ಅಯ್ಯಪ್ಪನ ಸನ್ನಿಧಾನದಲ್ಲಿ ಧರ್ಮದಂಗಲ್ – ಮಾಲಾಧಾರಿಗಳಿಂದ ಮಸೀದಿ ಭೇಟಿಗೆ ಆಕ್ಷೇಪ
ಕರಾವಳಿ ಬಳಿಕ ಬೆಂಗಳೂರಿಗೆ ಕಾಲಿಟ್ಟಿರುವ ಧರ್ಮ ದಂಗಲ್ ಕಿಚ್ಚು, ದಿನೇ ದಿನೇ ಹಲವಾರು ದೇಗುಲಗಳನ್ನು ವ್ಯಾಪಿಸುತ್ತಿದೆ. ಇದೀಗ ಕೋಟ್ಯಂತರ ಭಕ್ತರನ್ನು ಹೊಂದಿರುವ ಶಬರಿಮಲೆಯಲ್ಲಿ ನೆಲೆನಿಂತ ಅಯ್ಯಪ್ಪಸ್ವಾಮಿಯ ಸನ್ನಿಧಾನದಲ್ಲಿ ಧರ್ಮ ದಂಗಲ್ ಕರಾಳ ಸ್ವರೂಪ ಪಡೆದುಕೊಂಡಿದೆ. ಮಾಲಾಧಾರಿಗಳು ಅಯ್ಯಪ್ಪನ 18 ಮೆಟ್ಟಿಲು ಹತ್ತುವ ಮುನ್ನ ಅಲ್ಲಿನ ವಾವರ್ ಮಸೀದಿಗೂ ಭೇಟಿ ಕೊಡುತ್ತಾರೆ. ಅಯ್ಯಪ್ಪನ ದರ್ಶನಕ್ಕೂ ಮುನ್ನಾ ಭಕ್ತರು ಮಸೀದಿಗೆ ಭೇಟಿ ನೀಡುವುದನ್ನು ಕೆಲ ಹಿಂದೂ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿವೆ.
ಅಯ್ಯಪ್ಪನ ದರ್ಶನಕ್ಕೂ ಮುನ್ನ ವಾವರ್ ಸ್ವಾಮಿಗೆ ಮೊದಲ ನಮನ ಸಲ್ಲಿಕೆ ಮಾಡುವುದು ಸೌಹಾರ್ದತೆಯ ಸಂಕೇತ ಎನ್ನಲಾಗುತ್ತೆ. ಹುಲಿ ಹಾಲು ತರಲು ಕಾಡಿಗೆ ಹೋದ ಅಯ್ಯಪ್ಪ ವಾವರ್ ಜೊತೆ ಕಾದಾಡುತ್ತಾರೆ. ಕಾದಾಟದ ಬಳಿಕ ವಾವರ್ ಅಯ್ಯಪ್ಪನ ಸ್ನೇಹಿತನಾದ ಅನ್ನೋದು ಪ್ರತೀತಿ. ಹೀಗಾಗಿ ಇಲ್ಲಿ ಈಡುಗಾಯಿ ಒಡೆದು ಕಾಣಿಕೆ ಹಾಕೋದು ವಾಡಿಕೆಯಾಗಿದೆ. ಕಾಡು ಪ್ರಾಣಿಗಳಿಂದ ಅಯ್ಯಪ್ಪನ ಭಕ್ತರನ್ನು ವಾವರ್ ರಕ್ಷಿಸುತ್ತಾನೆ ಅನ್ನೋದು ಕೆಲ ಭಕ್ತರ ನಂಬಿಕೆ. ಇದೇ ಕಾರಣಕ್ಕೆ ಅಯ್ಯಪ್ಪ ಸ್ವಾಮಿಯ ಕೆಲವೊಬ್ಬ ಭಕ್ತರು ಶಬರಿಮಲೆಯಲ್ಲಿ ದರ್ಶನಕ್ಕೂ ಮುನ್ನ ವಾವರ್ ಮಸೀದಿಗೆ ಭೇಟಿ ನೀಡುತ್ತಾರೆ.
ಇದೆಲ್ಲವೂ ಒಂದು ಕಟ್ಟುಕಥೆ, ಇದಕ್ಕೆ ಯಾವುದೇ ಪೌರಾಣಿಕ ಪುರಾವೆಗಳಿಲ್ಲ. ಮಸೀದಿಗೆ ಕಾಣಿಕೆ ಕೊಡುವುದರಿಂದ ಈ ಹಣ ದುರುಪಯೋಗವಾಗುತ್ತಿದೆ. ಇದನ್ನು ನಂಬಬಾರದು. ಮೂರ್ತಿ ಪೂಜೆ ನಂಬದವರ ಬಳಿ ಕಾಣಿಕೆ ಹಾಕೋದು ತಪ್ಪು. ಹೀಗಾಗಿ ಭೇಟಿ ಕೊಡಬಾರದು ಎಂದು ಹಿಂದೂ ಸಂಘಟನೆಗಳು ವಾದ ನಡೆಸಿದೆ.
ವಾವರ್ ಮಸೀದಿಗೆ ಶಬರಿಮಲೆಯ ಭಕ್ತರು ಭೇಟಿ ನೀಡುತ್ತಾರೆ ಎಂಬ ಹಿನ್ನಲೆಯಲ್ಲಿ ವಿವಾದ ಸೃಷ್ಟಿಯಾಗಿದೆ. ಇದರ ಬಗ್ಗೆ ಅಭಿಯಾನ ನಡೆಸೋಕೂ ಹಿಂದೂ ಸಂಘಟನೆಗಳು ಸಜ್ಜಾಗಿದೆ.