E commerce: ಇ ಕಾಮರ್ಸ್ ಗೆ ಈ ನಿಯಮ ಕಡ್ಡಾಯ |

ಪ್ರಸಿದ್ಧ ಇ- ಕಾಮರ್ಸ್ ವೆಬ್ಸೈಟ್ ಗಳಾಗಿರುವ ಫ್ಲಿಪ್ ಕಾರ್ಟ್ ,ಅಮೆಜಾನ್‌ ವೇದಿಕೆಗಳು ನಕಲಿ ಗ್ರಾಹಕರ ರಿವ್ಯೂ (ವಿಮರ್ಶೆ) ಬರೆಸಿ ಗ್ರಾಹಕರನ್ನು ದಿಕ್ಕು ತಪ್ಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

 

ಹೌದು!!ಇನ್ನು ಇ-ಕಾಮರ್ಸ್‌ ವೇದಿಕೆಗಳು ಸ್ವಯಂ ಪ್ರೇರಿತವಾಗಿ ತಾವು ಒದಗಿಸುವ ಸರಕು ಹಾಗೂ ಸೇವೆಗಳಿಗೆ ಪಾವತಿ ಮಾಡಿ ಬರೆಸಿದ ಗ್ರಾಹಕರ ರಿವ್ಯೂ (ವಿಮರ್ಶೆ)ಗಳನ್ನು ‘ಪೇಯ್ಡ್‌’ ಎಂದು ನಮೂದಿಸಿ ಬಹಿರಂಗ ಪಡಿಸಬೇಕು ಎಂಬ ಕಟ್ಟುನಿಟ್ಟಿನ ನಿಯಮವನ್ನು ಹೊರಡಿಸಲಾಗಿದೆ. ಈ ಮೂಲಕ ಭಾರತ ಆನ್‌ಲೈನ್‌ ರಿವ್ಯೂಗಳಿಗೂ (online reviews) ಮಾನದಂಡ ರಚಿಸಿದ ಮೊದಲ ದೇಶ ಎಂಬ ಖ್ಯಾತಿಗೂ ಪಾತ್ರವಾಗಲಿದೆ.

ಬ್ಯೂರೋ ಆಫ್‌ ಇಂಡಿಯನ್‌ ಸ್ಟಾಂಡರ್ಡ್‌ (Bureau of Indian Standards) ಆನ್‌ಲೈನ್‌ ಗ್ರಾಹಕರ ರಿವ್ಯೂಗಳಿಗಾಗಿ ಹೊಸ ಮಾನದಂಡವನ್ನು ಸಿದ್ಧಪಡಿಸಿದ್ದು, ನ.25ರಿಂದ ಇದು ಜಾರಿಗೆ ಬರಲಿದೆ ಎಂದು ಗ್ರಾಹಕ ವ್ಯವಹಾರ ಕಾರ್ಯದರ್ಶಿ(Consumer Affairs Secretary) ರೋಹಿತ್‌ ಕುಮಾರ್‌ ಸಿಂಗ್‌ (Rohit Kumar Singh) ಮಾಹಿತಿ ನೀಡಿದ್ದು, ಇವುಗಳು ಐಚ್ಛಿಕವಾಗಿದ್ದರೂ ನಕಲಿ ರಿವ್ಯೂಗಳ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಇವುಗಳನ್ನು ಕಡ್ಡಾಯವಾಗಿ ಪರಿಗಣಿಸಲಿದೆ ಎನ್ನಲಾಗಿದೆ.

ಮುಂದಿನ 15 ದಿನಗಳಲ್ಲಿ ಸಂಸ್ಥೆಗಳು ಈ ಎಲ್ಲ ಮಾನದಂಡಗಳನ್ನು ಅನುಸರಿಸುತ್ತವೆಯೇ ಎಂಬುದನ್ನು ಪರಿಶೀಲಿಸಲು ಪ್ರಮಾಣೀಕರಣ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಇ ಕಾಮರ್ಸ್‌ ವೇದಿಕೆಗಳು ಮಾನದಂಡಗಳ ಪ್ರಮಾಣೀಕರಣಕ್ಕೆ ಬಿಎಸ್‌ಐಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಸಾಮಾನ್ಯವಾಗಿ ಆನ್ಲೈನ್ ನಲ್ಲಿ ಸರಕು ಸೇವೆಗಳನ್ನು (goods and services) ಖರೀದಿಸುವ ಮುನ್ನ ಜನರು ಈ ಮೊದಲೇ ವಸ್ತುಗಳನ್ನು ಖರೀದಿ ಮಾಡಿದ ಗ್ರಾಹಕರ ವಿಮರ್ಶೆಗಳನ್ನು ಪರಿಗಣಿಸುವುದು ವಾಡಿಕೆ. ಹೀಗಾಗಿ ಪಾವತಿಸಿದ ರಿವ್ಯೂಗಳಿಂದ ಜನರು ಮೋಸ ಹೋಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಹೊಸ ಮಾನದಂಡಗಳು ಸರಕು ಮತ್ತು ಸೇವೆಗಳ ಪೂರೈಕೆದಾರರು ಸೇರಿ ಪ್ರವಾಸಿ ಸಂಸ್ಥೆ, ರೆಸ್ಟೋರೆಂಟ್ (restaurants) ಹಾಗೂ ಇತರೆ ವಸ್ತುಗಳ ಬಗ್ಗೆ ಆನ್‌ಲೈನ್‌ನಲ್ಲಿ ಗ್ರಾಹಕರ ರಿವ್ಯೂಗಳನ್ನು- ಪದಗಳು, ವಿಡಿಯೋ ಅಥವಾ ಆಡಿಯೋ ರೂಪದಲ್ಲಿ ಪ್ರಕಟಿಸುವ ಎಲ್ಲ ಸಂಸ್ಥೆಗಳಿಗೆ ಅನ್ವಯವಾಗುತ್ತದೆ.

ಬಿಎಸ್‌ಐ ರಿವ್ಯೂಗಳನ್ನು ಕೋರಿದ ರಿವ್ಯೂ ಹಾಗೂ ಅನಪೇಕ್ಷಿತ ರಿವ್ಯೂ ಎಂದು ವಿಂಗಡನೆ ಮಾಡಲಿದ್ದು, ಪ್ರತಿ ಸಂಸ್ಥೆಗಳಲ್ಲಿ ರಿವ್ಯೂ ಅಡ್ಮಿನಿಸ್ಪ್ರೇಟರ್‌ ಎಂಬ ಹುದ್ದೆಯಲ್ಲಿ ವ್ಯಕ್ತಿಯನ್ನು ನೇಮಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಸರಕು ಪೂರೈಕೆದಾರ ಅಥವಾ ರಿವ್ಯೂ ಅಡ್ಮಿನಿಸ್ಪ್ರೇಟರ್‌ ತನ್ನ ಗ್ರಾಹಕರಿಗೆ ಸರಕು, ಸೇವೆಗಳ ಬಗ್ಗೆ ರಿವ್ಯೂ ಬರೆಯುವಂತೆ ಕೋರಿದ್ದರೆ ಅವು ಕೋರಿದ ರಿವ್ಯೂಗಳ ಅಡಿಯಲ್ಲಿ ಬರಲಿವೆ.

ಈ ರಿವ್ಯೂ ಬರೆಯುವವರ ಗುರುತನ್ನು ಅನುಮತಿ ಇಲ್ಲದೇ ಬಹಿರಂಗ ಪಡಿಸುವ ಅವಕಾಶವಿಲ್ಲ ಜೊತೆಗೆ ಆ ಸಂಸ್ಥೆಗಳು ಪ್ರಕಟಿಸುವ ರಿವ್ಯೂ ಸಂಪೂರ್ಣವಾಗಿ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ನೀವು ರಿವ್ಯೂ ಬರೆದಿದ್ದಕ್ಕಾಗಿ ವ್ಯಕ್ತಿಗೆ ಹಣ ಪಾವತಿಸಿದರೆ ಅದನ್ನು ಖರೀದಿಸಲ್ಪಟ್ಟ ರಿವ್ಯೂ ಎಂದು ಪ್ರಕಟಿಸಬೇಕು ಎಂದು ಮಾನದಂಡದಲ್ಲಿ ಸೂಚಿಸಲು ಆದೇಶಿಸಲಾಗಿದೆ.

ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಸೂಚನೆ ನೀಡಿದ್ದು, ಈ ಹೊಸ ಕ್ರಮದಿಂದ ಗ್ರಾಹಕರಿಗೆ ಎಷ್ಟರಮಟ್ಟಿಗೆ ಸಮರ್ಪಕ ಪ್ರಯೋಜನ ಹಾಗೂ ಪರಿಣಾಮಕಾರಿಯಾಗಿ ಯೋಜನೆ ಜಾರಿಗೆ ಬರಲಿದೆ ಎಂದು ಕಾದು ನೋಡಬೇಕಾಗಿದೆ.

Leave A Reply

Your email address will not be published.