ಇಂದು ಮಂಗಳೂರಿನಲ್ಲಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಪ್ರತಿಮೆ ಲೋಕಾರ್ಪಣೆ!! ಸಿಎಂ ಬೊಮ್ಮಾಯಿ ಸಹಿತ ಹಲವು ಗಣ್ಯರ ಉಪಸ್ಥಿತಿ!
ಮಂಗಳೂರು: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಹೋರಾಟಗಾರ, ರೈತ ಸೈನ್ಯದ ನೇತಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯು ಇಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಅನಾವರಣಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಜಿಲ್ಲೆಯ ಹಲವು ನಾಯಕರು, ಒಕ್ಕಲಿಗ ಮುಖಂಡರು, ಗೌಡ ಸಮುದಾಯ, ಜಿಲ್ಲಾಡಳಿತ ಹಾಗೂ ಮಂಗಳೂರು ಭಾಗವಹಿಸಲಿದ್ದು, ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಪೂರ್ವಾಹ್ನ 10 ಗಂಟೆಗೆ ಶೌರ್ಯದ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ.
ಶೌರ್ಯದ ಪ್ರತಿಮೆಯ ಲೋಕಾರ್ಪಣೆಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದು,ಪ್ರತಿಮೆ ಪೀಠದ ಅನಾವರಣವನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಲಿದ್ದಾರೆ. ಹಾಗೂ ಪ್ರವೇಶ ದ್ವಾರದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ನೆರವೇರಿಸಲಿದ್ದು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.
ಬಳಿಕ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದೆ ಶೋಭಾ ಕರಂದ್ಲಾಜೆ,ಡಿ.ವಿ ಸದಾನಂದ ಗೌಡ,ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ,ಆರ್ ಅಶೋಕ್,ಡಾ.ಕೆ. ಸುಧಾಕರ್, ಅಶ್ವತ್ಥ ನಾರಾಯಣ್,ಎಸ್ ಟಿ ಸೋಮಶೇಖರ್, ಎಸ್. ಅಂಗಾರ,ಮಾಜಿ ಮುಖ್ಯ ಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯರಾದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ. ಉಳಿದಂತೆ ಜಿಲ್ಲೆಯ ಎಲ್ಲಾ ಶಾಸಕರುಗಳು ಕೆದಂಬಾಡಿ ರಾಮಯ್ಯಗೌಡರ ಗುಣಗಾನ ಮಾಡಲಿದ್ದಾರೆ.
ಅಲ್ಲದೇ ಜಿಲ್ಲೆಯ ಪ್ರತೀ ತಾಲ್ಲೂಕುಗಳಿಂದ ಗಣ್ಯರು, ಅಭಿಮಾನಿಗಳು, ಸ್ಮಾರಕ ಉಸ್ತುವಾರಿ ಸಮಿತಿ ಸದಸ್ಯರು, ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದು ನೆರೆದ ಎಲ್ಲರಿಗೂ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಹಾಗೂ ವೀರಸಮರದ ಚಿತ್ರಣ ಕಣ್ತುಂಬಲಿದೆ. ಸಮಾರಂಭಕ್ಕೆ 25,000 ಕ್ಕೂ ಅಧಿಕ ಮಂದಿ ಸೇರಲಿದ್ದು, ದೇಶದ ಪ್ರಥಮ ರೈತ ಸೇನಾಧಿಕಾರಿ, ಸಂಘಟಕಾರ ಕೆದಂಬಾಡಿ ರಾಮಯ್ಯ ಗೌಡರ ಬಲಿದಾನದ ನೆನಪನ್ನು ಮಾಡುವ ಸಂದರ್ಭ ಇದಾಗಲಿದೆ.
ಇವತ್ತು ಬೆಳಿಗ್ಗೆ ನಡೆಯುವ ಕಾರ್ಯಕ್ರಮಕ್ಕೆ ಹಲವು ಊರುಗಳಿಂದ ಜನರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಅಲ್ಲಿಗೆ ಬಂದ ಎಲ್ಲಾ ಜನರಿಗೂ ಊಟೋಪಚಾರದ ವ್ಯವಸ್ಥೆ ಇದೆ. ಕೆದಂಬಾಡಿ ರಾಮಯ್ಯ ಗೌಡರ ರೈತ ಸ್ವಾತಂತ್ರ ಸಂಗ್ರಾಮದ ರೋಚಕ ಕ್ಷಣಗಳು, ಚಿತ್ರಣಗಳು ವಿಡಿಯೋ ಮೂಲಕ ಪ್ರದರ್ಶನ ಗೊಳ್ಳಲಿದೆ.
Comments are closed, but trackbacks and pingbacks are open.