ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಸರಕಾರಿ ಕಾಲೇಜು ತೆರೆದರೆ ಹೋರಾಟ ಖಂಡಿತ – ಪ್ರಮೋದ್ ಮುತಾಲಿಕ್ ಆಕ್ರೋಶ

ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ 10 ಸರ್ಕಾರಿ ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದಾಗಿದ್ದಕ್ಕೆ ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕರ್ನಾಟಕ ರಾಜ್ಯದ ಕಲಬುರಗಿ, ಯಾದಗರಿ, ರಾಯಚೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಾಜ್ಯ ವಕ್ಫ್ ಬೋರ್ಡ್ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸುವ ನಿರ್ಣಯ ಕೈಗೊಂಡಿದೆ ಎನ್ನಲಾಗಿದ್ದು, ಸರ್ಕಾರದಿಂದ ಒಂದೂವರೆ ತಿಂಗಳ ಹಿಂದೆಯೇ ಇದಕ್ಕೆ ಅನುಮೋದನೆಯೂ ದೊರೆತಿದೆ ಎನ್ನಲಾಗಿದೆ.

ಈ ಕುರಿತಾಗಿ, ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ಈ ಬಗ್ಗೆ ಮಾತನಾಡಿದ್ದು, ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುವ ಜೊತೆಗೆ ಈ ತೀರ್ಮಾನ ಕೈಗೊಳ್ಳಲೂ ಸರ್ಕಾರ ಮುಂದಾದರೆ, ಹಿಂದು ಸಂಘಟನೆಗಳ ಸೇರಿದಂತೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಮುನ್ನೆಚ್ಚರಿಕೆ ನೀಡಿದ್ದಾರೆ.

ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಮುತಾಲಿಕ್ ಅವರು, ಶ್ರೀರಾಮ ಸೇನೆ ಮಾತ್ರವಲ್ಲದೇ, ಯಾವುದೇ ಹಿಂದು ಪರ ಸಂಘಟನೆಗಳ ಮುಖಂಡರು ಇದಕ್ಕೆ ಸಮ್ಮತ ಸೂಚಿಸಲು ಸಾಧ್ಯವಿಲ್ಲ. ಒಂದು ವೇಳೆ ಸರ್ಕಾರ ಈ ಕುರಿತಾಗಿ ಚಿಂತನೆ ನಡೆಸಿದರೆ, ಮುಂದಿನ ದಿನಗಳಲ್ಲಿ ಶ್ರೀ ರಾಮಸೇನೆ ಮುಂದಾಳತ್ವದಲ್ಲಿ ಎಲ್ಲ ಹಿಂದು ಸಂಘಟನೆಗಳ ಸೇರಿದಂತೆ ಉಗ್ರ ಸ್ವರೂಪದ ಹೋರಾಟ ನಡೆಸಲಾವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪಕ್ಷಗಳು ಓಟು ಬ್ಯಾಂಕ್ ಗಳಿಗಾಗಿ, ನಾನಾ ಜಗಳಕ್ಕೆ ನಾಂದಿ ಹಾಡಿದ್ದು, ಅದನ್ನೇ ಭಾರತೀಯ ಜನತಾ ಪಕ್ಷದವರು ಮಾಡುತಿದ್ದಾರೆ ಎಂದು ಆರೋಪಿಸಿ, ಭಾರತೀಯ ಜನತಾ ಪಕ್ಷದವರು ಸಹ ಇಂದು ಮುಸಲ್ಮಾನರ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆಗೆ ಮುಂದಾಗಿದ್ದು ಇದು ಸಹ ತುಷ್ಟೀಕರಣ ರಾಜಕೀಯ ‌ಮಾಡಲು ಹೊರಟಂತಾಗಿದೆ ಎಂದಿದ್ದಾರೆ . ಸರ್ಕಾರ ತಕ್ಷಣವೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದಿದ್ದು, ರಾಜ್ಯದ ಹತ್ತು ಮಹಿಳಾ ಕಾಲೇಜುಗಳಿಗೆ ನೀಡಿದ ಪರವಾನಗಿ ರದ್ದು ಮಾಡಬೇಕು” ಎಂದು ಒತ್ತಾಯ ಮಾಡಿದ್ದಾರೆ.

Leave A Reply

Your email address will not be published.