ಕಾಂತಾರ ಚಿತ್ರತಂಡಕ್ಕೆ ಮತ್ತೊಂದು ಗರಿ | ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಒಲಿದ ಪ್ರತಿಷ್ಠಿತ ಸಿದ್ಧಶ್ರೀ ಪ್ರಶಸ್ತಿ!
ಜಿಡಗಾ-ಮುಗಳಖೋಡ-ಕೋಟನರ ಮಠದಿಂದ ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರಮಟ್ಟದ “ಸಿದ್ಧಶ್ರೀ” ಪ್ರಶಸ್ತಿಗೆ, ಇಡೀ ಭಾರತದಲ್ಲೇ ಸಂಚಲನ ಸೃಷ್ಟಿಸಿದ ‘ಕಾಂತಾರ’ ಸಿನಿಮಾದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.
ಡಿ.2ರಂದುಆಳಂದ ತಾಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ನಡೆಯುವ ಶ್ರೀ ಷಡಕ್ಷರಿ ಶಿವಯೋಗಿ ಡಾ.ಮುರುರಾಜೇಂದ್ರ ಮಹಾಸ್ವಾಮಿಗಳ 38ನೇ ಗುರುವಂದನಾ ಕಾರ್ಯಕ್ರಮದಲ್ಲಿ ರಿಷಬ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂಬುದಾಗಿ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಮಾದನಹಿಪ್ಪರಗಾ ವಿರಕ್ತಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮೀಜಿ ಮತ್ತು ಅಧ್ಯಕ್ಷರಾದ ಚಿನ್ಮಯಗಿರಿ ಮಹಾಂತೇಶ್ವರ ಮಠದ ಶ್ರೀ ವೀರಮಹಾಂತ ಶಿವಾಚಾರ್ಯರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದುವರೆಗೆ ಸಿದ್ಧಗಂಗಾದ ಲಿಂಗೈಕ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ, ಪಂಡಿತ ಪುಟ್ಟರಾಜ ಗವಾಯಿ ಇತರರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ವರ್ಷ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ “ಸಿದ್ಧಶ್ರೀ” ಪ್ರಶಸ್ತಿ ನೀಡಲಾಗಿತ್ತು.
ಪ್ರಶಸ್ತಿಯು ಒಂದು ಲಕ್ಷ ನಗದು, 20 ಗ್ರಾಂ ಚಿನ್ನದ ಪದಕ ಹೊಂದಿದೆ. ದೈವದ ಕಾರ್ಣಿಕವನ್ನು ಸಾರುವ ಸಿನಿಮಾವನ್ನು ನಿರ್ದೇಶಿಸಿ ಇಡೀ ಭಾರತ ಕರ್ನಾಟಕದ ಕಡೆಗೆ ನೋಡುವಂತೆ ಮಾಡಿರುವ ರಿಷಬ್ ಶೆಟ್ಟಿ ಅವರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕೆಪಿಎಸ್ಸಿ ಅಧ್ಯಕ್ಷ ಶಿವಶಂಕ್ರಪ್ಪ ಸಾಹುಕಾರ ಮತ್ತು ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಅವರನ್ನೂ ಗೌರವಿಸಲಾಗುತ್ತದೆ. ಗಾಯಕರಾದ ವಿಜಯಪ್ರಕಾಶ್, ಅನುರಾಧಾ ಭಟ್, ನಟಿ ಅನುಶ್ರೀ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.