Fenugreek Leaves : ಮೆಂತ್ಯಸೊಪ್ಪು ಚಳಿಗಾಲದಲ್ಲಿ ತಿಂದರೆ ಆರೋಗ್ಯಕ್ಕೆ ಉತ್ತಮ!
ಈಗಾಗಲೇ ಮೈ ನಡುಗುವ ಚಳಿ ಆರಂಭವಾಗಿದೆ. ಚಳಿಗಾಲದಲ್ಲಿ ಆರೋಗ್ಯ ಏರು ಪೇರಾಗುವುದು ಸಹಜ. ಆದರೆ ಮುನ್ನಚ್ಚರಿಕೆ ವಹಿಸುವುದು ಉತ್ತಮ. ಕೆಲವೊಂದು ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಚಳಿಗಾಲದಲ್ಲಿ ಸಮತೋಲನವಾಗಿ ಇರಿಸಬಹುದಾಗಿದೆ. ಹೌದು ಚಳಿಗಾಲದಲ್ಲಿ ಮೆಂತ್ಯಸೊಪ್ಪು ತಿಂದರೆ ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ.
ಮೆಂತ್ಯ ಬೀಜಗಳು ನಮಗೆ ವರ್ಷವಿಡೀ ಸಿಗುತ್ತವೆ. ಆದರೆ ಮೆಂತ್ಯ ಸೊಪ್ಪು ಮಾತ್ರ ಚಳಿಗಾಲದಲ್ಲಿ ಸಿಗುತ್ತದೆ. ಹಸಿಯಾಗಿ ಮೆಂತ್ಯ ಸೊಪ್ಪು ತಿನ್ನುವುದು ಹಲವು ಆರೋಗ್ಯ ಪ್ರಯೋಜನ ತಂದು ಕೊಡುತ್ತದೆ. ಅದಲ್ಲದೆ ಮೆಂತ್ಯ ಸೊಪ್ಪು ಪರಿಪೂರ್ಣ ಪೋಷಕಾಂಶ ಹೊಂದಿದೆ.
ಚಳಿಗಾಲದಲ್ಲಿ ಹಲವು ತರಕಾರಿಗಳು ಸಿಗುತ್ತವೆ. ಅವುಗಳು ಆರೋಗ್ಯಕ್ಕೆ ಹಲವು ರೀತಿಯ ಪೋಷಣೆ ಮತ್ತು ಆರೋಗ್ಯ ಲಾಭ ನೀಡುತ್ತವೆ. ಹೀಗೆ ಚಳಿಗಾಲದಲ್ಲಿ ಸಿಗುವ ಹಸಿರು ಸೊಪ್ಪುಗಳಲ್ಲಿ ಸಿಗುವ ಸೊಪ್ಪು ಅಂದ್ರೆ ಮೆಂತ್ಯ ಸೊಪ್ಪು. ಕೆಲವರಿಗೆ ಮೆಂತ್ಯ ಸೊಪ್ಪು ದಪ್ಪ ಸಾರು ಅಂದರೆ ಪಂಚಪ್ರಾಣ. ಮೆಂತ್ಯ ಸೊಪ್ಪು ಒಂದು ಕಾಲೋಚಿತ ತರಕಾರಿ ಆಗಿದೆ. ಆದ್ದರಿಂದ ಚಳಿಗಾಲದಲ್ಲಿ ಹೇರಳವಾಗಿ ದೊರೆಯುತ್ತವೆ.
ಮೆಂತ್ಯ ಸೊಪ್ಪು ಉಪಯೋಗಳು :
- ಮೆಂತ್ಯ ಎಲೆಗಳು ವಿಟಮಿನ್ ಕೆ ಯಲ್ಲಿ ಸಮೃದ್ಧವಾಗಿವೆ. ಮೂಳೆಗಳ ಆರೋಗ್ಯಕ್ಕೆ ಮೆಂತ್ಯ ಸೊಪ್ಪು ತುಂಬಾ ಪ್ರಯೋಜನಕಾರಿ ಆಗಿದೆ. ಇದು ಮೂಳೆಯಲ್ಲಿ ಆಸ್ಟಿಯೋ-ಟ್ರೋಫಿಕ್ ಚಟುವಟಿಕೆ ಉತ್ತೇಜಿಸುವ ಮೂಲಕ ಮೂಳೆಗಳನ್ನು ಬಲಪಡಿಸುತ್ತದೆ. ಜೊತೆಗೆ ಮೆಂತ್ಯವು ದೇಹದ ಕ್ಯಾಲ್ಸಿಯಂ ಕೊರತೆ ಸಹ ಪೂರೈಸುತ್ತದೆ.
- ಮೆಂತ್ಯ ಸೊಪ್ಪು ಫೀನಾಲಿಕ್ ಮತ್ತು ಫ್ಲೇವನಾಯ್ಡ್ ಸಂಯುಕ್ತ ಹೊಂದಿದ್ದುದೆ. ಇದು ಉತ್ಕರ್ಷಣ ನಿರೋಧಕ ಸಾಮರ್ಥ್ಯ ಸುಧಾರಿಸುತ್ತದೆ. ರೋಗಗಳನ್ನು ದೂರವಿಡುತ್ತದೆ. ರೋಗ ನಿರೋಧಕ ಶಕ್ತಿ ಇರುವುದರಿಂದ ಎಲ್ಲರಿಗೂ ಸೇವಿಸಬಹುದು. • ಅನೇಕ ಜನರು ತೂಕ ನಷ್ಟಕ್ಕೆ ಮೆಂತ್ಯ ಬೀಜದ ನೀರು ಸೇವನೆ ಮಾಡುತ್ತಾರೆ. ಮೆಂತ್ಯ ಸೊಪ್ಪು ಸ್ವಲ್ಪ ಸಂಕೋಚಕ ರುಚಿ ಹೊಂದಿರುತ್ತದೆ. ಹಾಗಾಗಿ ಕೆಲವರಿಗೆ ಹಸಿಯಾಗಿ ತಿನ್ನಲು ಇಷ್ಟ ಆಗಲ್ಲ. ಆದರೆ ಮೆಂತ್ಯ ಸೊಪ್ಪನ್ನು ಹಸಿಯಾಗಿ ಸೇವಿಸುವುದು ಹೆಚ್ಚಿನ ಆರೋಗ್ಯ ಪ್ರಯೋಜನ ನೀಡುತ್ತದೆ.
- ರುಚಿಯ ಜೊತೆಗೆ ಆರೋಗ್ಯಕ್ಕೂ ಮೆಂತ್ಯ ಸೊಪ್ಪು ಸಾಕಷ್ಟು ಹಿತ ನೀಡುತ್ತದೆ. ಇದು ದೇಹದ ಎಲ್ಲಾ ವಿಷಕಾರಿ ವಸ್ತುಗಳು ದೇಹದಿಂದ ಸ್ವಯಂಚಾಲಿತವಾಗಿ ಹೊರ ಹಾಕಲು ಸಹಾಯ ಮಾಡುತ್ತದೆ. ಮೆಂತ್ಯ ಸೊಪ್ಪು ಕರುಳನ್ನು ಸ್ವಚ್ಛಗೊಳಿಸುತ್ತದೆ.
- ಮೆಂತ್ಯ ಸೊಪ್ಪು ಹೆಚ್ಚು ಆರೋಗ್ಯ ವರ್ಧಕವಾಗಿವೆ. ಮೆಂತ್ಯದ ಎಲೆಗಳನ್ನು ಅನೇಕ ವಿಧಗಳಲ್ಲಿ ಬಳಸಬಹುದು. ದಾಲ್, ಪರಾಠ ಅಥವಾ ಪಲ್ಯ ಮಾಡಿ ಸೇವಿಸಬಹುದು. ಮೆಂತ್ಯ ಸೊಪ್ಪು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ ಎಂದು ಪೌಷ್ಟಿಕ ತಜ್ಞ ಲವ್ನೀತ್ ಬಾತ್ರಾ ಅವರು ತಿಳಿಸಿದ್ದಾರೆ.
- ಇದು ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಮೆಂತ್ಯ ಸೊಪ್ಪು ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಹೊಂದಿದೆ. ಇದು ಹೃದಯ ಬಡಿತ ಮತ್ತು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಉತ್ತಮ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸುತ್ತದೆ. ಮೆಂತ್ಯ ಸೊಪ್ಪು ಗ್ಯಾಲಕ್ಟೋಮನ್ನನ್ ಹೊಂದಿದೆ.
- ಮೆಂತ್ಯ ಸೊಪ್ಪು ನೈಸರ್ಗಿಕ ಕರಗುವ ಫೈಬರ್ ಗ್ಯಾಲಕ್ಟೋಮನ್ನನ್ ಹೊಂದಿದೆ. ಇದು ರಕ್ತದ ಸಕ್ಕರೆ ಹೆಚ್ಚುವುದನ್ನು ತಡೆಯುತ್ತದೆ. ಇದು ಇನ್ಸುಲಿನ್ ಉತ್ಪಾದನೆ ಪ್ರೇರೇಪಿಸುವ ಜವಾಬ್ದಾರಿಯುತ ಅಮೈನೋ ಆಮ್ಲಗಳನ್ನು ಸಹ ಒಳಗೊಂಡಿದೆ. ಮಧುಮೇಹಕ್ಕೆ ರಾಮಬಾಣ ಆಗಿದೆ.
ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಮೆಂತ್ಯ ಸೊಪ್ಪಿನ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.