಹಾಕಿದ್ದರು.

Leave A Reply

Your email address will not be published.