ಮಗಳ ಮದುವೆಗೆಂದು ತಂದ ಕೋಟಿ ದುಡ್ಡು, ಕ್ಯಾಬ್ ನಲ್ಲಿ ಮರೆತ ತಂದೆ | ಮುಂದೇನಾಯ್ತು?
ಮನುಷ್ಯನಿಗೆ ಎಲ್ಲಾ ಪ್ರಾವೀಣ್ಯತೆ ಇದ್ದರೂ ಸಹ ಮರೆವು ಅನ್ನೋದು ಜೊತೆಗೆ ಇದ್ದೇ ಇರುತ್ತೆ. ಮರೆವು ಕೆಲವೊಮ್ಮೆ ನಮ್ಮ ಜೀವನದಲ್ಲಿ ಒಳ್ಳೆಯದನ್ನೇ ಮಾಡುತ್ತದೆ. ಆದರೆ ಕೆಲವೊಮ್ಮೆ ಮಾತ್ರ ಊಹಿಸಲಾರದ ಘಟನೆ ನಡೆದು ಹೋಗುತ್ತದೆ.
ಇಲ್ಲೊಬ್ಬ ವ್ಯಕ್ತಿ ಮಗಳ ಮದುವೆ ಹಿನ್ನೆಲೆಯಲ್ಲಿ ಬ್ರಿಟನ್ ನಿಂದ ದೆಹಲಿಗೆ ಆಗಮಿಸಿದ್ದ ಅನಿವಾಸಿ ಭಾರತೀಯರೊಬ್ಬರು ಕ್ಯಾಬ್ ನಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮರೆತು ಬಿಟ್ಟು ಹೋಗಿರುವ ಘಟನೆ ಗುರುವಾರ ಡಿಸೆಂಬರ್ 01 ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ನಿಖಿಲೇಶ್ ಕುಮಾರ್ ಸಿನ್ಹಾ ತಮ್ಮ ಕುಟುಂಬದೊಂದಿಗೆ ಲಂಡನ್ ನಲ್ಲಿ ವಾಸವಾಗಿದ್ದು, ತಮ್ಮ ಮಗಳ ಮದುವೆಯ ಹಿನ್ನೆಲೆಯಲ್ಲಿ ಗ್ರೇಟರ್ ನೋಯ್ಡಾಕ್ಕೆ ಬಂದಿದ್ದರು. ಆದರೆ ಗೌರ್ ನಗರ ಪ್ರದೇಶದಲ್ಲಿರುವ ಸರೋವರ್ ಪೋರ್ಟಿಕೊ ಹೋಟೆಲ್ ಗೆ ಆಗಮಿಸಿದಾಗ, ತಾನು ಚಿನ್ನಾಭರಣ ಮತ್ತು ಇತರ ವಸ್ತುಗಳನ್ನೊಳಗೊಂಡ ಬ್ಯಾಗ್ ಅನ್ನು ಕಳೆದುಕೊಂಡಿರುವುದು ಗಮನಕ್ಕೆ ಬಂದಿದ್ದು, ಇದನ್ನು ಕ್ಯಾಬ್ ನಲ್ಲೇ ಮರೆತುಬಿಟ್ಟಿರಬಹುದು ಎಂದು ಶಂಕಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಅನಿಲ್ ಕುಮಾರ್ ರಜಪೂತ್, ಪಿಟಿಐ ಜೊತೆ ಮಾತನಾಡುತ್ತ, ಚಿನ್ನಾಭರಣ ಕಳೆದುಕೊಂಡ ನಂತರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದರು. ಕ್ಯಾಬ್ ಚಾಲಕನ ನಂಬರ್ ಸೇರಿದಂತೆ ಎಲ್ಲಾ ವಿವರಗಳನ್ನು ನೀಡಿದ್ದರು. ಆ ಮಾಹಿತಿ ಆಧಾರದ ಮೇಲೆ ಗುರ್ಗಾಂವ್ ನಲ್ಲಿರುವ ಉಬರ್ ಕಚೇರಿಯನ್ನು ಸಂಪರ್ಕಿಸಿದ್ದು, ಬಳಿಕ ಕ್ಯಾಬ್ ಅನ್ನು ಗಾಜಿಯಾಬಾದ್ ನಲ್ಲಿ ಪತ್ತೆಹಚ್ಚಲಾಗಿತ್ತು.
ಕ್ಯಾಬ್ ನಲ್ಲಿ ಚಿನ್ನಾಭರಣ ತುಂಬಿದ್ದ ಬ್ಯಾಗ್ ಸೀಟಿನ ಕೆಳಗಡೆ ಇದ್ದಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಎಲ್ಲಾ ವಸ್ತುಗಳು ಸುರಕ್ಷಿತವಾಗಿದ್ದವು ಎಂದು ರಜಪೂತ್ ತಿಳಿಸಿದ್ದಾರೆ. ತನಗೆ ಕ್ಯಾಬ್ ನ ಸೀಟಿನಡಿ ಬ್ಯಾಗ್ ಇದ್ದಿರುವ ವಿಷಯದ ಬಗ್ಗೆ ತಿಳಿದಿರಲಿಲ್ಲವಾಗಿತ್ತು ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸ್ ಠಾಣೆಯಲ್ಲಿ ಡ್ರೈವರ್ ಸಮ್ಮುಖದಲ್ಲಿಯೇ ಬ್ಯಾಗ್ ಲಾಕ್ ಅನ್ನು ತೆರೆದು ಪರಿಶೀಲಿಸಿದಾಗ, ಎಲ್ಲಾ ಚಿನ್ನಾಭರಣಗಳು ಇದ್ದಿರುವುದು ಖಚಿತವಾಗಿತ್ತು. ಅಂದಾಜು ಈ ಎಲ್ಲಾ ಚಿನ್ನಾಭರಣಗಳ ಮೊತ್ತ ಒಂದು ಕೋಟಿ ರೂಪಾಯಿ ಎಂದು ವರದಿ ತಿಳಿಸಿದೆ. ಠಾಣೆಯಲ್ಲಿ ಸಿನ್ನಾಗೆ ಬ್ಯಾಗ್ ಅನ್ನು ಒಪ್ಪಿಸಿದ್ದು, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ರಜಪೂತ್ ತಿಳಿಸಿದ್ದಾರೆ.
ಸದ್ಯ ಸ್ಥಳೀಯ ಠಾಣೆಯ ಪೊಲೀಸರು ಸುಮಾರು 4ಗಂಟೆಯ ಅವಧಿಯೊಳಗೆ ಕ್ಯಾಬ್ ಚಾಲಕನನ್ನು ಗಾಜಿಯಾಬಾದ್ ನಲ್ಲಿ ಪತ್ತೆಹಚ್ಚುವ ಮೂಲಕ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮರಳಿ ಕೊಡಿಸಿರುವುದು ಶ್ಲಾಘನೀಯ ಆಗಿದೆ.