10ನೇ ತರಗತಿ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದಲೇ ಲೈಂಗಿಕ ದೌರ್ಜನ್ಯ ! ಅಶ್ಲೀಲ ಮಾತುಗಳನ್ನಾಡಲು ಒತ್ತಾಯ!

ಇತ್ತೀಚೆಗೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿದ್ದು, ಆದರೆ ಇದೀಗ ಹತ್ತನೇ ತರಗತಿಯ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ. ಇನ್ನೂ ಈ ಘಟನೆ ಚೆನ್ನೈ ನ ಶಾಲೆಯೊಂದರಲ್ಲಿ ನಡೆದಿದೆ.

10ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಆತನ ಸಹಪಾಠಿಗಳೇ ಲೈಂಗಿಕವಾಗಿ ದೌರ್ಜನ್ಯ ನೀಡುತ್ತಿದ್ದರು ಎಂಬ ಆಶ್ಚರ್ಯಕರ ಸಂಗತಿಯೊಂದು ತಿಳಿದುಬಂದಿದೆ. ಚೆನ್ನೈನ ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿದ್ದ ಹುಡುಗ ಹೊಟ್ಟೆನೋವು, ತಲೆಸುತ್ತು ಮತ್ತು ಮೈಕೈ ನೋವಿನಿಂದ ಬಳಲುತ್ತಿದ್ದ ಎಂದು ಆತನನ್ನು ನಗರದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆ ವೇಳೆ ಶಾಲೆಯಲ್ಲಿ ತನ್ನ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಲಕ ಚಿಕಿತ್ಸೆ ನೀಡುವ ವೈದ್ಯರ ಬಳಿ ಹೇಳಿಕೊಂಡಿದ್ದಾನೆ. ವೈದ್ಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ದೌರ್ಜನ್ಯಕ್ಕೆ ಒಳಗಾದ ಬಾಲಕನ ತಂದೆ, ನಾಲ್ಕು ತಿಂಗಳ ಹಿಂದೆಯಷ್ಟೇ ಪಾಂಡಿಚೇರಿಯ ಕೇಂದ್ರೀಯ ವಿದ್ಯಾಲಯದಿಂದ ಚೆನ್ನೈನ ಕೇಂದ್ರೀಯ ವಿದ್ಯಾಲಯಕ್ಕೆ ವರ್ಗಾವಣೆ ಮಾಡಿದ್ದೆವು. ಶಾಲೆಗೆ ಸೇರಿ ಒಂದು ತಿಂಗಳ ನಂತರ ಮಗ ಈ ಬಗ್ಗೆ ನಮ್ಮಲ್ಲಿ ದೂರು ಹೇಳಿಕೊಳ್ಳುತ್ತಿದ್ದ. ಶಾಲೆಯಲ್ಲಿ ಇತರ ವಿದ್ಯಾರ್ಥಿಗಳು ನಾನು ಅಶ್ಲೀಲ ಶಬ್ದಗಳನ್ನು ಮಾತಾಡಬೇಕು ಎನ್ನುತ್ತಿದ್ದರು. ಮಾತನಾಡದೇ ಇದ್ದಾಗ ನನ್ನ ಹೊಟ್ಟೆಗೆ, ತಲೆ, ಮತ್ತು ತೊಡೆಯ ಭಾಗಕ್ಕೆ ಘಾಸಿ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಶಾಲೆಯ ರೆಸ್ಟ್‌ ರೂಮ್‌ನಲ್ಲಿ ನನ್ನನ್ನು ಕೂಡಿಹಾಕಿ ಬಟ್ಟೆಯನ್ನು ಬಿಚ್ಚಿಸಿದ್ದಲ್ಲದೆ, ಹುಡುಗನೊಬ್ಬನ ಹಸ್ತಮೈಥುನ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ನನ್ನ ಮಗ ವಿರೋಧಿಸಿದ್ದಕ್ಕೆ ಅವರು ಮತ್ತೆ ಹೊಡೆದಿದ್ದಾರೆ. ಮಗ ಶಾಲೆಗೆ ಹೋಗಲು ಭಯಪಡುತ್ತಿದ್ದ ಎಂದು ಬಾಲಕ ಮನೆಯಲ್ಲಿ ಬಂದು ಹೇಳಿದ ಮಾತುಗಳನ್ನು ಹೇಳಿದರು. ಮಗನ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದ್ದೇವೆ. ಆದರೆ, ಮೌಖಿಕ ದೂರು ಕೊಟ್ಟ ದಿನದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಇನ್ನೊಮ್ಮೆ ಇಂಥ ದೂರು ದಾಖಲಾದರೆ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದಿದ್ದಾರೆ.

ಶಾಲೆಯಲ್ಲಿ ಆಟ,ಪಾಠ ಎಂದು ಜೊತೆಯಾಗಿ ಸ್ನೇಹಿತರ ಹಾಗೆ ಇದ್ದು ಓದಬೇಕಾದ ಹುಡುಗರು ಈ ರೀತಿಯಾಗಿ ವರ್ತಿಸುತ್ತಾರೆ ಎಂದರೆ ಅವರ ಪಾಲಕರು ಮಕ್ಕಳನ್ನು ಹೇಗೆ ಬೆಳೆಸಿರಬೇಡ. ಶಾಲೆಗಳಲ್ಲಿ ಅವರಿಗೆ ಯಾವುದೇ ರೀತಿಯಲ್ಲಿ ಕೌನ್ಸೆಲಿಂಗ್‌ ನೀಡಲಾಗುದಿಲ್ಲವೇ? ಮಗನಿಗೆ ವಿದ್ಯಾರ್ಥಿಗಳು ನೀಡುವ ಮಾನಸಿಕ,ದೈಹಿಕ ಹಿಂಸೆಯನ್ನು ಕೇಳಲು ಬೇಸರವಾಗುತ್ತದೆ ಎಂದು ಆತನ ತಂದೆ ಹೇಳಿದರು.

ಇನ್ನೂ ಹುಡುಗನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಆತನಿಗೆ ಸಾಕಷ್ಟು ಆಂತರಿಕ ಗಾಯಗಳಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಐಸಿಯುನಲ್ಲಿ ಆತನ ಚಿಕಿತ್ಸೆ ನಡೆಯುತ್ತಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಆದರೆ, ಪೋಷಕರಿಂದಾಗಲಿ, ಶಾಲಾ ಆಡಳಿತ ಮಂಡಳಿಯಿಂದಾಗಲಿ ಇದುವರೆಗೆ ಪೊಲೀಸರಿಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲವಂತೆ.

Leave A Reply

Your email address will not be published.