ಫುಡ್ ಡೆಲಿವರಿ ಸೇವೆ ಸ್ಥಗಿತಗೊಳಿಸಿದ ಝೊಮ್ಯಾಟೊ
ಆಹಾರ ವಿತರಕ ಸಂಸ್ಥೆ ಝೊಮ್ಯಾಟೊದಲ್ಲಿ ಆಹಾರ ಆರ್ಡರ್ ಮಾಡಿ ಆರಾಮವಾಗಿ ತಿನ್ನುವ ಖುಷಿಯೇ ಬೇರೆ. ಹೌದು ಯಾವುದೇ ಮೂಲೆಯಲ್ಲಿ ಇದ್ದರೂ ಝೊಮ್ಯಾಟೊ ನಮಗೆ ಆಹಾರವನ್ನು ಸಿದ್ದಪಡಿಸಿ ತಂದು ಕೊಡುತ್ತದೆ. ಆದರೆ ಝೊಮ್ಯಾಟೊದಲ್ಲಿನ ಮಾಹಿತಿ ಕೆಲವನ್ನು ನೀವು ತಿಳಿದು ಕೊಳ್ಳಲೇ ಬೇಕು.
ಝೊಮ್ಯಾಟೊ ಆಹಾರ ವಿತರಕರು ಯುಎಇಯಲ್ಲಿರುವ ಬಳಕೆದಾರರಿಗೆ ತನ್ನ ಆ್ಯಪ್ ಮೂಲಕ ಆಹಾರ ವಿತರಣೆ ಮಾಡುವ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಈಗಾಗಲೇ ತಿಳಿಸಿತ್ತು.
ನವೆಂಬರ್ 24ರಿಂದಲೇ ಫುಡ್ ಡೆಲಿವರಿ ಸೇವೆ ಸ್ಥಗಿತವಾಗಿದೆ. ಸಂಸ್ಥೆಯು ಯುಎಇ ಮೂಲದ ಆಹಾರ ವಿತರಣಾ ವ್ಯವಹಾರವನ್ನು 2019 ರಲ್ಲಿ ಆನ್‌ಲೈನ್ ಫುಡ್ ಆರ್ಡರಿಂಗ್ ಕಂಪನಿ ತಲಾಬಾತ್‌ಗೆ ಮಾರಾಟ ಮಾಡಿರುವುದರಿಂದ ನವೆಂಬರ್ 24 ರಿಂದ ಝೊಮ್ಯಾಟೊ ಮೂಲಕ ಆಹಾರ ಆರ್ಡರ್ ಮಾಡುವ ಬಳಕೆದಾರರ ವಿನಂತಿಗಳನ್ನು ತಲಾಬಾತ್‌ಗೆ ಮರುನಿರ್ದೇಶಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿತ್ತು.
ಝೊಮ್ಯಾಟೊ ಹೇಳಿಕೆ ಪ್ರಕಾರ : ಝೊಮ್ಯಾಟೊ ತನ್ನ ಯುಎಇ ಮೂಲದ ವ್ಯಾಪಾರವನ್ನು ಮಾರಾಟ ಮಾಡಿದ ನಂತರ ವೆಚ್ಚ ಮರುಪಾವತಿಗೆ ಪ್ರತಿಯಾಗಿ ಝೊಮ್ಯಾಟೊ ತಲಾಬತ್‌ಗೆ ಸೇವೆಗಳನ್ನು ಸಲ್ಲಿಸುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿಯು 24, 2022 ರಿಂದ ಯುಎಇಯಲ್ಲಿ ತಲಾಬಾತ್‌ಗೆ ಸೇವೆಗಳನ್ನು ಸಲ್ಲಿಸುವುದನ್ನು ನಿಲ್ಲಿಸಿದೆ ಹಾಗೂ ಒಪ್ಪಂದಗಳ ನಿಯಮಗಳಿಗೆ ಅನುಸಾರವಾಗಿ ಯುಎಇಯಲ್ಲಿನ ಝೊಮ್ಯಾಟೊ ಗ್ರಾಹಕರು ಸಂಸ್ಥೆಯ ಆ್ಯಪ್ ಮೂಲಕ ಆಹಾರ ಆರ್ಡರ್ ಮಾಡಿದಲ್ಲಿ ಅದನ್ನು ತಲಾಬಾತ್‌ಗೆ ಮರುನಿರ್ದೇಶಿಸಲಾಗುತ್ತದೆ ಎಂದು ಝೊಮ್ಯಾಟೊ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಿದೆ.
ಅದಲ್ಲದೆ ಕಂಪನಿಯ ಸೇವೆ ಸ್ಥಗಿತಗೊಳಿಸುವಿಕೆಯು ಕಂಪನಿಯ ಹಣಕಾಸು ಹಾಗೂ ಕಾರ್ಯಾಚರಣೆಗಳ ಮೇಲೆ ಯಾವುದೇ ವಸ್ತುನಿಷ್ಟ ಪರಿಣಾಮವನ್ನು ಬೀರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಯುಎಇ ಯಲ್ಲಿ ರೆಸ್ಟೋರೆಂಟ್ ಅನ್ವೇಷಣೆ ಹಾಗೂ ರೆಸ್ಟೋರೆಂಟ್ ಸೇವೆಯನ್ನು ಈ ಹಿಂದೆ ನಡೆಸುತ್ತಿದ್ದಂತೆಯೇ ನಡೆಸಲಿದೆ ಎಂದು ತಿಳಿಸಿದೆ.
ಭಾರತದಲ್ಲಿ ತನ್ನ ಕಾರ್ಯಾಚರಣೆಗಳ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ ಎಂದು ಝೊಮ್ಯಾಟೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಿಂದರ್ ಗೋಯಲ್ ಈ ಮೊದಲೇ ಪ್ರಕಟಿಸಿದ್ದಾರೆ.
ಅಂತಾರಾಷ್ಟ್ರೀಯ ವ್ಯವಹಾರವು ನಮ್ಮ ಸಂಸ್ಥೆಯ ಮಾರ್ಗಸೂಚಿಕೆಗೆ ಹೊಂದಿಕೆಯಾಗುವುದಿಲ್ಲ, ಸಾಧ್ಯವೇ ಇಲ್ಲ ಎಂದು ಗೋಯಲ್ ಸಂದರ್ಶನದಲ್ಲಿ ಸುದ್ದಿಮಾಧ್ಯಮಗಳಿಗೆ ತಿಳಿಸಿದ್ದರು. 2021 ರ ನವೆಂಬರ್‌ನಲ್ಲಿ ಸಂಸ್ಥೆಯು ಲೆಬನಾನ್‌ನಿಂದ ನಿರ್ಗಮಿಸಲು ನಿರ್ಧರಿಸಿದಾಗ ತನ್ನೆಲ್ಲಾ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ತನ್ನ ನಿರ್ಗಮನವನ್ನು ಗುರುತಿಸಿದೆ. ಅದಲ್ಲದೆ ಕಂಪನಿಯು ಈ ಹಿಂದೆ, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಸಿಂಗಾಪುರದಲ್ಲಿ ಕೂಡ ತನ್ನ ಕಾರ್ಯಾಚರಣೆಗಳನ್ನು ಅಂತ್ಯಗೊಳಿಸಿತ್ತು.
ಝೊಮ್ಯಾಟೊ ಯುಎಇ ಮಾರುಕಟ್ಟೆಯನ್ನು 2012 ರಲ್ಲಿ ಪ್ರವೇಶಿಸಿತು. ಇದು 2019 ರಲ್ಲಿ ಸುಮಾರು $172 ಮಿಲಿಯನ್‌ಗೆ UAE ಯಲ್ಲಿನ ಡೆಲಿವರಿ ಹೀರೋ ಗ್ರೂಪ್‌ಗೆ ತನ್ನ ಆಹಾರ ವಿತರಣಾ ವ್ಯವಹಾರವನ್ನು ಮಾರಾಟ ಮಾಡುವ ಮೂಲಕ ಕಾರ್ಯಾಚರಣೆಯನ್ನು ಕೊನೆಗೊಳಿಸಿತು.
ಡೆಲಿವರಿ ಹೀರೋ ಗ್ರೂಪ್ ತನ್ನ ವ್ಯವಹಾರವನ್ನು ಡೆಲಿವರಿ ಹೀರೋನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ತಲಾಬತ್ ಮಿಡಲ್ ಈಸ್ಟ್ ಇಂಟರ್ನೆಟ್ ಸರ್ವೀಸಸ್ ಕಂಪನಿ LLC ಮೂಲಕ ಖರೀದಿಸಲು ಝೊಮ್ಯಾಟೊದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ಕಂಪನಿಯು ತನ್ನ ಪ್ರೊ ಮತ್ತು ಪ್ರೊ ಪ್ಲಸ್ ಸದಸ್ಯತ್ವವನ್ನು ಸಹ ಸ್ಥಗಿತಗೊಳಿಸಿದೆ ಮತ್ತು ಈಗ ಅದು ಆಹಾರ ವಿತರಣೆಗಾಗಿ ಹೊಸ ಲಾಯಲ್ಟಿ ಪ್ರೋಗ್ರಾಂನಲ್ಲಿ ಕಾರ್ಯನಿರ್ವಹಿಸುತ್ತಿದೆ. ಝೊಮಾಟೊ ಪ್ರೊನಿಂದ ಅದರ ಆದಾಯವು ಗಣನೀಯವಾಗಿ 9 ಲಕ್ಷಕ್ಕೆ ಕುಸಿದಿದೆ ಎಂದು ಮಾಹಿತಿ ನೀಡಲಾಗಿದೆ.
ಇತ್ತೀಚಿನ ಬೆಳವಣಿಗೆಯಲ್ಲಿ, ಝೊಮ್ಯಾಟೊದ ಹೊಸ ಉಪಕ್ರಮಗಳ ಮುಖ್ಯಸ್ಥ ಮತ್ತು ಮಾಜಿ ಆಹಾರ ವಿತರಣಾ ಮುಖ್ಯಸ್ಥ ರಾಹುಲ್ ಗಂಜೂ ಕಂಪನಿಗೆ ರಾಜೀನಾಮೆ ನೀಡಿದ್ದಾರೆ. ಐದು ವರ್ಷಗಳ ಕಾಲ ಕಂಪನಿಯೊಂದಿಗೆ ಒಡನಾಟ ಹೊಂದಿದ್ದ ರಾಹುಲ್, ಕಂಪನಿಯನ್ನು ತೊರೆದಿದ್ದಾರೆ. ಗಂಜೂ ಈ ಹಿಂದೆ ಟ್ವಿಟರ್, ಸ್ನಾಪ್‌ಡೀಲ್ ಮತ್ತು ಸಿಮ್ಯಾಂಟೆಕ್‌ನಂತಹ ಕಂಪನಿಗಳಲ್ಲಿ ಉತ್ಪನ್ನ ನಿರ್ವಹಣೆ ಪಾತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರು.
ಸೆಪ್ಟೆಂಬರ್ 30 ರಂದು ಕೊನೆಗೊಂಡ ತ್ರೈಮಾಸಿಕದಲ್ಲಿ ಜೊಮಾಟೊ ನಿವ್ವಳ ನಷ್ಟವು 251 ಕೋಟಿ ರೂ.ಗಳಾಗಿದ್ದು, ವರ್ಷದ ಹಿಂದೆ 430 ಕೋಟಿ ರೂಗಳಾಗಿತ್ತು. ಸಂಸ್ಥೆಯ ಕಾರ್ಯಾಚರಣೆಗಳ ಆದಾಯವು 62% ಕ್ಕೆ ಏರಿಕೆಯಾಗಿದ್ದು, 1,024 ಕೋಟಿ ರೂ.ಗಳಿಂದ 1,661 ಕೋಟಿ ರೂ ಸಮೀಪಕ್ಕೆ ಹೆಚ್ಚಳವಾಗಿದೆ ಆದ್ದರಿಂದ ಈ ಮೇಲಿನ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿ ಮೂಲಕ ಮಾಹಿತಿ ತಿಳಿಸಲಾಗಿದೆ.