Kantara : “ಕಾಂತಾರ ಸಿನಿಮಾ ತಂಡ ನಮ್ಮನ್ನು ಇಲ್ಲಿಯವರೆಗೆ ಸಂಪರ್ಕಿಸಿಲ್ಲ” – ಥೈಕ್ಕುಡಂ ಬ್ರಿಡ್ಜ್
ರಿಷಬ್ ಶೆಟ್ಟಿ ನಟನೆ , ನಿರ್ದೇಶನದ ‘ಕಾಂತಾರ’ ಪ್ರಪಂಚದಾದ್ಯಂತ ಭರ್ಜರಿ ಸದ್ದು ಮಾಡಿದೆ. ಸೆ.30ರಂದು ತೆರೆ ಮೇಲೆ ಅಪ್ಪಳಿಸಿದ ‘ಕಾಂತಾರ’ ಆರಂಭದಿಂದಲೂ ಉತ್ತಮ ಪ್ರದರ್ಶನವನ್ನೇ ಕಂಡಿದೆ. ಅದಷ್ಟೇ ಅಲ್ಲದೆ, ಸಾಕಷ್ಟು ದಾಖಲೆಗಳನ್ನು ಮಾಡಿದೆ.
ಈ ನಡುವೆ ಕಾಂತಾರ ಹಲವಾರು ವಿವಾದಗಳಿಗೆ ಸಿಲುಕಿದ್ದೂ ಇದೆ. ಅದರಲ್ಲೂ ಈ ಸಿನಿಮಾದಲ್ಲಿ ಸಿನಿಪ್ರಿಯರ ಮನಗೆದ್ದ ‘ವರಹ ರೂಪಂ..’ ಹಾಡು ವಿವಾದಕ್ಕೆ ಸಿಕ್ಕಿಕೊಂಡಿತ್ತು. ಮಲಯಾಳಂನ ಥೈಕ್ಕುಡಂ ಬ್ರಿಡ್ಜ್ ಅನ್ನೋ ಬ್ಯಾಂಡ್ ಕಂಪೋಸ್ ಮಾಡಿದ್ದ ‘ನವರಸಂ’ ಹಾಡನ್ನು ಅಜನೀಶ್ ಲೋಕನಾಥ್ ಕದ್ದಿದ್ದಾರೆ ಎಂಬ ಆರೋಪ ಮಾಡಲಾಗಿತ್ತು.
ಅಷ್ಟೇ ಅಲ್ಲದೆ, ಈ ಬ್ಯಾಂಡ್ ‘ಕಾಂತಾರ’ ತಂಡದ ವಿರುದ್ಧ ಕಾನೂನಿನ ಮೊರೆ ಹೋಗಿತ್ತು. ಆದರೆ ಈ ಬ್ಯಾಂಡ್‌ನ ಸದಸ್ಯ ವಿಯಾನ್ ಫರ್ನಾಂಡೀಸ್ ‘ವರಹ ರೂಪಂ..’ ವಿವಾದ ಬಗ್ಗೆ ದ ಫೆಡರಲ್‌ನ ಸೀನಿಯರ್ ಆಂಕರ್ ಶ್ರೇಯಸ್ ಜೊತೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಆ ಮಾಹಿತಿಗಳು ಏನೆಂದು ಇಲ್ಲಿದೆ.
ಅಜನೀಶ್ ಲೋಕನಾಥ್ ಬ್ಯಾಂಡ್‌ನ ಸದ್ಯಸ ಗೋವಿಂದ್ ಅವರೊಂದಿಗೆ ಚರ್ಚೆ ಮಾಡಿದ್ದರು. ಗೋವಿಂದ್ ಇವರು ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್‌ನಲ್ಲಿ ವಯಲಿನ್ ವಾದ್ಯ ನುಡಿಸುವುದರ ಜೊತೆಗೆ ಗಾಯಕರು ಕೂಡ ಆಗಿದ್ದಾರೆ. ಇವರು ತಮಿಳಿನ ಸೂಪರ್ ಹಿಟ್ ಸಿನಿಮಾ ’96’ನ ಸಂಗೀತ ನಿರ್ದೇಶಕರಾಗಿದ್ದರು. ಇವರೊಂದಿಗೆ ಅಜನೀಶ್ ಚರ್ಚೆ ನಡೆಸಿದ ಬಳಿಕ ಸಂದರ್ಶನವೊಂದರಲ್ಲಿ ನಮಗೂ ‘ನವರಸಂ’ ಹಾಡಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದರಂತೆ. ಇನ್ನು ಅಜನೀಶ್ ಅವರ ಈ ಹೇಳಿಕೆ ನವರಸಂ ತಂಡಕ್ಕೆ ಅಸಮಾಧಾನ ಉಂಟು ಮಾಡಿದೆ.
ಇನ್ನು ಕೆಲವು ಸಂಭಾಷಣೆಯನ್ನು ವಿಯಾನ್ ಫರ್ನಾಂಡೀಸ್ ಸಂದರ್ಶಕರ ಜೊತೆ ಹಂಚಿಕೊಂಡಿದ್ದಾರೆ. ‘ನಾವು ಅವರ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ಅವರು ನಮ್ಮೊಂದಿಗೆ ಸಂಪರ್ಕದಲ್ಲಿ ಇದ್ದರು. ಒಳಗೆ ಏನು ನಡೆಯುತ್ತಿದೆ ಅನ್ನೋದು ಅವರಿಗೆ ಗೊತ್ತಿತ್ತು. ನವರಸಂ ಹಾಡನ್ನು ಖಂಡಿತವಾಗಿಯೂ ರೆಫರೆನ್ಸ್ ಆಗಿ ಬಳಸಿಕೊಂಡಿದ್ದಾರೆ. ಇದು ಸಿನಿಮಾದ ರೆಫರೆನ್ಸ್ ಟ್ರ್ಯಾಕ್ ಆಗಿತ್ತು. ಇನ್ನು ನಿರ್ದೇಶಕರಿಗೆ ‘ನವರಸಂ’ ಹಾಡಿನ ಹಾಗೇ ಕೇಳುವ ಹಾಡು ಬೇಕಿತ್ತು. ಅದಕ್ಕಾಗಿ ಅವರು, ನವರಸಂ ರೀತಿಯ ಸಾಂಗ್ ಅನ್ನು ಕಂಪೋಸ್ ಮಾಡಿದ್ದಾರೆ. ಇದು ನಮಗೆ ತಿಳಿದಾಗ ಇದನ್ನು ನಾವು ಅರ್ಥ ಮಾಡಿಕೊಳ್ಳುವುದಕ್ಕೆ ತುಂಬಾ ಸಮಯ ತೆಗೆದುಕೊಂಡೆವು. ಆ ನಂತರವೇ ನಾವು ಹೋರಾಟ ಮಾಡಲು ಶುರುಮಾಡಿದೆವು.
ಅಷ್ಟೇ ಅಲ್ಲದೆ,’ ಕೋವಿಡ್ ಸಮಯದ ನಂತರ ನಾವು ತುಂಬಾನೇ ಬ್ಯುಸಿಯಾಗಿದ್ದೆವು. ನಮಗೆ ಸಾಕಷ್ಟು ಶೋಗಳಿದ್ದವು. ಹಾಗಾಗಿ ನಾವು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಲು ಸಾಧ್ಯವಾಗಿರಲಿಲ್ಲ. ಆದರೆ ನಮಗೆ ಅಭಿಮಾನಿಗಳಿಂದ ಈ ವಿಷಯ ತಿಳಿದು ಬಂದಿದೆ. ಸಿನಿಮಾ ನೋಡಲು ಥಿಯೇಟರ್ ಗೆ ಹೋದ ಜನರು ಮೊದಲು ಈ ಸಾಂಗ್ ಅನ್ನು ಕಂಪೋಸ್ ಮಾಡಿದ್ದು, ಥೈಕ್ಕುಡಂ ಬ್ರಿಡ್ಜ್ ಟೀಂ ಅಂತಲೇ ಭಾವಿಸಿದ್ದರು. ನಮಗೆ ಸಾಕಷ್ಟು ಮೆಸೇಜ್‌ಗಳು ಕೂಡ ಬರಲಾರಂಭಿಸಿತ್ತು. ಹಾಗಾಗಿ ನಾವು ಇನ್ನೊಬ್ಬ ಸಂಗೀತಗಾರರನ್ನು ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ಹಿಡಿಯಿತು. ಎಲ್ಲಾ ತಿಳಿದುಕೊಂಡ ನಂತರ ನಾವು ಕೇಸ್ ಫೈಲ್ ಮಾಡಲು ಮುಂದಾದೆವು.’
ಇನ್ನು’ಇಷ್ಟೆಲ್ಲ ಆದ ಮೇಲೆ ಇವರು ಹಣಕ್ಕೋಸ್ಕರ, ಹೆಸರಿಗೋಸ್ಕರ ಈ ರೀತಿಯಾಗಿ ಗದ್ದಲ ಎಬ್ಬಿಸಿದ್ದಾರೆ, ಕಾಂತಾರ ಸಿನಿಮಾಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಂತೆಲ್ಲಾ ಹೇಳಿದ್ರು. ಆದರೆ ನಮಗೆ ಈಗಾಗಲೇ ಹೆಸರು ಇದೆ. ಇನ್ನು ಹಣದ ಬಗ್ಗೆ ನವರಸಂ ಹಾಡಿನ ರೈಟ್ಸ್ ಹೊಂದಿರುವ ಮಾತೃಭೂಮಿಯವರು ಯೋಚನೆ ಮಾಡುತ್ತಾರೆ. ಆದರೆ, ಇದು ವಿಷಯವಲ್ಲ ಬ್ಯಾಂಡ್ ಕೇಳುತ್ತಿರುವುದು ಕ್ರೆಡಿಟ್. ಹಾಗೇ ಇದು ಒಬ್ಬ ಕಲಾವಿದನಿಗೆ ಮಾತ್ರ ಅಲ್ಲ. ಈ ರೀತಿ ಸ್ವತಂತ್ರವಾಗಿರುವ ಎಲ್ಲಾ ಕಲಾವಿದರ ಪರವಾಗಿ ನಾವು ಹೋರಾಟ ಮಾಡಿದ್ದೇವೆ. ಆದರೆ ಇಷ್ಟೆಲ್ಲಾ ಆದರೂ ಕೂಡ ನಿರ್ದೇಶಕರಿಗೆ ಒಂದೇ ಒಂದು ಬಾರಿ ಫೋನ್ ಮಾಡುವ ಸೌಜನ್ಯ ಕೂಡ ಇಲ್ಲ. ಇಲ್ಲಿವರೆಗೂ ಒಂದು ಬಾರಿಯೂ ಫೋನ್ ಮಾಡಿ ಈ ಬಗ್ಗೆ ಮಾತಾಡಿಲ್ಲ.’
ಆದರೆ ‘ ನಮ್ಮ ಬ್ಯಾಂಡ್ ನ ಸದಸ್ಯರಾದ ಗೋವಿಂದ್ ಅವರ ಜೊತೆ ಸಂಗೀತ ನಿರ್ದೇಶಕರು ಮಾತಾಡಿದ್ದಾರೆ ಇದಿಷ್ಟೇ ಹೊರತು, ಪ್ರೊಡಕ್ಷನ್ ಕಂಪನಿ ಮಾತಾಡಿಲ್ಲ. ಆದರೆ ಅವರು ಮಾತಾಡಿದ್ದೇನೆಂದರೆ, ಒಬ್ಬ ಸಂಗೀತ ನಿರ್ದೇಶಕರಾಗಿ ಇನ್ನೊಬ್ಬ ಸಂಗೀತ ನಿರ್ದೇಶಕರನ್ನು ಅರ್ಥ ಮಾಡಿಕೊಳ್ಳಿ ಎಂದಿದ್ದರು. ಅವರು ಕ್ರೆಡಿಟ್ ಬಗ್ಗೆ ಏನು ಹೇಳಿಲ್ಲ, ಎಲ್ಲೂ ಕ್ರೆಡಿಟ್ ಕೊಡುತ್ತೇವೆ ಅಂತ ಒಂದು ಮಾತು ಕೂಡ ಆಡಿಲ್ಲ. ಸಂಗೀತ ನಿರ್ದೇಶಕರು ವೈಯಕ್ತಿಕವಾಗಿ ಈ ಮಾತುಗಳನ್ನು ಆಡಿದ್ದರು. ಆದರೆ ಸಂದರ್ಶನದಲ್ಲೂ ಕೂಡ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ.’ ಎಂದು ವಿಯಾನ್ ಫರ್ನಾಂಡೀಸ್ ಆರೋಪ ಮಾಡಿದ್ದಾರೆ.