ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದ ನಟಿ ಎಂಡ್ರೀಲಾ ಶರ್ಮಾ ನಿಧನ

ಇತ್ತೀಚೆಗೆ ಒಂದೇ ದಿನ ಹಲವು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದ ಬೆಂಗಾಲಿ ಧಾರಾವಾಹಿ ನಟಿ ಎಂಡ್ರೀಲಾ ಶರ್ಮಾ (24) ಬ್ರೈನ್ ಸ್ಟ್ರೋಕ್‌ನಿಂದ ವಾರಗಟ್ಟಲೆಯ ಜೀವನ್ಮರಣದ ನಂತರ ಭಾನುವಾರ (ನ.20) ರಂದು ನಿಧನ ಹೊಂದಿದ್ದಾರೆ.

ನ. 1 ರಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಎಂಡ್ರೀಲಾ ಶರ್ಮಾ ಅವರನ್ನು ದಾಖಲಿಸಲಾಗಿತ್ತು. ಇದೇ ವೇಳೆ ಅವರ ಮೆದುಳಲ್ಲಿ ರಕ್ತಸ್ರಾವ ಕೂಡ ಉಂಟಾಗಿದ್ದೂ, ವೈದ್ಯರು ಕೆಲ ಶಸ್ತ್ರಚಿಕಿತ್ಸೆ ಕೂಡ ಮಾಡಿದ್ದಾರೆ. ನಟಿಯ ಮೆದುಳಿನ ಎದುರು ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದ್ದೂ, ರಕ್ತ ಹೆಪ್ಪುಗಟ್ಟುವಿಕೆ ತಡೆಯಲು ವೈದ್ಯರು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಸಿಟಿ ಸ್ಕ್ಯಾನ್​​ ವರದಿ ಮಾಡಿದೆ.

ಬ್ರೈನ್ ಸ್ಟ್ರೋಕ್‌ನಿಂದ ಬಳಲುತ್ತಿದ್ದರಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದೆಗೆಟ್ಟಿತ್ತು. ಆದರೆ ಆಸ್ಪತ್ರೆಯ ಮೂಲಗಳ ಪ್ರಕಾರ ಇಂದು (ನ.20) ಮಧ್ಯಾಹ್ನ 12:59 ಕ್ಕೆ ಎಂಡ್ರೀಲಾ ಶರ್ಮಾ ಕೊನೆಯುಸಿರೆಳೆದಿದ್ದಾರೆ. ಇತ್ತ ನಿಧನದ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ಎಂಡ್ರೀಲಾ ಶರ್ಮಾ ಅವರಿಗೆ ಈ ಮೊದಲು ಕ್ಯಾನ್ಸರ್ ಉಂಟಾಗಿತ್ತು. ಅದನ್ನು ಅವರು ಜಯಿಸಿ ಬಂದಿದ್ದರು. ಆದರೆ ಈಗ ಅವರಿಗಾದ ಬ್ರೈನ್​​ ಸ್ಟ್ರೋಕ್ ಅವರ ಪ್ರಾಣವನ್ನೇ ಕಸಿದಿದೆ. ಎಂಡ್ರೀಲಾ ಶರ್ಮಾ ‘ಜುಮುರ್’​ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ‘ಜಿಬೊನ್ ಜೋತ್ಯಿ’, ‘ಜಿಯೋನ್​ ಕಥಿ’ ಎಂಬ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು.

ಈ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದಾಗ ಎಂಡ್ರೀಲಾ ಶರ್ಮಾ ಅವರು ಮೃತಪಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಕೂಡ ಹಬ್ಬಿಸಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ನಟ ಸಬ್ಯಸಾಚಿ ಚೌಧರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಒಂದನ್ನು ಬರೆದಿದ್ದರು. ‘ಎಂಡ್ರೀಲಾ ಶರ್ಮಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಅವರ ಹೃದಯ ಬಡಿತವು ಮುಂಚೆಗಿಂತ ಈಗ ಸುಧಾರಿಸಿದೆ. ಅವರ ರಕ್ತದೊತ್ತಡ ಕೂಡ ಸಾಮಾನ್ಯ ಸ್ಥಿತಿಗೆ ಬಂದಿದೆ. ಸದ್ಯ ಎಂಡ್ರೀಲಾ ಅವರು ಯಾವುದೇ ರೀತಿಯ ಬೆಂಬಲವಿಲ್ಲದೇ ತನಗೆ ಎದುರಾದ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ದಯಮಿಟ್ಟು ಇಲ್ಲಸಲ್ಲದ ವದಂತಿಯನ್ನು ಹಬ್ಬಿಸಬೇಡಿ’ ಎಂದು ಸಬ್ಯಸಾಚಿ ಚೌಧರಿ ಅವರು ಮನವಿ ಮಾಡಿಕೊಂಡಿದ್ದರು. ಆದರೆ ಆ ಸುಳ್ಳು ಸುದ್ದಿಯೇ ಇಂದು ನಿಜವಾಗಿ ಹೋಗಿದೆ.

Leave A Reply

Your email address will not be published.