ಕನ್ನಡವೇ ಸತ್ಯ ಕನ್ನಡವೇ ನಿತ್ಯ | ರೋಗಿಗಳಿಗೆ ಕನ್ನಡದಲ್ಲಿಯೇ ಪ್ರಿಸ್ಕ್ರಿಪ್ಶನ್ ಬರೆಯೋ ವೈದ್ಯ!

ಆಸ್ಪತ್ರೆಯಲ್ಲಿ ವೈದ್ಯರು ಬರೆದ ಪ್ರಿಸ್ಕ್ರಿಪ್ಷನ್ ಯಾರಿಗೆ ಅರ್ಥ ಆಗುತ್ತದೆ ಹೇಳಿ, ಅವರು ಆಂಗ್ಲ ಭಾಷೆಯಲ್ಲಿ ಬರೆದ ಪ್ರಿಸ್ಕ್ರಿಪ್ಷನ್ ಹಲವರಿಗೆ ಅರ್ಥವೇ ಆಗುವುದಿಲ್ಲ. ಅದಂತು ಮೆಡಿಕಲ್‌ ಶಾಪ್ ನವರಿಗೆ ಮಾತ್ರ ಅರ್ಥವಾಗುತ್ತದೆ. ಆದರೆ ಇಲ್ಲೊಬ್ಬರು ಮೈಸೂರಿನ ಡಾಕ್ಟರ್ ಕನ್ನಡದಲ್ಲಿಯೇ ರೋಗಿಗಳಿಗೆ ಪ್ರಿಸ್ಕ್ರಿಪ್ಷನ್ ಬರೆದುಕೊಡುತ್ತಾರೆ.

 

ಹೌದು, ಮೈಸೂರು ಮೂಲದ ಖಾಸಗಿ ವೈದ್ಯರೊಬ್ಬರು ಕನ್ನಡ ರಾಜ್ಯೋತ್ಸವದಂದು ಔಷಧಿಗಳ ಪ್ರಿಸ್ಕ್ರಿಪ್ಷನ್ ಅನ್ನು ಮಾತೃಭಾಷೆಯಾದ ಕನ್ನಡದಲ್ಲಿ ಬರೆದು ರೋಗಿಗಳು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನು ಕನ್ನಡದಲ್ಲಿ ಔಷಧಿಗಳ ಪ್ರಿಸ್ಕ್ರಿಪ್ಷನ್ ಅನ್ನು ಬರೆದ ವೈದ್ಯರು, ಡಾ.ರಘುನಂದನ ಶೇಖರಪ್ಪ ಎಂಬವರು ಇವರು ಬೋಗಾದಿಯ ಖಾಸಗಿ ಕ್ಲಿನಿಕ್‌ನಲ್ಲಿ ಮೂಳೆಚಿಕಿತ್ಸಕ ಸಲಹೆಗಾರರಾಗಿದ್ದಾರೆ. ಇವರು ಕನ್ನಡ ರಾಜ್ಯೋತ್ಸವದಂದು ಔಷಧಿಗಳ ಪ್ರಿಸ್ಕ್ರಿಪ್ಷನ್ ಅನ್ನು ಆಂಗ್ಲ ಭಾಷೆಯ ಬದಲಾಗಿ ಕನ್ನಡದಲ್ಲಿಯೇ ಹಲವಾರು ರೋಗಿಗಳಿಗೆ ಬರೆದು ಕೊಟ್ಟಿದ್ದಾರೆ. ಇದು ಮೊದಲ ಪ್ರಯತ್ನವಾಗಿದ್ದು, ಇನ್ನೂ ಕನ್ನಡದಲ್ಲಿಯೇ ಪ್ರಿಸ್ಕ್ರಿಪ್ಷನ್ ಬರೆಯುವುದನ್ನು ಮುಂದುವರಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಡಾ.ರಘುನಂದನ ಅವರು ಕನ್ನಡಿಗನಾಗಿದ್ದು, ಕನ್ನಡದಲ್ಲಿ ಔಷಧಿಗಳ ಹೆಸರನ್ನು ಸುಲಭವಾಗಿ ಬರೆಯಬಹುದು ಎಂದು ಅವರು ಹೇಳುತ್ತಾರೆ. ಬೋಗಾದಿಯಲ್ಲಿರುವ ಮಾನಸ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ ಕನ್ನಡ ತಿಳಿದಿರುವ ಫಾರ್ಮಸಿ ಘಟಕ ಇರುವುದರಿಂದ ರೋಗಿಗಳಿಗೆ ಔಷಧ ವಿತರಿಸಲು ಯಾವುದೇ ತೊಂದರೆಯಾಗಲಿಲ್ಲ. ಹಾಗೇ ಮುಂಜಾಗ್ರತೆ ಕ್ರಮವಾಗಿ ಡಾ.ರಘುನಂದನ ಅವರು, ಮೆಡಿಕಲ್‌ನವರು ಸರಿಯಾದ ಔಷಧಿಗಳನ್ನು ನೀಡಿದ್ದಾರೆಯೇ ಎಂದು ತಿಳಿದುಕೊಳ್ಳಲು ರೋಗಿಗಳಿಗೆ ಆಸ್ಪತ್ರೆಯಿಂದ ಹೊರಡುವ ಮೊದಲು ಔಷಧಿಗಳನ್ನು ತಮ್ಮ ಬಳಿ ತೋರಿಸಲು ಹೇಳಿದ್ದಾರೆ.

ಇನ್ನೂ ರಘುನಂದನ ಅವರು ಇತ್ತೀಚೆಗೆ ಮೂಡುಬಿದಿರೆಯಲ್ಲಿ ನಡೆದ ವೈದ್ಯಕೀಯ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಆ ವೇಳೆ ಆಂಗ್ಲ ಭಾಷೆಯ ಬದಲಾಗಿ ಕನ್ನಡದಲ್ಲಿ ಪ್ರಿಸ್ಕ್ರಿಪ್ಷನ್ ಬರೆಯಲು ಇತರ ವೈದ್ಯರನ್ನು ಪ್ರೇರೇಪಿಸಿದರು. ಡಾ.ರಘುನಂದನ ಅವರಿಗೆ ಅವರ ಶಿಕ್ಷಕರಾದ ಡಾ. ಟಿ ಮಂಜುನಾಥ್ ಅವರು ಕನ್ನಡದಲ್ಲಿ ಔಷಧಿಗಳ ಪ್ರಿಸ್ಕ್ರಿಪ್ಷನ್ ಬರೆಯಲು ಸ್ಪೂರ್ತಿಯಂತೆ‌.

ಹಾಗೇ ಕನ್ನಡ ಹೋರಾಟಗಾರ ಎಂ. ಚಂದ್ರಶೇಖರ್ ಅವರು ಡಾ. ರಘುನಂದನ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂದು ನಾನಾ ಕ್ಷೇತ್ರಗಳಲ್ಲಿಯೂ ಕನ್ನಡ ಬಳಕೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದೀಗ ಡಾ. ರಘುನಂದನ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.

Leave A Reply

Your email address will not be published.