ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಉಪನ್ಯಾಸಕ ಅಮಾನತು

ಶಾಲಾ ಕಾಲೇಜು ಎಂದರೆ ಎಲ್ಲಾ ಜಾತಿ ಧರ್ಮ ಬೇಧ ಭಾವ ಇಲ್ಲದೇ ಇರುವ ದೇಗುಲ. ಅಂತಹ ದೇಗುಲದಲ್ಲಿ ಒರ್ವ ವಿದ್ಯಾರ್ಥಿಯನ್ನು ನೀನು ಉಗ್ರ ಎನ್ನುವ ರೀತಿಯಲ್ಲಿ ಮಾತನಾಡಿದ ಅಧ್ಯಾಪಕರ ವಿರುದ್ಧ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ತನ್ನನ್ನು ಭಯೋತ್ಪಾದಕನಿಗೆ ಹೋಲಿಸಿ ಕಸಬ್ ಎಂದು ತರಗತಿಯಲ್ಲಿ ಕರೆದ ಪ್ರಾಧ್ಯಾಪಕರ ಮಾತಿಗೆ ವಿದ್ಯಾರ್ಥಿ ತೀವ್ರ ಆಕ್ಷೇಪ ವ್ಯಕ್ತಪಡಿದ್ದು, ಈಗ ಪ್ರಾಧ್ಯಾಪಕರು ಅಮಾನತಿನಲ್ಲಿದ್ದಾರೆ.

 

ಉಡುಪಿ ಜಿಲ್ಲೆಯ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕ್ಯಾಂಪಸ್‌ನಲ್ಲಿ ಈ ಘಟನೆ ನಡೆದಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಈ ಘಟನೆ ಕಳೆದ ಶುಕ್ರವಾರ ನಡೆದಿದ್ದು, ಈಗಾಗಲೇ ಪ್ರಾಧ್ಯಾಪಕರನ್ನು ಅಮಾನತು ಮಾಡಿ, ತನಿಖೆಗೆ ಕಾಲೇಜು ಆಡಳಿತ ಮಂಡಳಿ ಆದೇಶ ಮಾಡಿದೆ. ಈ ರೀತಿ ವಿದ್ಯಾರ್ಥಿ ಹಂಝಾ ತನ್ನನ್ನು ಭಯೋತ್ಪಾದಕ ಎಂದು ಕರೆದ ಸಹಾಯಕ ಪ್ರಾಧ್ಯಾಪಕ ರವೀಂದ್ರನಾಥ್ ಅವರನ್ನು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಇದೆ. ಪ್ರಾಧ್ಯಾಪಕ ರವೀಂದ್ರನಾಥ್ ತರಗತಿಯಲ್ಲಿ ವಿದ್ಯಾರ್ಥಿಯ ಹೆಸರನ್ನು ಕೇಳಿದ್ದು, ವಿದ್ಯಾರ್ಥಿ ಮುಸ್ಲಿಂ ಹೆಸರು ಹೇಳಿದ ತಕ್ಷಣ ಓ ನೀನು ಕಸಬ್ ರೀತಿಯಾ ಎಂದು ಪ್ರಶ್ನೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಉಗ್ರ ಅಜ್ಜಲ್ ಕಸಬ್‌ಗೆ ವಿದ್ಯಾರ್ಥಿಯನ್ನು ಹೋಲಿಸಿದ್ದಕ್ಕೆ ವಿದ್ಯಾರ್ಥಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು,
ನೀವು ನನ್ನನ್ನು ಹಾಗೆ ಹೇಗೆ ಕರೆಯುತ್ತೀರಿ ಎಂದು ಪ್ರಾಧ್ಯಾಪಕರಿಗೆ ಪ್ರಶ್ನೆ ಮಾಡಿದ್ದಾನೆ. ನಾನು ಹಾಸ್ಯ ಮಾಡಿದ್ದು ಎಂದು ಪ್ರಾಧ್ಯಾಪಕ ಹೇಳಿದ್ದಾರೆ. ಆಗ ವಿದ್ಯಾರ್ಥಿ 26/11 ಮುಂಬೈ ದಾಳಿ ಹಾಸ್ಯ ಘಟನೆ ಅಲ್ಲ ಮತ್ತು ಮುಸ್ಲಿಮನಾಗಿ ಈ ರೀತಿಯ ವರ್ತನೆಯನ್ನು ಪ್ರತಿನಿತ್ಯ ಅನುಭವಿಸುತ್ತಿರೋದು ಕೂಡ ಹಾಸ್ಯವಲ್ಲ ಸರ್. ನನ್ನ ಧರ್ಮದ ಬಗ್ಗೆ ನೀವು ಜೋಕ್ ಮಾಡಬೇಡಿ ಎಂದು ಹೇಳಿದ್ದಾನೆ.

ಆವಾಗ ವಿದ್ಯಾರ್ಥಿಯ ಕ್ಷಮೆಯಾಚಿಸಿದ ಪ್ರಾಧ್ಯಾಪಕರು, ನೀನು ನನ್ನ ಮಗನ ಸಮಾನ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿ, ನೀವು ನಿಮ್ಮ ಮಗನನ್ನು ಕೂಡ ಇದೇ ರೀತಿ ನಡೆಸಿಕೊಳ್ಳುತ್ತೀರಾ? ಉಗ್ರನ ಹೆಸರಿನಿಂದ ನಿಮ್ಮ ಮಗನನ್ನು ಕರೆಯುತ್ತೀರಾ? ನೀವು ಕ್ಷಮೆ ಕೇಳಿದ ಮಾತ್ರಕ್ಕೆ ನಿಮ್ಮ ಆಲೋಚನೆ ಬದಲಾಗಲು ಸಾಧ್ಯವೇ ಎಂದು ಕೇಳಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಪ್ರಾಧ್ಯಾಪಕರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ವಿವಾದ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆದ ಕೂಡಲೇ ಈ ಬಗ್ಗೆ, ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ ಎಂಐಟಿ ( MIT) ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಂತರಿಕ ವಿಚಾರಣೆಗೆ ಸೂಚಿಸಲಾಗಿದೆ. ವಿಚಾರಣೆ ಮುಗಿಯುವವರೆಗೂ ತರಗತಿ ತೆಗೆದುಕೊಳ್ಳದಂತೆ ಸಂಬಂಧಪಟ್ಟ ಸಹಾಯಕ ಪ್ರಾಧ್ಯಾಪಕರಿಗೆ ಸೂಚನೆ ನೀಡಿದ್ದೇವೆ. ಇಂತಹ ವರ್ತನೆಯನ್ನು ನಮ್ಮ ಕ್ಯಾಂಪಸ್‌ನಲ್ಲಿ ಸಹಿಸುವುದಿಲ್ಲ. ಧರ್ಮ, ಜಾತಿ, ಲಿಂಗ ಹಾಗೂ ಪ್ರಾದೇಶಿಕ ಬೇಧ ಮಾಡದೆ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕ್ಯಾಂಪಸ್ ನಮ್ಮದಾಗಿದೆ ಎಂದು ತಿಳಿಸಿದೆ.

Leave A Reply

Your email address will not be published.