ಇದೇನು? ಕರೆಯದೆ ಮದುವೆಗೆ ಹೋದ ವಿದ್ಯಾರ್ಥಿ | ಸಿಕ್ಕಾಕೊಂಡಾಗ ಕೊಟ್ಟ ಶಿಕ್ಷೆ ಏನು?
ಓದಿನ ಸಲುವಾಗಿ ಬೇರೆ ಊರಿಗೆ ಹೋಗಿ ವ್ಯಾಸಂಗ ಮಾಡುವವರ ಪಾಡು ಹೇಳತೀರದು!! ಕೆಲವೊಮ್ಮೆ ಮನೆಯ ಅಡಿಗೆಯ ನೆನಪಾದರೆ, ಮತ್ತೆ ಕೆಲವೊಮ್ಮೆ ಮನೆಗೆ ಹೋಗಲು ಸಾಧ್ಯವಾಗದೆ ಇದ್ದಾಗ ಹಾಸ್ಟೆಲ್ ಊಟ ಮಾಡಿ ಬೇಸತ್ತು ಹೊರಗೆಲ್ಲದರು ಸಮಾರಂಭ ಇದೆ ಎಂದು ತಿಳಿದರೆ ಸಾಕು ಆಗುವ ಸಂತೋಷ ಅಷ್ಟಿಷ್ಟಲ್ಲ!!!
ಅದರಲ್ಲೂ ಕೂಡ ಮದುವೆಯ ಸಮಾರಂಭ ಎಂದ ಮೇಲೆ ಅಲ್ಲಿ ಭೂರಿ ಭೋಜನ ಕಂಡಾಗ ಎಂತಹವರ ಬಾಯಲ್ಲಿ ಸಹ ನೀರೂರಿಸುತ್ತದೆ. ಸಾಮಾನ್ಯವಾಗಿ ಸಮಾರಂಭ ಎಂದ ಮೇಲೆ ಕರೆಯದೆ ಬಂದವರನ್ನು ಕೂಡ ಆದರದಿಂದ ಕೂಡ ಅತಿಥಿಯಂತೆ ನೋಡುವುದು ಕ್ರಮ .. ಆದರೆ, ಇದಕ್ಕೆ ತದ್ವಿರುದ್ಧವಾಗಿ ಘಟನೆಯೊಂದು ನಡೆದಿದ್ದು, ಮನುಷ್ಯರ ಮಾನವೀಯತೆಯ ಪ್ರಶ್ನಿಸುವ ಸನ್ನಿವೇಶ ನಡೆದಿದೆ.
ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ನಡೆದಿರುವ ಘಟನೆಯೊಂದು ಮಾನವೀಯತೆಯೇ ಇಲ್ಲದಂತೆ ವರ್ತಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೌದು!! ಎಂಬಿಎ ವಿದ್ಯಾರ್ಥಿಯೊಬ್ಬ ಕರೆಯದೆ ಬಂದು ಮದುವೆ ಮನೆಯಲ್ಲಿ ಊಟ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಆತನನ್ನು ಹಿಡಿದು ಪಾತ್ರೆ ತೊಳೆಸಿ ಅಮಾನವೀಯವಾಗಿ ವರ್ತನೆ ತೋರಿದ ಘಟನೆ ನಡೆದಿದೆ.
ಅಷ್ಟೇ ಅಲ್ಲದೇ, ಇದರ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದು, ನೆಟ್ಟಿಗರು ಈ ವೀಡಿಯೋ ನೋಡಿ ಅಚ್ಚರಿ ಪಟ್ಟಿದ್ದಾರೆ.
ಜಬಲ್ಪುರ ಮೂಲದ ವಿದ್ಯಾರ್ಥಿಯೋರ್ವ ಭೋಪಾಲ್ ನ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಅಲ್ಲೆ ಸನಿಹದಲ್ಲಿ ನಡೆಯುತ್ತಿದ್ದ ಮದುವೆ ಮನೆಗೆ ಹೋಗಿ ಊಟ ಮಾಡಿದ್ದು, ಇದನ್ನು ಗಮನಿಸಿ ಯಾರ ಕಡೆಯವನು ಎಂಬುದನ್ನು ಅನ್ವೇಷಣೆ ನಡೆಸಿದ್ದಾರೆ.
ಅಷ್ಟೆ ಅಲ್ಲದೆ, ಈತ ಹೆಣ್ಣಿನ ಅಥವಾ ಗಂಡಿನ ಕುಟುಂಬಕ್ಕೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಎಂಬುದು ಖಾತ್ರಿಯಾದ ಬಳಿಕ, ಕೆಲವರು ಆತನನ್ನು ಹಿಡಿದು ಪಾತ್ರೆ ತೊಳೆಯುವ ಶಿಕ್ಷೆ ನೀಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಆ ವಿದ್ಯಾರ್ಥಿ ತಾನು ಈ ಮದುವೆ ಮನೆಯಲ್ಲಿ ಬಿಟ್ಟಿಯಾಗಿ ಬಂದು ಊಟ ಮಾಡಬಾರದು ಎಂದು ಏನಾದರೂ ಕೆಲಸ ಮಾಡಬೇಕೆಂಬ ಕಾರಣಕ್ಕೆ ಪಾತ್ರೆ ತೊಳೆದಿರುವುದಾಗಿ ಹೇಳಿಕೊಂಡಿದ್ದು, ಆದರೆ, ಇದು ಕೂಡ ಬಲವಂತವಾಗಿ ಹೇಳಿಸಿದಂತೆ ತೋರುತ್ತಿದೆ..ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೆಣ್ಣು – ಗಂಡಿನ ಕುಟುಂಬಕ್ಕೆ ಛೀಮಾರಿ ಹಾಕುತ್ತಿದ್ದು, ಮದುವೆಯ ಸಮಾರಂಭದಲ್ಲಿ ಅಮಾನವೀಯ ನಡೆದುಕೊಂಡ ಜನರ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.