ಹಣಕ್ಕಾಗಿ ಮಡದಿಯನ್ನೇ ಕೊಲೆಗೈದ ಭೂಪ!! ಕೊಲೆಯನ್ನು ಅಪಘಾತ ಎಂದು ಬಿಂಬಿಸಿದ ಮಹಾಶಯ
ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಅನ್ನೋ ಮಾತು ನೀವು ಖಂಡಿತ ಕೇಳಿರುತ್ತಿರಿ!! ಕುರುಡು ಕಾಂಚಾಣ ಏನು ಬೇಕಾದರೂ ಮಾಡಿಸಿ ಬಿಡುತ್ತೆ!! ಇದ್ದವರನ್ನ ಸಾಯಿಸಿ… ಇಲ್ಲದವರ ಸೃಷ್ಟಿಸಿ ಹಣ ವಸೂಲಿ ಮಾಡಲು ಜನ ಮಾಡುವ ನಾಟಕಗಳಿಗೇನೂ ಕಡಿಮೆಯಿಲ್ಲ!! ಇದೇ ರೀತಿಯ ಪ್ರಕರಣವೊಂದು ನಡೆದಿದ್ದು, ಹಣದ ಹಿಂದೆ ಬಿದ್ದ ಭೂಪ ತನ್ನ ಹೆಂಡತಿಯನ್ನೇ ಕೊಂದಿರುವ ವಿಚಿತ್ರ ಘಟನೆಯೊಂದು ಮುನ್ನಲೆಗೆ ಬಂದಿದೆ.
ರಾಜಸ್ಥಾನದಲ್ಲಿ 1.90 ಕೋಟಿ ರೂ. ಮೊತ್ತದ ವಿಮಾ ಮೊತ್ತವನ್ನು ಪಡೆಯಲು ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.ಶಾಲು 2015 ರಲ್ಲಿ ಚಂದ್ ಅವರನ್ನು ಮದುವೆಯಾಗಿದ್ದು, ಇಬ್ಬರಿಗೆ ಒಂದು ಹೆಣ್ಣು ಮಗು ಕೂಡ ಇದೆ. ಆದರೆ ಮದುವೆಯಾದ ಎರಡು ವರ್ಷಗಳ ಬಳಿಕ ಇವರಿಬ್ಬರ ನಡುವೆ ಬಿರುಕು ಮೂಡಿದ್ದು, ಆಗಾಗ ಜಗಳಗಳು ನಡೆಯುತ್ತಿತ್ತು. ಈ ಬಳಿಕ, ಶಾಲು ತನ್ನ ತವರು ಮನೆಯಲ್ಲಿ ಜೀವಿಸಲು ಆರಂಭಿಸಿದ್ದಾಳೆ.
ಈ ನಡುವೆ ಆಕೆ ತನ್ನ ಪತಿಯ ಮೇಲೆ 2019ರಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಾಳೆ. ಚಂದ್ ಇತ್ತೀಚೆಗೆ ಶಾಲುಗೆ ವಿಮೆ ಮಾಡಿಸಿದ್ದು, ಆ ಬಳಿಕ ಹಣದ ವ್ಯಾಮೋಹ ಬೆಳೆದಿದ್ದು, ಅದನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಯಾರ ಬಳಿಯೂ ಹೇಳಿಕೊಳ್ಳದೆ ಆಕೆಗೆ ಮೋಟಾರ್ ಸೈಕಲ್‌ನಲ್ಲಿ ಸತತ 11 ದಿನಗಳ ಕಾಲ ಹನುಮಾನ್ ದೇವಸ್ಥಾನಕ್ಕೆ ಹೋಗಬೇಕು ಎಂದು ಹೇಳಿ ತಾನು ಅಂದುಕೊಂಡ ಆಸೆ ಈಡೇರಿದ ನಂತರ ನಮಗೆ ಮನೆ ಸಿಗುತ್ತದೆ ಎಂದೂ ಹೇಳಿದ್ದಾನೆ. ಇದಾದ ಮೇಲೆ ಆಕೆ ತನ್ನ ಸೋದರಸಂಬಂಧಿಯೊಂದಿಗೆ ಮೋಟಾರು ಸೈಕಲ್‌ನಲ್ಲಿ ದೇವಸ್ಥಾನಕ್ಕೆ ಹೋಗಲಾರಂಭಿಸಿದ್ದಾಳೆ ಎನ್ನಲಾಗಿದೆ.
ಅಕ್ಟೋಬರ್ 5 ರಂದು ಶಾಲು ತನ್ನ ಪತಿ ಮಹೇಶ್ ಚಂದ್ ಅವರ ಮನವಿಯಂತೆ ಅಕ್ಟೋಬರ್ 5 ರಂದು ತನ್ನ ಸೋದರಸಂಬಂಧಿ ರಾಜು ಅವರೊಂದಿಗೆ ಬೈಕ್‌ನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಬೆಳಿಗ್ಗೆ 4.45 ರ ಸುಮಾರಿಗೆ ಇವರ ಬೈಕ್‌ಗೆ ಎಸ್‌ಯುವಿ ಡಿಕ್ಕಿ ಹೊಡೆದಿದ್ದು, ಈ ಭೀಕರ ಅವಘಡಕ್ಕೆ ಶಾಲು ಸ್ಥಳದಲ್ಲೇ ಸಾವಿನ ದವಡೆಗೆ ಸಿಲುಕಿದ್ದು, ಆಕೆಯ ಸೋದರ ಸಂಬಂಧಿ ಚಿಕಿತ್ಸೆ ವೇಳೆ ಮೃತ ಪಟ್ಟಿದ್ದಾರೆ.
ನೋಡಿದವರಿಗೆ ರಸ್ತೆ ಅಪಘಾತದಂತೆ ಕಂಡುಬಂದಿದ್ದು, ಮೃತಳ ಕುಟುಂಬಸ್ಥರು ಮಾತ್ರ ಅನುಮಾನಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆ ಸಂದರ್ಭ ಚಂದ್ ತನ್ನ ಪತ್ನಿಯ ವಿಮೆ ಹಣಕ್ಕಾಗಿ ಕೊಲೆ ಸಂಚು ರೂಪಿಸಿದ್ದ ಎಂಬ ಸತ್ಯ ಬಯಲಾಗಿದೆ.
ಹೀಗಾಗಿ, ಚಂದ್ ಇತರರೊಂದಿಗೆ ಸೇರಿ ಶಾಲು ಪ್ರಯಾಣಿಸುತ್ತಿದ್ದ ಬೈಕ್‌ಗೆ ಕಾರಿನಿಂದ ಗುದ್ದಿಸಿ ಕೊಲೆ ಮಾಡಿಸಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಚಂದ್ 40 ವರ್ಷಗಳ ಅವಧಿಗೆ ಶಾಲುಗೆ ಮಾಡಿಸಿದ್ದ ವಿಮೆಯನ್ನು ಪಡೆಯುವ ಸಲುವಾಗಿ ಈ ಕೃತ್ಯ ಎಸಗಿದ್ದಾರೆ. ವಿಮಾ ಮೊತ್ತವು ಸಹಜ ಸಾವಿನಲ್ಲಿ ₹ 1 ಕೋಟಿ ಮತ್ತು ಅಪಘಾತದಲ್ಲಿ ಮರಣ ಹೊಂದಿದಲ್ಲಿ ₹ 1.90 ಕೋಟಿ ಬರುತ್ತದೆ ಎಂದು ತಿಳಿದು ಹಣ ವಸೂಲಿ ಮಾಡುವ ಸಲುವಾಗಿ ಈ ಕೃತ್ಯ ಎಸಗಿದ್ದಾರೆ.
ಅಕ್ಟೋಬರ್ 5 ರಂದು ಶಾಲು ಮತ್ತು ರಾಜು ದೇವಸ್ಥಾನಕ್ಕೆ ಹೋಗುತ್ತಿದ್ದಾಗ, ರಾಥೋಡ್ ಇತರ ಮೂವರೊಂದಿಗೆ ಎಸ್‌ಯುವಿಯಲ್ಲಿ ಅವರನ್ನು ಹಿಂಬಾಲಿಸಿ ಅವರ ಮೋಟಾರ್‌ಸೈಕಲ್‌ಗೆ ಎಸ್‌ಯುವಿಯನ್ನು ಡಿಕ್ಕಿ ಹೊಡೆಸಿ ಕೊಂದಿದ್ದಾರೆ.
ಶಾಲುವನ್ನು ಕೊಲ್ಲಲು ಚಾಂದ್ ಮುಖೇಶ್ ಸಿಂಗ್ ರಾಥೋಡ್ ಎಂಬಾತನಿಗೆ ಗುತ್ತಿಗೆ ನೀಡಿದ್ದು, ಈ ಕೆಲಸಕ್ಕೆ ರಾಥೋಡ್ 10 ಲಕ್ಷ ರೂ. ಬೇಡಿಕೆ ಇಟ್ಟಿದ್ದಾನೆ. ಅಲ್ಲದೆ, 5.5 ಲಕ್ಷ ರೂ. ಮುಂಗಡ ಹಣ ಕೂಡ ನೀಡಿದ್ದ ಎನ್ನಲಾಗಿದೆ. ಈ ಕಾರ್ಯಕ್ಕೆ ರಾಥೋಡ್ ಇತರರನ್ನು ತೊಡಗಿಸಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ .