ಕುರಿಗಳು ವೃತ್ತಾಕಾರವಾಗಿ ಸುತ್ತುತ್ತಿರುವುದರ ಹಿಂದಿನ ರಹಸ್ಯ ಬಯಲು!
ಈ ಹಿಂದೆ ಚೀನಾದಲ್ಲಿ ಸತತವಾಗಿ 14 ದಿನಗಳ ಕಾಲ ಕುರಿಗಳು ವೃತ್ತಾಕಾರವಾಗಿ ಪ್ರದಕ್ಷಿಣೆ ಹಾಕಿದ ದೃಶ್ಯವು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ವಿಜ್ಞಾನಿಯೊಬ್ಬರು ಇದರ ಹಿಂದಿನ ರಹಸ್ಯವನ್ನು ಬಯಲಿಗೆಳೆದಿದ್ದಾರೆ.
ಚೀನಾದ ಮಂಗೋಲಿಯಾ ಪ್ರಾಂತ್ಯದಲ್ಲಿ, ಹಗಳಿರುಳೆನ್ನದೆ ನೂರಾರು ಕುರಿಗಳು ವೃತ್ತಾಕಾರವಾಗಿ ಪ್ರದಕ್ಷಿಣೆ ಹಾಕಿದ ವಿಚಿತ್ರ ಘಟನೆ ನಡೆದಿತ್ತು. ಅದು ಕೂಡ ಒಂದೆರಡು ದಿನವೆಲ್ಲ ಬರೋಬ್ಬರಿ 14 ದಿನಗಳ ಕಾಲ ವೃತ್ತಾಕಾರವಾಗಿ ಸುತ್ತು ಹಾಕಿವೆ. ಇದಕ್ಕೆ ಕಾರಣ ಏನು ಎಂದು ಯಾರಿಗೂ ತಿಳಿದಿರಲಿಲ್ಲ. ಆದರೆ ಇದೀಗ ವಿಜ್ಞಾನಿಯೊಬ್ಬರು ಕುರಿಗಳ ಈ ವರ್ತನೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಈ ಬಗ್ಗೆ ಇಂಗ್ಲೆಂಡ್‌ನ ಗ್ಲೌಸೆಸ್ಟರ್‌ನಲ್ಲಿರುವ ಹಾರ್ಟ್‌ಪುರಿ ವಿಶ್ವವಿದ್ಯಾಲಯದ ಕೃಷಿ ವಿಭಾಗದ ಪ್ರಾಧ್ಯಾಪಕ ಮತ್ತು ನಿರ್ದೇಶಕ ಮ್ಯಾಟ್ ಬೆಲ್ ಅವರು ಕೆಲವು ಮಾಹಿತಿಯನ್ನು ತಿಳಿಸಿದ್ದಾರೆ. ಕುರಿಗಳು ಹೆಚ್ಚು ಕಾಲ ದೊಡ್ಡಿಯಲ್ಲಿ ಇದ್ದಿರುವುರಿಂದ ಇದು ಸ್ಟೀರಿಯೊಟೈಪಿಕ್ ನಡವಳಿಕೆಗೆ ಕಾರಣವಾಗಿರಬಹುದು. ಹಾಗೂ ಖಿನ್ನತೆಗೆ ಒಳಗಾಗಿದ್ದ ಕುರಿಗಳು ನಿರಾಶಾ ಭಾವನೆಗೆ ತುತ್ತಾಗಿದ್ದವು. ಹೀಗಾಗಿಯೇ ಕುರಿಗಳು ವೃತ್ತಾಕಾರವಾಗಿ ಪ್ರದಕ್ಷಿಣೆ ಹಾಕಿದೆ, ಇದು ಒಳ್ಳೆಯ ಬೆಳವಣಿಗೆಯಲ್ಲ. ತಾವು ಮಾಡುತ್ತಿರುವ ಕಾರ್ಯದ ಅರಿವಿಲ್ಲದೆ ಇನ್ನೊಂದು ಕುರಿಯನ್ನು ಅನುಸರಿಸುತ್ತಿವೆ ಎಂದು ಮ್ಯಾಟ್ ತಿಳಿಸಿದ್ದಾರೆ.
ಇನ್ನೂ ಪೀಪಲ್ಸ್ ಡೈಲಿ ವರದಿಯ ಪ್ರಕಾರ ಚೀನಾದಲ್ಲಿ ಕುರಿಗಳು ನವೆಂಬರ್ 4 ರಿಂದ ವೃತ್ತಾಕಾರದಲ್ಲಿ ಚಲಿಸುತ್ತಿದ್ದವು ಎನ್ನಲಾಗಿದೆ. ಅವುಗಳು ಏನಾದರೂ ಆಹಾರವನ್ನು ಸೇವಿಸಲು ತಮ್ಮ ಚಲನೆಯನ್ನು ನಿಲ್ಲಿಸಿದೆಯೇ? ಅಥವಾ ಇನ್ನೂ ಚಲಿಸುತ್ತಲೇ ಇದೆಯೇ? ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಹೇಳಲಾಗಿದೆ.