ಕಾಂತಾರ : ಭರ್ಜರಿ ಗಳಿಕೆ ಕಂಡ ಸಿನಿಮಾ, ವಿಶ್ವದಾದ್ಯಂತ 400 ಕೋಟಿ ಗಳಿಕೆ | ಎಲ್ಲಿ, ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ
ಸಿನಿಮಾ ಲೋಕದಲ್ಲೇ ತನ್ನ ಛಾಪನ್ನು ಮೂಡಿಸಿದ ರಿಷಬ್ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಸಿನಿಮಾ ‘ಕಾಂತಾರ’ ಮಹತ್ವದ ದಾಖಲೆಯನ್ನು ಸೃಷ್ಟಿಸಿದೆ. . ಸೆ.30ರಂದು ತೆರೆ ಮೇಲೆ ಅಪ್ಪಳಿಸಿದ ‘ಕಾಂತಾರ’ ಆರಂಭದಿಂದಲೂ ಉತ್ತಮ ಪ್ರದರ್ಶನವನ್ನೇ ಕಂಡಿದೆ. ಕಳೆದ ವಾರ ಯಶಸ್ವಿಯಾಗಿ 50 ದಿನಗಳನ್ನು ಕಂಪ್ಲೀಟ್ ಮಾಡಿರುವ ಸಿನಿಮಾವು, ಈಗ ಗಳಿಕೆಯಲ್ಲಿ ವಿಶ್ವಾದಾದ್ಯಂತ 400 ಕೋಟಿ ರೂ. ಗಡಿ ತಲುಪಿದೆ.
ಈ ಸಿನಿಮಾಕ್ಕೆ ಸಿಕ್ಕ ಗಳಿಕೆಯಲ್ಲಿ ಕರ್ನಾಟಕದ ಪಾಲೇ ಹೆಚ್ಚು, ಸುಮಾರು 168.50 ಕೋಟಿ ರೂ. ಕಲೆಕ್ಷನ್ ಆಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ‘ಕಾಂತಾರ’ ಸಿನಿಮಾವು 60 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, ತಮಿಳುನಾಡಿನಲ್ಲಿ 12.70 ಕೋಟಿ ರೂ. ಮತ್ತು ಕೇರಳದಲ್ಲಿ 19.20 ಕೋಟಿ ರೂ. ಗಳಿಕೆ ಆಗಿದೆ. ‘ಕಾಂತಾರ’ ಸಿನಿಮಾಗೆ ವಿದೇಶದಲ್ಲಿ ಸಿಕ್ಕಿರುವುದು ಬರೋಬ್ಬರಿ 44.50 ಕೋಟಿ ರೂ. ಕಲೆಕ್ಷನ್. ಹಾಗೆಯೇ, ಉತ್ತರ ಭಾರತದಲ್ಲಿ ಸುಮಾರು 96 ಕೋಟಿ ರೂ. ನಿರ್ಮಾಪಕರಿಗೆ ಸಿಕ್ಕಿದೆ. ಒಟ್ಟು ವಿಶ್ವಾದ್ಯಂತ 400.90 ಕೋಟಿ ರೂಪಾಯಿ ಹಣ ‘ಕಾಂತಾರ’ಗೆ ದೊರೆತಿದೆ.
ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡಮ ಕಿಶೋರ್, ಅಚ್ಯುತ್ ಕುಮಾರ್, ದೀಪಕ್ ರೈ, ಮಾನಸಿ ಸುಧೀರ್, ಪ್ರಕಾಶ್ ತುಮ್ಮಿನಾಡು, ಪ್ರಮೋದ್ ಶೆಟ್ಟಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನವಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರದ ‘ಸಿಂಗಾರ ಸಿರಿಯೇ..’ ಹಾಡು ಕೂಡ ಈಗ ಸಖತ್ ಹಿಟ್ ಆಗಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಡಿ ವಿಜಯ್ ಕಿರಗಂದೂರು ನಿರ್ಮಿಸಿರುವ ‘ಕಾಂತಾರ’ ಸೆ.30ರಂದು ಬಿಡುಗಡೆಯಾಗಿದ್ದೂ ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲದೆ, ವಿದೇಶಗಳಲ್ಲೂ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಮುಗಿಸಿದೆ. ಬರೀ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ‘ಕಾಂತರ’, ಅಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಸದ್ಯದಲ್ಲೇ ಅಲ್ಲೂ 50 ದಿನಗಳನ್ನು ಪೂರೈಸಲಿದೆ.
ಈಗಾಗಲೇ ಓಟಿಟಿಯಲ್ಲಿ ಪ್ರಸಾರ ಆರಂಭಿಸಬೇಕಿದ್ದ ‘ಕಾಂತಾರ’ ಸಿನಿಮಾಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದ ಹಿನ್ನೆಲೆಯಲ್ಲಿ ಎರಡು ವಾರ ಪೋಸ್ಟ್ ಪೋನ್ ಮಾಡಲಾಗಿದೆ. ನವೆಂಬರ್ 24ರಿಂದ ಅಮೆಜಾನ್ ಪ್ರೈಮ್‌ನಲ್ಲಿ ‘ಕಾಂತಾರ’ ಸಿನಿಮಾ ಸ್ಟ್ರೀಮಿಂಗ್ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದಿದೆ. ಈ ಮೊದಲು ಕಾಂತಾರ ಸಿನಿಮಾ ತೆರೆಕಂಡ ಆರು ವಾರಗಳ ಬಳಿಕ ಓಟಿಟಿಯಲ್ಲಿ ಚಿತ್ರವನ್ನು ಪ್ರಸಾರ ಮಾಡುವ ಕುರಿತು, ‘ಕಾಂತಾರ’ ರಿಲೀಸ್‌ಗೂ ಮುನ್ನವೇ ಓಟಿಟಿ ಹಕ್ಕುಗಳ ವ್ಯವಹಾರ ಮುಗಿದುಹೋಗಿತ್ತು. ಸದ್ಯ ನವೆಂಬರ್ 24ರಂದು ಪ್ರಸಾರ ಆಗಲಿದೆಯೇ ಇಲ್ಲವೇ ಎಂಬುದು ಕುತೂಹಲದ ಪ್ರಶ್ನೆ ಆಗಿದೆ.