ಸುಬ್ರಹ್ಮಣ್ಯ: ಪೊಲೀಸ್ ಸಿಬ್ಬಂದಿಯಿಂದ ಯುವಕನಿಗೆ ಹಲ್ಲೆ ಪ್ರಕರಣ | ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು
ಕಡಬ: ಸುಬ್ರಹ್ಮಣ್ಯ ಚಂಪಾಷಷ್ಠಿಯಂದು ವ್ಯಾಪಾರ ಮಾಡುತ್ತಿದ್ದ ಕಡಬದ ಯುವಕನೋರ್ವನಿಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯೋರ್ವರು ಹಣ ನೀಡುವಂತೆ ಒತ್ತಾಯಿಸಿ, ಯುವಕನನ್ನು ಪೋಲಿಸ್ ವಸತಿ ಗೃಹಕ್ಕೆ ಕರೆದೊಯ್ದು ಚಿತ್ರ ಹಿಂಸೆ ನೀಡಿದ್ದಾರೆಂಬ ಘಟನೆಗೆ ಸಂಬಂಧಿಸಿದಂತೆ ಇದೀಗ ಸುಬ್ರಹ್ಮಣ್ಯ ಠಾಣೆಯಲ್ಲಿ ಆರೋಪಿತ ಪೊಲೀಸ್ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ.
ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಬೀಮಗುಂಡಿ ಶಶಿಕಿರಣ್ (19) ಎಂಬ ಯುವಕ ದೂರು ನೀಡಿದಂತೆ, ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಬೀಮಣ್ಣ ಗೌಡ ಎಂಬವರ ವಿರುದ್ಧ ದೂರು ದಾಖಲಾಗಿದೆ.
ನ.28 ರಂದು ಪಂಚಮಿಯಂದು ಸುಬ್ರಹ್ಮಣ್ಯದಲ್ಲಿ ಅಂಗಡಿ ಇಟ್ಟು ವ್ಯಾಪಾರ ನಡೆಸುತ್ತಿದ್ದ ವೇಳೆ ರಾತ್ರಿ ಸುಮಾರು 11.30ರ ಸುಮಾರಿಗೆ ಸುಬ್ರಹ್ಮಣ್ಯ ಠಾಣೆಯ ಪೊಲೀಸ್ ಸಿಬ್ಬಂದಿ ಬೀಮಣ್ಣ ಗೌಡ ಎಂಬವರು ಸ್ಟಾಲ್ ಗೆ ಬಂದು 5000 ಹಣ ನೀಡುವಂತೆ ಹೇಳಿದ್ದು ಯಾಕೆ ನನಗೆ ಸ್ಟಾಲ್ ಹಾಕಲು ಇನ್ನೊಬ್ಬರು ಜಾಗ ನೀಡಿದ್ದು ಎಂದು ಹೇಳಿದಾಗ ನನ್ನನ್ನು ಗದರಿಸಿದಾಗ 1000 ನೀಡಿದ್ದು ಆನಂತರ ಇದು ಯಾಕೆ ನನಗೆ 5000 ಕೊಡು ಎಂದು ಅವಾಚ್ಯ ಶಬ್ದಗಳಿಂದ ಬೈದು ಸ್ಟಾಲ್ ನ ಸಾಮಾಗ್ರಿಗಳನ್ನು ಠಾಣೆಗೆ ಕೊಂಡೊಯ್ಯುವಂತೆ ತಿಳಿಸಿದ್ದು, ಅಲ್ಲಿದ್ದ ಕೆಲ ಮಂದಿಯೊಂದಿಗೆ ಸಾಮಾಗ್ರಿಗಳನ್ನು ತರಿಸಿದ್ದು, ಬಳಿಕ ದೂರುದಾರರನ್ನು ಪೊಲೀಸ್ ಕ್ವಾಟ್ರಾಸ್ ಗೆ ಕೊಂಡೊಯ್ದು ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡು ಸುಮಾರು 35 ಕಿಲೋ ಅಂದಾಜಿನ ಸಾಮಾಗ್ರಿಯನ್ನು ತಲೆಯಲ್ಲಿ ಇಟ್ಟು ಸುಮಾರು 35 ನಿಮಿಷ ಹೊತ್ತುಕೊಂಡು ಇರುವಂತೆ ಮಾಡಿ ಬಸ್ಕಿ ತೆಗೆಸಿ ದೂರುದಾರರ ಸೊಂಟಕ್ಕೆ ತುಳಿದು ಚಿತ್ರ ಹಿಂಸೆ ನೀಡಿ ಇನ್ನೂ ಎಲ್ಲಿಯಾದರು ವ್ಯಾಪಾರ ಮಾಡಿದರೆ ನಿನ್ನ ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಬಿಟ್ಟಿರುತ್ತಾರೆ. ಬಳಿಕ ಅಸ್ವಸ್ಥಗೊಂಡು ಮನೆಗೆ ಬಂದಿದ್ದು ಬಳಿಕ ಆರೋಗ್ಯದಲ್ಲಿ ಏರು ಪರಾಗಿದ್ದು ನವೆಂಬರ್ 30 ರಂದು ಕಡಬ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ. ಮೊದಲು ಪೊಲೀಸರ ಭಯದಿಂದ ದೂರು ನೀಡಲು ಹಿಂದೇಟು ಹಾಕಿದ್ದು ಇದೀಗ ಸ್ನೇಹಿತರ ಸಲಹೆಯಂತೆ ದೂರು ನೀಡುತ್ತಿರುವುದಾಗಿದೆ ಎಂದು ಶಶಿಕಿರಣ್ ಸುಬ್ರಹ್ಮಣ್ಯ ಠಾಣೆಗೆ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಬೀಮಣ್ಣ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.