ಕಿವಿಗಳನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸುವುದು ಹೇಗೆ?

ಪಂಚೇಂದ್ರಿಯಗಳಲ್ಲೊಂದಾದ ಕಿವಿಯ ಮೂಲಕ ಮತ್ತೊಬ್ಬರ ಮಾತನ್ನು ಆಲಿಸುತ್ತೇವೆ. ಶ್ರವಣ ಸಾಮರ್ಥ್ಯ ಚುರುಕಾಗಿರಲು ಕಿವಿಯ ಆರೋಗ್ಯವನ್ನು ತುಂಬಾ ಚೆನ್ನಾಗಿಟ್ಟುಕೊಳ್ಳಬೇಕು. ಕಿವಿಯ ತಮಟೆಯು ಸೂಕ್ಷ್ಮವಾಗಿರುವುದರಿಂದ ಕಿವಿಯನ್ನು ಸ್ವಚ್ಛ ಮಾಡುವಾಗ ಯಾವುದೇ ಚೂಪಾದ ವಸ್ತುಗಳಾದ ಪೆನ್, ಹೇರ್ ಪಿನ್‌ಗಳು, ಪೇಪರ್ ಕ್ಲಿಪ್‌ಗಳು ಅಥವಾ ಟೂತ್‌ಪಿಕ್‌ಗಳ ಬಳಕೆಯಿಂದ ತೊಂದರೆ ಉಂಟಾಗುತ್ತದೆ. ಹೆಚ್ಚಿನವರು ಇಯರ್ ಬಡ್ ಬಳಸಿ ಕಿವಿಗಳನ್ನು ಸ್ವಚ್ಛಗೊಳಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸುರಕ್ಷಿತ? ಇದರಿಂದಲೂ ಏನಾದರೂ ತೊಂದರೆ ಉಂಟಾಗುತ್ತದೆಯೇ? ಈ ಎಲ್ಲಾ ವಿಚಾರವನ್ನು ನಾವಿಂದು ತಿಳಿಸಿಕೊಡುತ್ತೇವೆ.

ವೈದ್ಯರ ಪ್ರಕಾರ, ಕಿವಿಯನ್ನು ಸ್ವಚ್ಛಗೊಳಿಸಲು ಇಯರ್‌ಬಡ್ ಅನ್ನು ಬಳಸುವ ತಂತ್ರ ಕೆಲವೊಮ್ಮೆ ತೊಂದರೆಯನ್ನುಂಟು ಮಾಡಬಹುದು. ಹೀಗೆ ಮಾಡುವುದರಿಂದ ಕಿವಿ ಮತ್ತು ಶ್ರವಣ ಸಾಮರ್ಥ್ಯಕ್ಕೆ ಶಾಶ್ವತ ಹಾನಿ ಉಂಟಾಗುವ ಸಾಧ್ಯತೆಯೂ ಇದೆ.

ಪ್ರತಿಯೊಬ್ಬರೂ ಕಿವಿಯ ಮೇಣವನ್ನು ತೆಗೆದುಹಾಕುವ ಅಗತ್ಯವಿಲ್ಲ. ಆದರೂ, ಇದು ಕಿವಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುವುದರಿಂದ ಕಿವಿನೋವು, ಸೋಂಕಿನ ಅಪಾಯ, ತಾತ್ಕಾಲಿಕ ಶ್ರವಣ ನಷ್ಟ ಮತ್ತು ಆಘಾತಕಾರಿ ಸಾಮಾಜಿಕ ಪ್ರತ್ಯೇಕತೆ ಮತ್ತು ಖಿನ್ನತೆಗೂ ಕಾರಣವಾಗಬಹುದು. ಹೀಗಾಗಿ ಇಂಥಾ ಆರೋಗ್ಯ ಸಮಸ್ಯೆಗಳು ಬರದಂತೆ ಮೊದಲೇ ಕಿವಿಯನ್ನು ಸ್ವಚ್ಛಗೊಳಿಸೋ ಅಭ್ಯಾಸ ಒಳ್ಳೆಯದು. ಮನೆಯಲ್ಲೇ ಸುಲಭವಾಗಿ ಕಿವಿಯನ್ನು ಕ್ಲೀನ್ ಮಾಡಬಹುದು.

ಎರಡರಿಂದ ಮೂರು ಹನಿ ಬಾದಾಮಿ ಎಣ್ಣೆಯನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ 3-5 ದಿನಗಳ ವರೆಗೆ ಕಿವಿಗೆ ಹಾಕಿಕೊಳ್ಳಿ. ಕಿವಿ ಕಾಲುವೆಯ ಮೂಲಕ ತೈಲವು ಕೆಲಸ ಮಾಡಲು ಕೆಲವು ನಿಮಿಷಗಳ ಕಾಲ ಒಂದು ಬದಿಯಲ್ಲಿ ತಲೆಯನ್ನು ಹಾಕಿ ಮಲಗಿ. ಅದೇ ರೀತಿ ವೈದ್ಯರು ಡ್ರಾಪರ್ ಅನ್ನು ಬಳಸಲು ಸಲಹೆ ನೀಡುತ್ತಾರೆ. ಸುಮಾರು ಎರಡು ವಾರಗಳಲ್ಲಿ, ಕಿವಿ ಮೇಣದ ಉಂಡೆಗಳು ಕಿವಿಯಿಂದ ಬೀಳುತ್ತವೆ. ಹೆಚ್ಚಾಗಿ ರಾತ್ರಿಯಲ್ಲಿ ನಿದ್ದೆ ಮಾಡುವಾಗ ಕಿವಿ ಕ್ಲೀನ್ ಆಗಿ ಬಿಡುತ್ತದೆ.

ಕೇವಲ ಕಿವಿಯ ಮೇಣದ ಶುಚಿಗೊಳಿಸುವ ಸೆಷನ್‌ಗಾಗಿ ವೈದ್ಯರನ್ನು ಭೇಟಿ ಮಾಡುವುದು ಯಾವಾಗಲೂ ಉತ್ತಮ ಆಯ್ಕೆಯಲ್ಲ. ಇದು ಕೆಲವೊಮ್ಮೆ ದುಂದುವೆಚ್ಚಕ್ಕೂ ಕಾರಣವಾಗಬಹುದು. ಆ ಸಂದರ್ಭದಲ್ಲಿ, ಮೇಲಿನ ಸರಳ ಪರಿಹಾರಗಳು ಯಾವುದೇ ಸಮಯದಲ್ಲಿ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ.

ಮನೆಯಲ್ಲಿ ಇಯರ್ ವ್ಯಾಕ್ಸ್‌ನ್ನು ಸ್ವಚ್ಛಗೊಳಿಸುವಾಗ ಹೆಚ್ಚಿನವರು ತಪ್ಪುಗಳನ್ನು ಮಾಡುತ್ತಾರೆ. ಚೂಪಾದ ವಸ್ತುಗಳಾದ ಹೇರ್‌ಕ್ಲಿಪ್‌, ಸೀರೆ ಪಿನ್‌ಗಳನ್ನೆಲ್ಲಾ ಕಿವಿಯೊಳಗೆ ಹಾಕಿ ಕ್ಲೀನ್ ಮಾಡಲು ಯತ್ನಿಸುತ್ತಾರೆ. ಇದು ಕಿವಿಯಲ್ಲಿ ಗಾಯಗಳನ್ನು ಉಂಟು ಮಾಡಬಹುದು. ಇಯರ್ ಕ್ಯಾಂಡಲ್ ಅಥವಾ ಇಯರ್ ವ್ಯಾಕ್ಯೂಮ್‌ಗಳನ್ನು ಬಳಸುವುದು ಸಹ ಅಷ್ಟು ಒಳ್ಳೆಯದಲ್ಲ. ಇಎನ್‌ಟಿ ಸ್ಪೆಷಲಿಸ್ಟ್ ಹೇಳುವಂತೆ ನಮ್ಮ ದೇಹದ ಇತರ ಅಂಗಾಂಗಳಂತೆ ಕಿವಿಯೂ ಸ್ವತಃ ಸ್ವಚ್ಛವಾಗುವ ಪ್ರವೃತ್ತಿಯನ್ನು ಹೊಂದಿರುತ್ತೆ. ಹೀಗಾಗಿ ಕಿವಿಯನ್ನು ಆಗಾಗ ಸ್ವಚ್ಛಗೊಳಿಸುವ ಅವಶ್ಯಕವಿಲ್ಲ.

Leave A Reply

Your email address will not be published.