ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪಾಲ್ಗೊಂಡ ರಿಷಬ್ ಶೆಟ್ಟಿ | ದೇವರ ಬಗೆಗಿನ ಗ್ರಹಿಕೆ ಬಗ್ಗೆ ಪ್ರಶ್ನೆ| ನಟ,ನಿರ್ದೇಶಕನ ಉತ್ತರ ಏನಿರಬಹುದು?
‘ಕಾಂತಾರ’ ಪ್ರಪಂಚದಾದ್ಯಂತ ಭರ್ಜರಿ ಸದ್ದು ಮಾಡಿದ್ದು, ಹಲವಾರು ದಾಖಲೆಗಳನ್ನೂ ಕೂಡ ಸೃಷ್ಟಿಸಿದೆ. ಈ ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಸಿನಿಮಾದ ಸಕ್ಸಸ್ ನ ಹಿನ್ನೆಲೆ ಗೋವಾದ ಅಂತಾರಾಷ್ಟ್ರೀಯ ಸಿನಿಮೋತ್ಸವ(IFFI)ದಲ್ಲಿ ಪಾಲ್ಗೊಂಡಿದ್ದಾರೆ. ಹಾಗೇ ದೇಶದ ವಿವಿಧ ಚಿತ್ರರಂಗದ ಅನೇಕ ಸ್ಟಾರ್ ಕಲಾವಿದರು, ನಿರ್ದೇಶಕರು ಕೂಡ ಇದರಲ್ಲಿ ಭಾಗಿ ಆಗಿದ್ದರು. ಈ ವೇಳೆ ರಿಷಬ್ ಅವರಿಗೆ ಪ್ರಶ್ನೆಯೊಂದು ಎದುರಾಗಿದೆ. ಇನ್ನೂ ಆ ಪ್ರಶ್ನೆಗೆ ಶೆಟ್ರು ಏನು ಉತ್ತರ ನೀಡಿರಬಹುದು ಎಂದು ನೋಡೋಣ.
ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ರಿಷಬ್ ಶೆಟ್ಟಿ ಅವರು ಪಾಲ್ಗೊಂಡಿದ್ದರು. ಅಲ್ಲಿ ಅವರನ್ನು ಕಂಡ ಕೂಡಲೇ ಅಭಿಮಾನಿಗಳು ಅವರ ಸುತ್ತಲೂ ಸೆಲ್ಪಿಗಾಗಿ ಮುಗಿಬಿದ್ದಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸವೇ ಪಡಬೇಕಾಯಿತು.
ಈ ಸಿನಿಮೋತ್ಸವದಲ್ಲಿ ರಿಷಬ್ ಅವರಿಗೆ ಪ್ರಶ್ನೆಯೊಂದು ಎದುರಾಗಿದೆ. ‘ಕಾಂತಾರ’ ದೈವ ಹಾಗೂ ಭೂತಾರಾಧನೆಯ ವಿಚಾರಗಳನ್ನು ಒಳಗೊಂಡ ಸಿನಿಮಾವಾಗಿದ್ದರಿಂದ ಈ ಬಗ್ಗೆ ರಿಷಬ್ ಶೆಟ್ಟಿಗೆ ಪ್ರಶ್ನೆ ಕೇಳಲಾಯಿತು. ಅದೇನೆಂದರೆ, ದೇವರು ಅಂದರೆ ನಿಮ್ಮ ಗ್ರಹಿಕೆ ಏನು? ಎಂದು. ಇದಕ್ಕೆ ಉತ್ತರಿಸಿದ ರಿಷಬ್, ಸಿನಿಮಾ ಅಂದ್ರೆ ದೇವರು. ನನಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದು ಸಿನಿಮಾ. ನನ್ನನ್ನು ಇಲ್ಲಿಯವರೆಗೆ ಕರೆ ತಂದಿದ್ದು ಕೂಡ ಸಿನಿಮಾ ಎಂದು ರಿಷಬ್ ಹೇಳಿದರು.
ಹಾಗೇ ನಾನು ಸಿನಿಮಾ ಮಾಡುವಾಗ ಯಾವ ಶೈಲಿಯ ಚಿತ್ರ ಮಾಡಬೇಕು ಎಂಬುದನ್ನು ಯೋಚಿಸುವುದಿಲ್ಲ. ಬದಲಾಗಿ ಅಜ್ಜಿ ಹೇಳುವ ಕಥೆಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಹೀಗಾಗಿ, ಸ್ಕ್ರಿಪ್ಟ್ ಬರೆಯುವಾಗ ಅದನ್ನು ತಲೆಯಲ್ಲಿ ಇಟ್ಟುಕೊಂಡಿರುತ್ತೇನೆ ಎಂದು ಹೇಳಿದರು.