ಮೈಸೂರು: ವಿವಾದ ಸೃಷ್ಟಿಸಿದ್ದ ಬಸ್ ನಿಲ್ದಾಣದ ಮೇಲಿದ್ದ ಗುಂಬಜ್ ತೆರವು!
ಮೈಸೂರು: ಗುಂಬಜ್ ಮಾದರಿ ಬಸ್ ಶೆಲ್ಟರ್ ನಿರ್ಮಾಣ ವಿವಾದಕ್ಕೆ ಶಾಸಕ ಎಸ್.ಎ.ರಾಮ್‌ದಾಸ ಅಂತ್ಯ ಹಾಡಿದ್ದಾರೆ. ವಿವಾದಕ್ಕೆ ಕಾರಣವಾಗಿದ್ದ ಬಸ್ ನಿಲ್ದಾಣದ ಮೇಲಿದ್ದ ಗುಂಬಜ್ ಅನ್ನು ಇದೀಗ ತೆರವುಗೊಳಿಸಲಾಗಿದೆ.
ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜು ಎದುರು ಇದ್ದ ಬಸ್ ನಿಲ್ದಾಣದ ಮೇಲಿದ್ದ ಗುಂಬಜ್ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್.ಎ.ರಾಮ್‌ದಾಸ್ ನಡುವೆ ಶೀತಲ ಸಮರಕ್ಕೆ ಕಾರಣವಾಗಿತ್ತು. ಈ ವೇಳೆ ಸಂಸದ ಪ್ರತಾಪ್ ಸಿಂಹ ಇದನ್ನು ಹೊಡೆದು ಹಾಕುತ್ತೇನೆ ಎಂದು ಕೂಡ ಹೇಳಿದ್ದರು.
ಇದೀಗ ಬಸ್ ಸ್ಟಾಂಡ್ ಮೇಲಿದ್ದ ಮೂರು ಗೋಪುರಗಳಲ್ಲಿ ಮಧ್ಯದಲ್ಲಿರುವ ಒಂದು ಗೋಪುರ ಬಿಟ್ಟು ಬದಿಯಲ್ಲಿರುವ ಮತ್ತೆರಡು ಸಣ್ಣ ಗೋಪುರಗಳನ್ನು ತೆರವು ಮಾಡಲಾಗಿದೆ. ಮೈಸೂರು ಅರಮನೆ ಪರಂಪರೆಗಾಗಿ ಬಸ್ ನಿಲ್ದಾಣ ಮಾಡಲಾಗುತ್ತಿತ್ತು. ಹಾಗೂ ಶಾಸಕರ ಅನುದಾನದಲ್ಲಿ 12 ಬಸ್ ಶೆಲ್ಟರ್ ನಿರ್ಮಿಸಲಾಗಿತ್ತು. ಆದರೆ ಧರ್ಮದ ಹೆಸರಿನಲ್ಲಿ ವಿನಾಕಾರಣ ವಿವಾದ ಸೃಷ್ಟಿಸಲಾಗಿತ್ತು, ಮುಂದೆ ಈ ರೀತಿ ವಿವಾದಗಳು ಸೃಷ್ಟಿ ಆಗಬಾರದು ಹಾಗಾಗಿ ಬಸ್ ನಿಲ್ದಾಣದ ಮೇಲಿನ ಮಧ್ಯದ ಒಂದು ಗುಂಬಜ್ ಉಳಿಸಿಕೊಳ್ಳಲು ಒಪ್ಪಿಗೆ ಪಡೆಯಲಾಗಿದೆ. ಸಾರ್ವಜನಿಕರು ನನ್ನ ಅಭಿವೃದ್ಧಿ ಮಂತ್ರವನ್ನು ಅನ್ಯತಾ ಭಾವಿಸಬಾರದು ಎಂದು ಶಾಸಕ
ಎಸ್.ಎ.ರಾಮ್‌ದಾಸ್, ಸ್ಪಷ್ಟನೆ ನೀಡಿದ್ದಾರೆ.
ಗುಂಬಜ್ ತೆರವಿನ ಬಗ್ಗೆ ಪ್ರತಾಪ್ ಸಿಂಹ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ,ಮಸೀದಿಯ ಚಿತ್ರದ ಜೊತೆಗೆ ಬಸ್ ನಿಲ್ದಾಣದ ಚಿತ್ರವನ್ನೂ ಹಾಕಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ಅದೇನೆಂದರೆ, ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದಿಯೇ ಆಗುತ್ತದೆ. ಅದನ್ನು ತೆರವು ಮಾಡಿಸುತ್ತೇನೆ ಎಂದು ಹೇಳಿದ್ದೆ ಮತ್ತು ಈಗ ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗೂ ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.