ಟೊಮೆಟೊ, ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತ| ಕಂಗಾಲಾದ ರೈತರು
ತರಕಾರಿಗಳ ಬೆಲೆಯಲ್ಲಿ ಪ್ರತೀದಿನ ಬದಲಾವಣೆ ಆಗುತ್ತಿರುತ್ತದೆ. ಒಮ್ಮೆ ಗಗನಕ್ಕೇರಿದರೆ ಮತ್ತೊಮ್ಮೆ ಭೂಮಿಗಿಳಿಯುತ್ತದೆ. ಹಾಗೆಯೇ ಇದೀಗ ಟೊಮೆಟೊ ಮತ್ತು ಈರುಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ.
ಇದರ ಇಳಿತದಿಂದ ರೈತರು ಕಂಗಾಲಾಗಿದ್ದಾರೆ. ಈ ಬಾರಿ ಒಳ್ಳೆಯ ಫಸಲು ಬಂದಿರುವುದೇ ಬೆಲೆ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.
ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಷ್ಟಪಟ್ಟು ಬೆಳೆದ ತರಕಾರಿಗಳಿಗೆ ಸರಿಯಾದ ಬೆಲೆ ಇಲ್ಲಾ ಎಂದಾಗ ರೈತರು ಚಿಂತೆಗೀಡಾಗಿದ್ದಾರೆ.
ಹಾಗಾಗಿ ರಾಜ್ಯ ಸರ್ಕಾರ ರೈತರ ಹಿತಕ್ಕಾಗಿ, ಅವರ ಸಂಕಷ್ಟ ಪರಿಹರಿಸಲು ಈರುಳ್ಳಿ, ಟೊಮೆಟೊ ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ಹಣ್ಣು ತರಕಾರಿ ಬೆಳೆಗಾರರ ಹೋರಾಟ ಸಮಿತಿ ಆಗ್ರಹಿಸಿದೆ.
ಎಪಿಎಂಸಿ ಮೂಲಗಳ ಪ್ರಕಾರ, ಟೊಮೆಟೊ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ ಗೆ 5 ರಿಂದ 6 ರೂಪಾಯಿಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರಾಟದಲ್ಲಿ 8 ರಿಂದ 12 ರೂಪಾಯಿಗೆ ಸಿಗುತ್ತಿದೆ. ಉತ್ತಮ ಗುಣಮಟ್ಟ 15 ಕೆ.ಜಿ. ತೂಗುವ ಬಾಕ್ಸ್ ಟೊಮೆಟೊ ಹರಾಜಿನಲ್ಲಿ 200 ರೂಪಾಯಿ ಸಿಕ್ಕರೆ ಗುಣಮಟ್ಟವಿಲ್ಲದ ಬಾಕ್ಸ್ ಟೊಮೆಟೊ ಕೇವಲ 50 ರೂಪಾಯಿಗೆ ಮಾರಾಟವಾಗುತ್ತಿದೆ.
ಹಾಗೂ ಕೆಲವು ದಿನಗಳ ಹಿಂದೆ ಈರುಳ್ಳಿ ಬೆಲೆ ಕೆ.ಜಿಗೆ 2 ರೂ. ನಿಂದ 10 ರೂ.ಗೆ ಕುಸಿದಿತ್ತು. ಆದರೆ, ಈಗ ಉತ್ಪನ್ನದ ಗುಣಮಟ್ಟಕ್ಕೆ ಅನುಗುಣವಾಗಿ ಪ್ರತಿ ಕೆ.ಜಿಗೆ 12 ರೂ. 18 ರೂ.ವರೆಗೆ ವರೆಗೆ ಸಿಗುತ್ತಿದೆ.