ತುಳುನಾಡ ದೈವಾರಾಧಕರಿಂದ ಎಚ್ಚರಿಕೆಯ ಸಂದೇಶ| ಯಾಕಾಗಿ ?
ಕಾಂತಾರ (Kantara) ಚಿತ್ರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಹಿಟ್ ಆಗಿ 400ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ನಲ್ಲಿ ಕಮಾಯಿ ಮಾಡಿದ್ದು ತಿಳಿದಿರುವಂತದ್ದೇ!!!
ಕರಾವಳಿಯ ಕಲೆ, ಆಚರಣೆಯನ್ನೊಳಗೊಂಡ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಪರಿಚಯಿಸಿದೆ. ಅದರಲ್ಲೂ ಕೂಡ ದೈವಾರಾಧನೆ (Daivaradhane) ಕುರಿತು ಚಿತ್ರದಲ್ಲಿ ಅದ್ಬುತವಾಗಿ ಕಣ್ಣಿಗೆ ಕಟ್ಟುವಂತೆ ಬಿಂಬಿಸಲಾಗಿದೆ. ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿ, ಗುಳಿಗ ರೀತಿ ತುಳು ನಾಡಿನಲ್ಲಿ ನೂರಾರು ದೈವಗಳಿದ್ದು, ಕರಾವಳಿಯ ಜನ ದೈವಗಳನ್ನು ಭಕ್ತಿ ಭಾವದಿಂದ ಆರಾಧನೆ ಮಾಡುತ್ತಾರೆ. ಇಲ್ಲಿನ ಜನರಿಗೆ ಈ ದೈವಗಳ ಮೇಲೆ ಅಪಾರ ನಂಬಿಕೆಯಿದ್ದು, ದೇವರು ನಮ್ಮನ್ನು ಕೈ ಬಿಟ್ಟರೂ ಕೂಡ ದೈವಗಳು ಎಂದಿಗೂ ನಂಬಿದವರ ಕೈ ಬಿಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಜನರಿಗೆ ನಂಬಿಕೆ ಇದೆ.ಹಿಂದಿನಿಂದಲೂ ಇಲ್ಲಿಯವರೆಗೂ ಈ ಆಚರಣೆಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಈ ಭಾಗದ ಜನರು ಯಾವುದೇ ಸಮಸ್ಯೆ ಬಂದರೂ ದೈವಗಳಲ್ಲಿ ಪ್ರಾರ್ಥನೆ ಸಲ್ಲಿಸಿವುದು ವಾಡಿಕೆ. ಸಾಕಷ್ಟು ಸಮಸ್ಯೆಗಳನ್ನು ಇಲ್ಲಿನ ಜನರು ದೈವದ ಸನ್ನಿಧಿಯಲ್ಲೇ ಬಗೆಹರಿಸಿಕೊಳ್ತಾರೆ. ಪಂಜುರ್ಲಿಯನ್ನು ಮನೆಯ ಒಳಗಡೆ ಇಲ್ಲವೆ ಗುಳಿಗನನ್ನು ಮನೆ ಹೊರ ಭಾಗದಲ್ಲೋ ಗುಡ್ಡ ಪ್ರದೇಶಗಳಲ್ಲೂ ಇಟ್ಟು ಪೂಜಿಸುವ ಜೊತೆಗೆ ಇಲ್ಲಿನ ಜನ ಗುಳಿಗನನ್ನು ಕ್ಷೇತ್ರ ಪಾಲಕ ಎಂದು ನಂಬುತ್ತಾರೆ. ಮನೆ ಜಾಗವನ್ನು ಗುಳಿಗ ರಕ್ಷಣೆ ಮಾಡುತ್ತಾರೆ ಎಂಬುದು ಜನರ ನಂಬಿಕೆ. ಇಂದಿಗೂ ಪಂಜುರ್ಲಿ ಕೋಲದ ಸಂದರ್ಭದಲ್ಲಿ ಹಂದಿಯ ಮುಖವಾಡ ಧರಿಸಲಾಗುತ್ತದೆ. ಈ ಆಚರಣೆ ಈ ದೈವದ ಶಕ್ತಿ ಆಚರಣೆಯ ಹಿಂದೆ ಅಡಕವಾಗಿರುವ ಸಾರವನ್ನು ಪ್ರದರ್ಶಿಸುತ್ತದೆ.
ಕಾಂತಾರ ಸಿನಿಮಾ ಭರ್ಜರಿ ಗೆಲುವಿನ ಬಳಿಕ, ಗುಳಿಗ ಆಚರಣೆಗಳು ಹೆಚ್ಚು ಪ್ರಚಲಿತವಾಗಿದೆ ಎನ್ನಲಾಗುತ್ತಿದ್ದು, ಇದೀಗ, ಜನರ ದೈವಗಳ ಮೇಲಿನ ನಂಬಿಕೆಯನ್ನು ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ ಎನ್ನುವ ಆರೋಪವು ಕೇಳಿಬರುತ್ತಿದೆ. ದೈವದ ಹೆಸರಲ್ಲಿ ಅನೇಕರು ಹಣ ಲೂಟಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಆರೋಪ ಜೋರಾಗಿ ಸದ್ದು ಮಾಡುತ್ತಿವೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳು ಕೆಲವೊಂದು ಪೋಸ್ಟ್ಗಳು ಹರಿದಾಡುತ್ತಿದ್ದು, ಈ ರೀತಿ ಮಾಡುತ್ತಿರುವವರಿಗೆ ತುಳುನಾಡ ದೈವಾರಾಧಕರು ಖಡಕ್ ವಾರ್ನಿಂಗ್ (Warning) ಕೊಟ್ಟಿದ್ದಾರೆ.
ಬೆಂಗಳೂರು, ಮೈಸೂರು ಭಾಗದ ಜನರು ದೈವನಂಬಿಕೆಗಳನ್ನು ಮುರಿದು, ಪ್ರಚಾರಕ್ಕಾಗಿ, ದುಡ್ಡು ಮಾಡುವುದಕ್ಕಾಗಿ ಅಲ್ಲಲ್ಲಿ ದೈವದ ಕಟ್ಟೆಗಳನ್ನು ನಿರ್ಮಿಸಿ , ಗೂಗಲ್ ಪೇ ಮಾಡಿ, ಫೋನ್ ಪೇ ಮಾಡಿ ಹಣ ಲೂಟಿ ಮಾಡುವ ದಂಧೆ ನಡೆಯುತ್ತಿದೆ ಎನ್ನಲಾಗಿದ್ದು, ಹಣದ ಮೋಹಕ್ಕೆ ಬಿದ್ದು, ಸಿಗುವ ದುಡ್ಡಿನ ಆಸೆಗೆ ಅಲ್ಲಿ ಹೋಗಿ ನೇಮ ಕಟ್ಟುವವರಿಗೆ, ತಾಸೆ ಬ್ಯಾಂಡ್ ಸೆಟ್‌ನವರಿಗೆ, ಮಧ್ಯಸ್ಥ, ಮುಕ್ಕಾಲ್ದಿ ವಹಿಸುವ ಜೊತೆಗೆ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವವರಿಗೆ ಮುಂದೆ ನಮ್ಮ ಊರಿನ ಯಾವುದೇ ದೈವಸ್ಥಾನ, ಮನೆಗಳಲ್ಲಿ ನೇಮದ ಜಾಗಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೀಗ,ತುಳುನಾಡ ದೈವಾರಾಧಕರು ಎಚ್ಚರಿಕೆ ನೀಡಿದ ಫೋಟೋ ಒಂದು ವೈರಲ್ ಆಗಿದ್ದು,. ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ .