ಧರ್ಮಸ್ಥಳದಲ್ಲಿ ಮಿನಿ ಏರ್ಪೋರ್ಟ್ ನಿರ್ಮಾಣ ಕಾರ್ಯ : ಮಾಹಿತಿ ನೀಡಿದ ಸಚಿವ ಸೋಮಣ್ಣ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಿನಿ ಏರ್ಪೋರ್ಟ್ ನಿರ್ಮಾಣ ಆಗುವ ಕುರಿತು ವಸತಿ ಸಚಿವರಾದ ಸೋಮಣ್ಣ ಮಾಹಿತಿ ನೀಡಿದ್ದಾರೆ. ವಿಧಾನಸೌಧ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು , ‘‘ಧರ್ಮಸ್ಥಳದಿಂದ 11 ಕಿ.ಮೀ. ದೂರದಲ್ಲಿ160 ಎಕರೆ ಜಾಗ ಗುರುತಿಸಲಾಗಿದ್ದು, ಭೂಮಿ ಹಸ್ತಾಂತರವಾಗುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವ ಯೋಜನೆ ರೂಪಿಸಲಾಗಿದ್ದು, ಕೇಂದ್ರ ಸರಕಾರವೂ ಈ ಯೋಜನೆಗೆ ಸಾಥ್ ನೀಡಲಿದೆ ಎಂದಿದ್ದಾರೆ.
ರಾಜ್ಯದಲ್ಲಿ ವಿಮಾನ ನಿಲ್ದಾಣ, ಏರ್‌ಸ್ಟ್ರಿಪ್‌ಗಳ ನಿರ್ಮಾಣ ಯೋಜನೆಗಳು ಶೀಘ್ರ ಗತಿಯಲ್ಲಿ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಿನಿ ಏರ್‌ಪೋರ್ಟ್ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿರುವ ಕುರಿತು ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.
ರಾಜ್ಯದ ನಾನಾ ಕಡೆಗಳಲ್ಲಿ ವಿಮಾನ ನಿಲ್ದಾಣ, ಏರ್‌ಸ್ಟ್ರಿಪ್‌ಗಳ ನಿರ್ಮಾಣ ಯೋಜನೆ ಮಿಂಚಿನ ವೇಗದಲ್ಲಿ ನಡೆಸಲಾಗಿದ್ದು, ಶಿವಮೊಗ್ಗ ವಿಮಾನನಿಲ್ದಾಣ ಸಿದ್ಧವಾಗಿದೆ. ಹೀಗಾಗಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ .
ಫೆಬ್ರವರಿಯಲ್ಲಿ ಉದ್ಘಾಟನೆಗೆ ಮಹೂರ್ತ ನಿಗದಿಯಾಗಿರುವ ಕುರಿತು ಮಾಹಿತಿ ನೀಡಿದ್ದಾರೆ.‘‘ರಾಯಚೂರು ವಿಮಾನನಿಲ್ದಾಣ ನಿರ್ಮಾಣ ಯೋಜನೆಗೆ ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಪ್ರಕ್ರಿಯೆ ಶುರು ಮಾಡಲಾಗಿದ್ದು, ವಿಜಯಪುರ ವಿಮಾನನಿಲ್ದಾಣ ಯೋಜನೆಯನ್ನು ಕೂಡ ಚುರುಕು ಗೊಳಿಸಲಾಗಿದ್ದು, ಹಾಸನ ಏರ್‌ಪೋರ್ಟ್ ರನ್‌ವೇ ಮುಗಿದಿದ್ದು, ಕಾಮಗಾರಿ ನಿರೀಕ್ಷೆಗಿಂತ ವೇಗವಾಗಿ ನಡೆಯುತ್ತಿದೆ ಎನ್ನಲಾಗಿದೆ.
ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವಿಶೇಷ ಕಾಳಜಿ ವಹಿಸಲಾಗಿದ್ದು, ಅದಕ್ಕಾಗಿ, 500 ಎಕರೆ ಭೂಮಿಯ ಅಗತ್ಯವಿದ್ದು, ಈ ಯೋಜನೆ ಪ್ರಸ್ತಾಪದ ಹಿನ್ನೆಲೆಯಲ್ಲಿ ಉದ್ದೇಶಿತ ಯೋಜನೆಯ ಸುತ್ತಮುತ್ತ ಭೂಮಿಯ ಬೆಲೆ ಏರಿಕೆಯಾಗಿರುವ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ.
ಮುಂದಿನ ಮಾರ್ಚ್ ಅಂತ್ಯದ ಒಳಗಾಗಿ, 5 ಲಕ್ಷ ಮನೆ ನಿರ್ಮಾಣ ಗುರಿ ಮಾಡಲಾಗಿದ್ದು, ಆಶ್ರಯ ಯೋಜನೆಯಡಿ 3 ಲಕ್ಷ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1.40 ಲಕ್ಷ ಹಾಗೂ ಸ್ಲಂ ಬೋರ್ಡ್ ಮೂಲಕ 1.80 ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿರುವ ಕುರಿತು ಮಾಹಿತಿ ನೀಡಿದ್ದಾರೆ.