ವಿಟ್ಲದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆಯೇ ಮೀಟರ್ ಬಡ್ಡಿ ದಂಧೆ!? ಕರೆ ಮಾಡಿ ಕೊಲೆ ಬೆದರಿಕೆ ಒಡ್ಡಿದ ಜೀ.. ಯಾರು!?
ಮಂಗಳೂರು: ಜಿಲ್ಲೆಯ ವಿಟ್ಲ ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ಮೀಟರ್ ಬಡ್ಡಿ ದಂಧೆಯ ಬಗ್ಗೆ ದೂರುಗಳು, ಫೋನ್ ಕರೆಗಳು, ಸಾಲದು ಎನ್ನುವುದಕ್ಕೆ ಕೊಲೆ ಬೆದರಿಕೆಯಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಅಸಹಾಯಕ ದಿನಗೂಲಿ ನೌಕರರಿಗೆ, ಹಣದ ಅವಶ್ಯಕತೆ ಇರುವಂತಹ ವ್ಯಕ್ತಿಗಳಿಗೆ, ಒಂದರ ಸಾಲು ಪಡೆದು ಮರು ಪಾವತಿಗಾಗಿ ಹಣದ ಅಗತ್ಯತೆ ಇರುವಂತಹ ಜನರನ್ನೇ ಖೆಡ್ಡಾಕ್ಕೆ ಬೀಳಿಸುತ್ತಿರುವ ದಂಧೆಯೊಂದು ಬಂಟ್ವಾಳ ತಾಲೂಕಿನ ವಿಟ್ಲ ಪರಿಸರದಲ್ಲಿ ಚಾಲ್ತಿಯಲ್ಲಿದೆ ಎನ್ನುವ ವಿಚಾರವೊಂದು ಸುದ್ದಿಯಾಗಿದೆ.
ಹಣ ಪಡೆದು ಬಡ್ಡಿ ಕಟ್ಟಲು ಸಾಧ್ಯವಾಗದೇ ಇರುವಂತಹ ವ್ಯಕ್ತಿಗಳಿಗೆ ಸ್ಥಳೀಯ ಗೂಂಡಾಗಳಂತೆ ವರ್ತಿಸುವ ಪೊರ್ಕಿಗಳಿಂದ ಫೋನ್ ಕರೆ ಹಾಯಿಸಿ ಬೆದರಿಕೆ ಒಡ್ಡಿರುವ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಮೀಟರ್ ಬಡ್ಡಿ ದಂಧೆಯ ವಿಚಾರ ಬಹಿರಂಗವಾಗಿದೆ.
ಹೀಗೆ ವೈರಲ್ ಆಗಿರುವ ಆಡಿಯೋ ದಲ್ಲಿ ‘ಜೀತು’ ಎನ್ನುವ ವ್ಯಕ್ತಿಯೊಬ್ಬ, ಹಣ ಪಡೆದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದು, ಮಾತ್ರವಲ್ಲದೆ ಮಹಿಳೆಯರ ಸಹಿತ ಇತರರಿಗೂ ಕೊಲೆ ಬೆದರಿಕೆ ಒಡ್ಡಿರುವುದು ಆಡಿಯೋ ದಲ್ಲಿ ರೆಕಾರ್ಡ್ ಆಗಿದೆ. ಸದ್ಯ ಇಂತಹ ವ್ಯಕ್ತಿಗಳಿಂದ ಸಾಲಗಾರರು ಆತ್ಮಹತ್ಯೆ ಯಂತಹ ಕೃತ್ಯಗಳತ್ತ ಮುಖ ಮಾಡಿದ್ದು, ಕೂಡಲೇ ವಿಟ್ಲ ಪರಿಸರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು, ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಬೀಳಬೇಕಿದೆ.