ಪಿಂಚಣಿದಾರರೇ ನೀವು ಮನೆಯಲ್ಲೇ ಕುಳಿತು ಜೀವನ ಪ್ರಮಾಣಪತ್ರ ಸಲ್ಲಿಕೆ ವೀಡಿಯೋ ಕರೆ ಮೂಲಕ ಮಾಡಿ | ಹೇಗೆ ಅಂತೀರಾ?
ಪಿಂಚಣಿದಾರರು ಪಿಂಚಣಿ ಪಡೆಯಬೇಕೆಂದರೆ ಪ್ರತಿವರ್ಷ ಪಿಂಚಣಿ ವಿತರಣಾ ಸಂಸ್ಥೆ (ಪಿಡಿಎ) ಗಳಾದ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ, ತಾವೇ ಸ್ವತಃ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಜೀವನ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಆದರೆ ಇನ್ನು ಮುಂದೆ ಮನೆಯಲ್ಲೇ ಕುಳಿತು ಪ್ರಮಾಣ ಪತ್ರವನ್ನು ಸಲ್ಲಿಸುವ ಅವಕಾಶವನ್ನು ಬ್ಯಾಂಕ್ ಗಳು ಒದಗಿಸಿದೆ.
ಹೌದು, ಕೇವಲ ಒಂದು ವಿಡಿಯೋ ಕಾಲ್ ಮೂಲಕ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡುವ ಅವಕಾಶವನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಹಾಗೂ ಸಾರ್ವಜನಿಕ ವಲಯದ ಇನ್ನೊಂದು ಪ್ರಮುಖ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾ ಅವಕಾಶ ಕಲ್ಪಿಸಿದೆ.
ವೆಬ್ ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮುಖಾಂತರ ಎಸ್ ಬಿಐ ಅಧಿಕಾರಿಗೆ ವಿಡಿಯೋ ಕರೆ ಮಾಡಿ ಜೀವನ ಪ್ರಮಾಣಪತ್ರ ಸಲ್ಲಿಸಬಹುದು. ಈ ಸೇವೆ ಪ್ರಾರಂಭದ ಬಗ್ಗೆ ಎಸ್ ಬಿಐ ಗ್ರಾಹಕರಿಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಪಿಂಚಣಿದಾರರ ಪಿಂಚಣಿ ಖಾತೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ದರೆ ಮಾತ್ರ ಈ ಅವಕಾಶವನ್ನು ಪಡೆಯಬಹುದು. ವಿಡಿಯೋ ಕರೆ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡೋದರ ಮಾಹಿತಿ ಇಲ್ಲಿದೆ.
ಎಸ್’ಬಿಐ ಬ್ಯಾಂಕ್’:
ಮೊದಲು ಎಸ್’ಬಿಐ ನ ಅಧಿಕೃತ ಪಿಂಚಣಿ ಸೇವಾ ವೆಬ್ ಸೈಟ್ (PensionSeva website) ಗೆ ಭೇಟಿ ನೀಡಿ, ಮೇಲ್ಬಾಗದಲ್ಲಿ ಕಾಣಿಸುವ ‘VideoLC’ ಲಿಂಕ್ ಮೇಲೆ ಕ್ಲಿಕ್ ಮಾಡಿ. ನೀವೆನಾದರೂ ಎಸ್’ಬಿಐ ಪಿಂಚಣಿ ಸೇವಾ ಮೊಬೈಲ್ ಅಪ್ಲಿಕೇಶನ್ ಬಳಸುತ್ತಿದ್ದರೆ, ‘Video Life Certificate tab’ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಪಿಂಚಣಿ ಜಮೆ ಆಗುವ ಖಾತೆ ಸಂಖ್ಯೆ ನಮೂದಿಸಿದ ಬಳಿಕ ಕ್ಯಾಪ್ಟಾ ಕೋಡ್ ಹಾಕಿ. ನಂತರ ಬ್ಯಾಂಕಿಗೆ ನಿಮ್ಮ ಆಧಾರ್ ಮಾಹಿತಿ ಬಳಕೆಗೆ ಅನುವು ಮಾಡಿಕೊಡಲು ಬಾಕ್ಸ್ ಮೇಲೆ ಕ್ಲಿಕಿಸಿ.
Validate Account ಬಟನ್ ಮೇಲೆ ಕ್ಲಿಕ್ ಮಾಡಿ, ಒಟಿಪಿ ನಮೂದಿಸಿ. ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ. ಆ ಬಳಿಕ ‘Proceed’ಮೇಲೆ ಕ್ಲಿಕ್ ಮಾಡಿ. ನಂತರದ ಪುಟದಲ್ಲಿ ವಿಡಿಯೋ ಕರೆಗೆ ಸಮಯ ನಿಗದಿಪಡಿಸಿ. ಈ ಸಂಬಂಧ ನಿಮಗೆ ಇ-ಮೇಲ್ ಹಾಗೂ ಮೊಬೈಲ್ ಗೆ ಸಂದೇಶ ಬರುತ್ತದೆ. ನಿಗದಿಪಡಿಸಿರುವ ಸಮಯಕ್ಕೆ ಸರಿಯಾಗಿ ವಿಡಿಯೋ ಕರೆಗೆ ಸೇರಿ. ವಿಡಿಯೋ ಕರೆಯಲ್ಲಿ ವೆರಿಫಿಕೇಶನ್ ಕೋಡ್ ತಿಳಿಸಿ, ಪ್ಯಾನ್ ಕಾರ್ಡ್ ತೋರಿಸಿ, ನಿಮ್ಮ ಫೋಟೋ ಸೆರೆ ಹಿಡಿಯಲು ಅನುಕೂಲವಾಗುವಂತೆ ಕ್ಯಾಮೆರ್ ಸೆಟ್ ಮಾಡಿ. ನಂತರ ನಿಮ್ಮ ಮಾಹಿತಿ ದಾಖಲಾಗಿರುವ ಬಗ್ಗೆ ನಿಮಗೆ ಸಂದೇಶ ಕಳುಹಿಸಲಾಗುತ್ತದೆ.
ಬ್ಯಾಂಕ್ ಆಫ್ ಬರೋಡಾ:
ಮೊದಲು https://tabit.bankofbaroda.com/lfcrt/#/request ವೆಬ್ಸೈಟ್ ಗೆ ಭೇಟಿ ನೀಡಿ. ಅಲ್ಲಿ ಪಿಪಿಒ ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ನಮೂದಿಸಿದಾಗ, ಆಧಾರ್ ಲಿಂಕ್ ಆಗಿರುವ ಮೊಬೈಲ್ ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಸಲ್ಲಿಕೆ ಮೇಲೆ ಕ್ಲಿಕ್ ಮಾಡಿ. ನಂತರ ಪಿಂಚಣಿದಾರರು ಅಲ್ಲಿ ನೀಡಿರುವ ನಾಲ್ಕು ಆಯ್ಕೆಗಳಿಗೆ ಹೌದು/ಇಲ್ಲ ಎಂದು ಉತ್ತರಿಸಬೇಕು. ಈಗಲೇ ಕರೆ ಮಾಡೋದಾ ಅಥವಾ ನಂತರವೇ ಎಂಬುದನ್ನು ಆಯ್ಕೆ ಮಾಡಿ. ಕರೆ ಬಂದಾಗ ಫೋಟೋ ಐಡಿ ತೋರಿಸಿ. ಅದನ್ನು ಸಿಬ್ಬಂದಿ ಸ್ಕ್ಯಾನ್ ಮಾಡುತ್ತಾರೆ. ಫೋಟೋ ತೆಗೆದ ಬಳಿಕ ಮೊಬೈಲ್ ಗೆ ಮತ್ತೆ ಒಟಿಪಿ ಬರುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಜೀವನ ಪ್ರಮಾಣಪತ್ರ ಪಿಂಚಣಿ ಸಾಫ್ಟ್ ವೇರ್ ನಲ್ಲಿ ಅಪ್ಡೇಟ್ ಆಗುತ್ತದೆ.