unknown number : ಹೊಸಕ್ರಮ ಬರಲಿದೆ ಜಾರಿಗೆ | ಈ ಟೆಕ್ನಾಲಜಿಯಿಂದ ಸುಲಭವಾಗಿ ಕಂಡು‌ ಹಿಡಿಯಬಹುದು ಅಪರಿಚಿತರ ಕರೆ

ಕೆಲವೊಂದು ಬಾರಿ ನಮ್ಮ ಮೊಬೈಲ್ ಗೆ ಅಪರಿಚಿತ ವ್ಯಕ್ತಿಯ ಕರೆ ಬಂದಿರುವುದನ್ನು ನೋಡಿ ಮನಸ್ಸಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಯಾರ ಕರೆಯಾಗಿರಬಹುದು? ಯಾಕೆ ಕರೆ ಮಾಡಿರಬಹುದು? ಮತ್ತೆ ತಿರುಗಿ ಕರೆ ಮಾಡಲೇ? ಬೇಡವೇ? ‌ಹೀಗೇ ತಲೆ ಹಲವಾರು ಗೊಂದಲಗಳ ಗೂಡಾಗುತ್ತದೆ. ಅದರಲ್ಲಿ ಕೆಲವರು ತಮ್ಮ ಮೊಬೈಲ್ ಫೋನ್ ಗೆ ಯಾರು ಕರೆ ಮಾಡಿರಬಹುದು ಎಂದು ತಿಳಿದುಕೊಳ್ಳುವ ಸಲುವಾಗಿ ಟ್ರೂ ಕಾಲರ್ ಅಂತಹ ಅಪ್ಲಿಕೇಶನ್ ಗಳನ್ನು ಬಳಸುತ್ತಾರೆ.

 

ಆದರೆ ಈ ರೀತಿಯ ಅಪ್ಲಿಕೇಶನ್ ಗಳು ಡೇಟಾ ಕ್ರೌಡ್ ಸೋರ್ಸ್ ಆಗಿರುವುದರಿಂದ ಅವುಗಳಿಗೆ ಅದರದ್ದೇ ಆದ ಕೆಲವು ಮಿತಿಗಳಿವೆ. ಕೊನೆಗೂ ಈ ಎಲ್ಲಾ ಗೊಂದಲ, ಸಮಸ್ಯೆಗಳಿಗೆ ಪೂರ್ಣ ಪರಿಹಾರ ಸಿಕ್ಕಿದೆ. ಇದರಿಂದ ಇನ್ಮುಂದೆ ನಿಮ್ಮ ಮೊಬೈಲ್ ಫೋನ್ ಗೆ ಬರುವಂತಹ ಅಪರಿಚಿತ ಕರೆಗಳನ್ನು ಯಾರು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬಹುದು. ಇನ್ನೂ ಇದು ಹೇಗೆ ಸಾಧ್ಯ ಎಂಬುದರ ಮಾಹಿತಿ ಇಲ್ಲಿದೆ.

ಇನ್ಮುಂದೆ ಕರೆ ಮಾಡಿದವರ ಹೆಸರು ಮೊಬೈಲ್ ನ ಸ್ಕ್ರೀನ್ ಮೇಲೆ ಬರುತ್ತದೆಯಂತೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶೀಘ್ರದಲ್ಲಿಯೇ ತಮ್ಮ ಬಳಕೆದಾರರಿಗೆ ಕರೆ ಬಂದಾಗ ಮೊಬೈಲ್ ಸ್ಕ್ರೀನ್ ಮೇಲೆ ಕರೆ ಮಾಡಿರುವ ವ್ಯಕ್ತಿಯ ಹೆಸರು ಬರುವಂತೆ ಖಚಿತಪಡಿಸಿಕೊಳ್ಳಲು ಎಲ್ಲಾ ಹೊಸ ಕ್ರಮಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಇನ್ನೂ ಈ ರೀತಿಯಾಗಿ ಬರುವ, ಕರೆ ಮಾಡಿರುವ ವ್ಯಕ್ತಿಯ ಹೆಸರು ಟೆಲಿಕಾಂ ಆಪರೇಟರ್ ಗಳ ದಾಖಲೆಯಲ್ಲಿ ಲಭ್ಯವಿರುವ ಬಳಕೆದಾರರ ‘ನೋ ಯುವರ್ ಕಸ್ಟಮರ್’ (ಕೆವೈಸಿ) ದಾಖಲೆಗೆ ಅನುಗುಣವಾಗಿರುತ್ತದೆ. ಈ ಹೊಸ ಕ್ರಮವನ್ನು ಜಾರಿಗೆ ತಂದಾಗ, ಕರೆ ಮಾಡಿದವರ ಸಂಪರ್ಕವನ್ನು ಅವರ ಸಂಪರ್ಕ ಪಟ್ಟಿಯಲ್ಲಿ ಉಳಿಸದಿದ್ದರೂ ಸಹ ಚಂದಾದಾರರು ಕರೆ ಮಾಡಿದವರ ಹೆಸರನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆಯಂತೆ.

ಇನ್ನೂ ಹಲವಾರು ಜನರು ಬಳಸುತ್ತಿರುವ ಟ್ರೂ ಕಾಲರ್ ಬಗ್ಗೆ ಹೇಳಬೇಕಾದರೆ, ಇದು ಡೇಟಾ ಕ್ರೌಡ್ ಸೋರ್ಸ್ ಆಗಿರುವುದರಿಂದ ಇದಕ್ಕೆ ಕೆಲವು ಮಿತಿಗಳಿದ್ದು, 100 ಪ್ರತಿಶತದಷ್ಟು ಅಧಿಕೃತತೆಯನ್ನು ಖಾತರಿಪಡಿಸಲಾಗುವುದಿಲ್ಲ. ಆದರೆ ಇದು ಕೆವೈಸಿ ಡೇಟಾದಲ್ಲಿ ಖಾತರಿಪಡಿಸಲ್ಪಡುತ್ತದೆ. ಫೋನ್ ಸ್ಕ್ರೀನ್ ಮೇಲೆ ತೋರಿಸುವ ಕಾಲರ್ ನ ಕೆವೈಸಿ ಹೆಸರಿನ ಕಾರ್ಯವಿಧಾನದ ಮತ್ತೊಂದು ಪ್ರಯೋಜನವೆಂದರೆ ಸ್ಪ್ಯಾಮ್ ಕರೆಗಳನ್ನು ಸರಿಯಾಗಿ ಗುರುತಿಸಬಹುದು ಅಥವಾ ಅವುಗಳನ್ನು ವರದಿ ಸಹ ಮಾಡಬಹುದಾಗಿದೆ.

ಹಾಗೇ ಮುಂದಿನ ದಿನಗಳಲ್ಲಿ ವಾಟ್ಸಾಪ್ ಮೂಲಕ ಬರುವ ಕರೆಗಳಿಗೂ ಸಹ ಇದೇ ರೀತಿಯ ಪ್ರತ್ಯೇಕವಾದ ಕ್ರಮವನ್ನು ಜಾರಿಗೆ ತರುವ ನಿರೀಕ್ಷೆಯಿದೆ. ವಾಟ್ಸಾಪ್ ಅನ್ನು ಸಿಮ್ ಕಾರ್ಡ್ ಗಳಿಗೆ ಲಿಂಕ್ ಮಾಡಿರುವುದರಿಂದ, ಬಳಕೆದಾರರ ಫೋನ್ ಸಂಖ್ಯೆ ಮತ್ತು ವಾಟ್ಸಾಪ್ ಖಾತೆಯ ನಡುವೆ ನೇರ ಲಿಂಕ್ ಇರುತ್ತದೆ. ದೂರಸಂಪರ್ಕ ಇಲಾಖೆ, ಟ್ರಾಯ್ ಮತ್ತು ಟೆಲಿಕಾಂ ಆಪರೇಟರ್ ಗಳನ್ನು ಒಳಗೊಳ್ಳುವಂತಹ ಕ್ರಮಗಳನ್ನು ಜಾರಿಗೆ ತರಲು ಪೂರ್ಣ ಪ್ರಮಾಣದ ಕಾರ್ಯವಿಧಾನವನ್ನು ರೂಪಿಸುವ ಅಗತ್ಯವಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.