ಹಣ ವರ್ಗಾವಣೆ ಮಾಡೋವಾಗ ತಪ್ಪಾಗಿ ಮಾಡಿದ್ದೀರಾ? ಇಲ್ಲಿದೆ ಕೆಲವು ಮಾರ್ಗೋಪಾಯ!
ಬದಲಾಗುತ್ತಿರುವ ಈ ಜಗತ್ತಿನಲ್ಲಿ ತಂತ್ರಜ್ಞಾನವು ಅತೀ ವೇಗವಾಗಿ ಬೆಳೆಯುತ್ತಿದೆ. ಮೊದಲು ಬ್ಯಾಂಕ್ ಗೆ ಹೋಗಿಯೇ ಹಣಕಾಸಿನ ಎಲ್ಲಾ ಚಟುವಟಿಕೆಯನ್ನು ನಿರ್ವಹಿಸಬೇಕಿತ್ತು. ಆದರೆ ಈಗಂತೂ ಹಣಕಾಸಿನ ವ್ಯವಹಾರ ಬಹಳ ಸುಲಭ. ಮನೆಯಲ್ಲೇ ಕುಳಿತು ನಿರ್ವಹಿಸಬಹುದು. ಮೊದಲು ಉದ್ದುದ್ದದ ಅಕೌಂಟ್ ನಂಬರ್, ಐಎಫ್ಎಸ್ಎಸಿ ಕೋಡ್ ಹಾಕಿ ಹಣ ವರ್ಗಾವಣೆ ಮಾಡಿದರೆ ಅದು ಸರಿಯಾದ ಅಕೌಂಟ್ ನಂಬರ್ಗೆ ಹೋಗಿದೆಯಾ? ಇಲ್ಲವಾ? ಎಂಬ ಅನುಮಾನ ಇದ್ದೇ ಇರುತ್ತಿತ್ತು. ಹಣ ಕಳುಹಿಸಿದ ಅಕೌಂಟ್ ನಂಬರ್ನವರಿಗೆ ಕರೆ ಮಾಡಿ ಹಣ ಬಂದಿದೆಯಾ ಎಂದು ಕೇಳಿ ಖಾತ್ರಿ ಪಡಿಸಿಕೊಳ್ಳಬೇಕಿತ್ತು.
ಈಗ ಯುಪಿಐ ತಂತ್ರಜ್ಞಾನ ಬಂದ ಮೇಲೆ ಹಣ ವರ್ಗಾವಣೆ ಸರಾಗವಾಗಿದ್ದೂ, ಕೇವಲ ನಿಮ್ಮ ಮೊಬೈಲ್ ನಂಬರ್ ಹಾಕಿ ಹಣ ಕಳುಹಿಸಬಹುದು. ನಂಬರ್ ಹಾಕಿದಾಗ ಹೆಸರು ಕಾಣಿಸುವುದರಿಂದ ಬೇರೆಯವರ ಖಾತೆಗೆ ಹಣ ಹೋಗುವ ಸಂಭವ ಕಡಿಮೆ ಇರುತ್ತದೆ. ಅಷ್ಟು ಅಚ್ಚುಕಟ್ಟಾಗಿದೆ ಇಂದಿನ ಮನಿ ಟ್ರಾನ್ಸ್ಫರ್ ಟೆಕ್ನಾಲಜಿ. ಭೀಮ್ ಆಯಪ್ ಜೊತೆಗೆ ಪೇಟಿಎಂ, ಫೋನ್ ಪೇ, ಅಮೇಜಾನ್ ಪೇ ಇತ್ಯಾದಿ ಅನೇಕ ಪೇಮೆಂಟ್ ಆಯಪ್ಗಳ ಆಯ್ಕೆ ಇದೆ.
ಆದರೆ ಕೆಲವೊಮ್ಮೆ ಈ ಪೇಮೆಂಟ್ ನಲ್ಲೂ ತಪ್ಪುಗಳನ್ನು ಮಾಡುತ್ತಾರೆ. ತಪ್ಪಿ ಒಮ್ಮೊಮ್ಮೆ ಬೇರೆ ಖಾತೆಗೆ ಹಣ ಕಳುಹಿಸುತ್ತಾರೆ. ಹಣ ಕಳುಹಿಸಲಾದ ಖಾತೆಯವರ ಹೆಸರು ಸರಿಯಾಗಿ ಗೊತ್ತಿಲ್ಲದಿದ್ದಾಗ ನಿಮ್ಮ ಹಣವನ್ನು ವಾಪಸ್ ಪಡೆಯಲು ಸಾಧ್ಯವೇ? ಸಾಧ್ಯವಾಗುವುದಾದರೆ ಆನ್ಲೈನ್ನಲ್ಲಿ ಪೇಟಿಎಂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ? ಇದರ ಬಗ್ಗೆ ಕಾನೂನು ಏನು ಹೇಳುತ್ತದೆ? ಈ ಎಲ್ಲಾ ವಿಷಯದ ಸಂಪೂರ್ಣ ಮಾಹಿತಿ ಇಲ್ಲಿದೆ.
ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸರ್ಕಾರವೇ ಭಾರತ್ ಇಂಟರ್ಫೇಸ್ ಫಾರ್ ಮನಿ (BHIM) ರೂಪಿಸಿದೆ. ಇದರ ನಿಯಮದ ಪ್ರಕಾರ ಒಂದು ವೇಳೆ ನೀವು ತಪ್ಪಾಗಿ ಬೇರೆ ಅಕೌಂಟ್ಗೆ ಹಣ ಕಳುಹಿಸಿದರೆ ವಾಪಸ್ ಪಡೆದುಕೊಳ್ಳಬಹುದೆಂಬ ಗ್ಯಾರಂಟಿ ಇಲ್ಲ. ಆದರೆ ನೀವು ಹಣ ಕಳುಹಿಸಲಾಗುವ ಖಾತೆಯ ಮಾಲೀಕರನ್ನು ಸಂಪರ್ಕಿಸಿ ಮನವಿ ಮಾಡಿಕೊಂಡು ಹಣ ವಾಪಸ್ ಪಡೆದುಕೊಳ್ಳಬೇಕು ಅಷ್ಟೇ. ಆದ್ದರಿಂದ ಹಣ ಕಳುಹಿಸುವ ಮುನ್ನ ಮೊಬೈಲ್ ನಂಬರ್ ಮತ್ತು ಆನಂತರ ಕಾಣುವ ಖಾತೆದಾರರ ಹೆಸರನ್ನು ಸರಿಯಾಗಿ ಪರಿಶೀಲಿಸಿ ಹಣ ಕಳುಹಿಸುವುದು ಉತ್ತಮ.
ಕೆಲವೊಂದು ಸಂದರ್ಭದಲ್ಲಿ ಹೆಸರು ಒಂದೇ ತೆರನಾಗಿರುವ ಸಾಧ್ಯತೆಯೂ ಇರುತ್ತದೆ. ಆಗ ನೀವು ಒಬ್ಬರಿಗೆ
ಮೊದಲ ಬಾರಿ ಹಣ ಕಳುಹಿಸುವುದಿದ್ದರೆ ಸಣ್ಣ ಮೊತ್ತವನ್ನು ಮೊದಲು ಕಳುಹಿಸಿ, ಹಣ ತಲುಪಿದೆಯೇ ಎಂದು ಖಚಿತ ಮಾಡಿಕೊಳ್ಳಿ. ಬಳಿಕ ಎಲ್ಲಾ ಹಣವನ್ನು ವರ್ಗಾವಣೆ ಮಾಡಬಹುದು. ನಿಯಮಗಳ ಪ್ರಕಾರ ನೀವು ಯುಪಿಐ ಐಡಿ ಮೂಲಕ ಕಳುಹಿಸಲಾದ ಹಣವನ್ನು ಮರಳಿ ಪಡೆಯುವ ಖಾತ್ರಿ ಇಲ್ಲವಾದರೂ ದೂರು ಕೊಡುವ ಅವಕಾಶವಂತೂ ಇದೆ. ಭೀಮ್, ಪೇಟಿಎಂ, ಫೋನ್ ಪೇ ಇತ್ಯಾದಿ ಆಯಪ್ಗಳಲ್ಲಿ ದೂರಿನ ಅವಕಾಶವಿದ್ದೂ, ಈ ಆಯಪ್ಗಳಲ್ಲಿರುವ ಕಸ್ಟಮರ್ ಸಪೋರ್ಟ್ ಅನ್ನು ಸಂಪರ್ಕಿಸಿ ದೂರು ಕೊಡಬಹುದು. ಬ್ಯಾಂಕ್ ಸಂಪರ್ಕಿಸಿ ಭೀಮ್ ಆಯಪ್ನಲ್ಲಿ ಹೆಲ್ತ್ಲೈನ್ ನಂಬರ್ 18001201740 ಅನ್ನು ಸಂಪರ್ಕಿಸಬಹಿದು.
ನೀವು ತಪ್ಪಾಗಿ ಹಣ ಕಳುಹಿಸಿದ್ದು ನಿಮ್ಮ ಗಮನಕ್ಕೆ ಬಂದ ಕೂಡಲೇ ಟ್ರಾನ್ಸಾಕ್ಷನ್ನ ಸ್ಕ್ರೀನ್ಶಾಟ್ ತೆಗೆದುಕೊಳ್ಳಿ. ಹಣ ಕಳುಹಿಸಿದ ಖಾತೆ ನಂಬರ್ ಬ್ಯಾಂಕ್ ಅನ್ನು ಸಂಪರ್ಕಿಸಿ ಅಥವಾ ಬ್ಯಾಂಕ್ನ ಶಾಖೆಯ ಮ್ಯಾನೇಜರ್ ಅವರನ್ನೇ ಖುದ್ದಾಗಿ ಭೇಟಿ ಮಾಡುವುದಿದ್ದರೆ ಆಗಬಹುದು. ನೀವು ಶೀಘ್ರವಾಗಿ ಬ್ಯಾಂಕ್ ಸಂಪರ್ಕಿಸಿದಷ್ಟೂ ನಿಮ್ಮ ಹಣ ಮರಳಿಪಡೆಯುವ ಪ್ರಯತ್ನ ಸಫಲವಾಗುವ ಅವಕಾಶ ಇರುತ್ತದೆ.