ಪಾರಿವಾಳವನ್ನು ಹಿಡಿಯಲು ಹೋಗಿ ಮಕ್ಕಳಿಬ್ಬರಿಗೆ ವಿದ್ಯುತ್ ಶಾಕ್ : ಸ್ಥಿತಿ ಗಂಭೀರ
ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಹೈಟೆನ್ಷನ್ ಲೈನ್ ಮೇಲೆ ಕುಳಿತಿದ್ದ ಪಾರಿವಾಳವನ್ನು ಹಿಡಿಯಲು ಹೋಗಿ ಇಬ್ಬರು ಮಕ್ಕಳಿಗೆ ಕರೆಂಟ್ ಶಾಕ್ ತಗುಲಿ ಸಾವು ಬದುಕಿನ ನಡುವೆ ಮಕ್ಕಳು ಹೋರಾಡುತ್ತಿರುವ ಘಟನೆ ನಡೆದಿದೆ.
ವಿಜಯನಾಂದನಗರದ ಚಂದ್ರು ಹಾಗೂ ಸುಪ್ರೀತ್ ಗುರುವಾರ ಸಂಜೆ ಶಾಲೆ ಮುಗಿಸಿಕೊಂಡು ಬಂದಿದ್ದ ವೇಳೆ ದುರ್ಘಟನೆ ನಡೆದಿದೆ. ಮನೆ ಮಾಲೀಕರು ಮಹಡಿಯನ್ನು ಹತ್ತಬೇಡಿ ಎಂಬ ಎಚ್ಚರಿಕೆಯನ್ನು ನೀಡಿದ್ದರೂ ಕೂಡಾ ಮಕ್ಕಳು ಪಾರಿವಾಳದ ಆಸೆಗೆ ಮನೆ ಮೇಲೆ ಹತ್ತಿದ್ದಾರೆ. ಈ ವೇಳೆ ಮಕ್ಕಳು ಕಬ್ಬಿಣದ ರಾಡ್‌ನಿಂದ ಹೈಟೆನ್ಷನ್ ವೈರ್ ಅನ್ನು ಮುಟ್ಟಿದ್ದಾರೆ. ಈ ವೇಳೆ ಮಕ್ಕಳಿಗೆ ಕರೆಂಟ್ ಶಾಕ್ ತಗುಲಿದೆ.
ಮಕ್ಕಳಿಗೆ ಕರೆಂಟ್ ಶಾಕ್ ತಗುಲುವ ವೇಳೆ ಅದರ ತೀವ್ರತೆ ಎಷ್ಟಿತ್ತು ಎಂದರೆ, ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳೆಲ್ಲವೂ ಬ್ಲಾಸ್ಟ್ ಆಗಿವೆ. ಇಬ್ಬರು ಬಾಲಕರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಬ್ಬರ ಸ್ಥಿತಿ ಗಂಭೀರವಾಗಿದೆ. ಸುಪ್ರೀತ್‌ಗೆ ಕರೆಂಟ್ ಶಾಕ್‌ನಿಂದಾಗಿ ದೇಹದಲ್ಲಿ ಶೇ.70 ರಷ್ಟು ಸುಟ್ಟ ಗಾಯಗಳಾಗಿವೆ. ಚಂದ್ರುಗೆ ಶೇ.90 ರಷ್ಟು ಗಾಯಗಳಾಗಿವೆ.
ಬಾಲಕರಿಬ್ಬರಿಗೂ ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಬಾಲಕರ ಪೋಷಕರು ತಾವು ಕೂಲಿ ಕೆಲಸಗಾರರು, ನಾವು ಬಡವರು. ನಮ್ಮ ಮಕ್ಕಳು ಉಳಿದರೆ ಸಾಕು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.