ನೂರಾರು ಕುರಿಗಳಿಂದ ವೃತ್ತಾಕಾರವಾಗಿ ಸೇರಿ ಪ್ರದಕ್ಷಿಣೆ | 14 ದಿನದಿಂದ ನಡೆಯುತ್ತಿದೆ ಈ ಸುತ್ತಾಟ!
ಹಗಳಿರುಳೆನ್ನದೆ ನೂರಾರು ಕುರಿಗಳು ವೃತ್ತಾಕಾರವಾಗಿ ಪ್ರದಕ್ಷಿಣೆ ಹಾಕ್ತಿವೆ ಎಂದರೆ ಆಶ್ಚರ್ಯವೇ ಸರಿ. ಇನ್ನೂ ಈ ವಿಚಿತ್ರವಾದ ಘಟನೆ ಚೀನಾದ ಮಂಗೋಲಿಯಾ ಪ್ರಾಂತ್ಯದಲ್ಲಿ ನಡೆದಿದೆ. ಇಲ್ಲಿ ನೂರಾರು ಕುರಿಗಳು ಬರೋಬ್ಬರಿ 14 ದಿನಗಳ ಕಾಲ ವೃತ್ತಾಕಾರವಾಗಿ ಸುತ್ತು ಹಾಕಿವೆ. ಇದಕ್ಕೆ ಕಾರಣ ಏನು ಎಂದು ಯಾರಿಗೂ ತಿಳಿದಿಲ್ಲ.
ಕೃಷಿ ಭೂಮಿಯಲ್ಲಿ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ವಿದ್ಯಮಾನ ಸೆರೆಯಾಗಿದೆ. ಅಲ್ಲಿ ಮನುಷ್ಯರ ಸುಳಿವೇ ಇರಲಿಲ್ಲ ಅಷ್ಟೇ ಅಲ್ಲದೆ, ಯಾರೂ ಕೂಡಾ ಈ ಕುರಿಗಳಿಗೆ ನಿರ್ದೇಶಿಸಿಲ್ಲ. ಹಾಗಿದ್ದರೂ ನೂರಾರು ಕುರಿಗಳು ವೃತ್ತಾಕಾರವಾಗಿ ಸೇರಿ ಬರೋಬ್ಬರಿ 14 ದಿನಗಳ ಕಾಲ ಹಗಲು-ಇರುಳು ಎನ್ನದೆ ಪ್ರದಕ್ಷಿಣೆ ಹಾಕಿವೆ.
ಇನ್ನು ನೂರಾರು ಕುರಿಗಳು ವೃತ್ತಾಕಾರವಾಗಿ ಸುತ್ತುತ್ತಿದ್ದರೆ, ವೃತ್ತದ ಹೊರಗಡೆ ಕೆಲವು ಕುರಿಗಳು ವೀಕ್ಷಕರಂತೆ ನಿಂತು ನೋಡುತ್ತಿವೆ. ಅದರಲ್ಲೂ ಕೆಲವು ಕುರಿಗಳು ಆಗಾಗ ವೃತ್ತದ ಮಧ್ಯ ಭಾಗಕ್ಕೆ ಬಂದು ನಿಲ್ಲುತ್ತವೆ, ಪುನಃ ಹೊರಗೆ ಹೋಗುತ್ತವೆ. ವೃತ್ತದ ಮಧ್ಯೆ ಬಂದು ನಿಲ್ಲುವ ಕುರಿಗಳು ಸ್ಥಬ್ಧವಾದಂತೆ ಕಂಡುಬರುತ್ತಿವೆ.
ಚೀನಾದ ಸರ್ಕಾರಿ ಮಾಧ್ಯಮವಾದ ಪೀಪಲ್ಸ್ ಡೈಲಿಯಲ್ಲಿ ಈ ವಿಡಿಯೋವನ್ನು ಪ್ರಕಟ ಮಾಡಲಾಗಿದ್ದು, ಕುರಿಗಳ ಈ ಆಶ್ಚರ್ಯಕರ ವರ್ತನೆಯನ್ನು ವಿಚಿತ್ರ ಎಂದೇ ಪೀಪಲ್ಸ್ ಡೈಲಿ ಬಣ್ಣಿಸಿದೆ. ಕುರಿಗಳು ಆರೋಗ್ಯವಂತವಾಗಿದ್ದು, ಅವುಗಳ ಈ ವಿಚಿತ್ರ ವರ್ತನೆಗೆ ಕಾರಣ ಏನೆಂದು ತಿಳಿಯುತ್ತಿಲ್ಲ ಎಂದು ವಿವರಿಸಿದೆ. ಆರಂಭದಲ್ಲಿ ಕೆಲವು ಕುರಿಗಳು ವೃತ್ತದಲ್ಲಿ ಸುತ್ತಲು ಆರಂಭಿಸುತ್ತವೆ. ಆಗ ಎಲ್ಲಾ ಕುರಿಗಳು ಈ ವೃತ್ತಕ್ಕೆ ಸೇರಿಕೊಳ್ಳುತ್ತವೆ ಎಂದು ಕುರಿಗಳ ಮಾಲೀಕ ವಿವರಿಸಿದ್ದಾರೆ.
ಕುರಿಗಳ ಫಾರ್ಮ್ನಲ್ಲಿ ನೂರಾರು ಕುರಿಗಳನ್ನು ಪ್ರತ್ಯೇಕ ಬ್ಲಾಕ್ಗಳಲ್ಲಿ ಇಡಲಾಗಿದೆ. ಆದರೆ ಎಲ್ಲಾ ಬ್ಲಾಕ್ಗಳಲ್ಲೂ ಕುರಿಗಳು ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿಲ್ಲ. ಕೇವಲ 13ನೇ ನಂಬರ್ ಬ್ಲಾಕ್ನಲ್ಲಿರುವ ಕುರಿಗಳು ಮಾತ್ರ ಈ ರೀತಿ ವರ್ತಿಸುತ್ತಿವೆ ಎಂದು ಫಾರ್ಮ್ನ ಮಾಲೀಕ ಮಿಯೋ ಅವರು ಮಾಹಿತಿ ನೀಡಿದ್ದಾರೆ.
ಕಳೆದ ನವೆಂಬರ್ 4 ರಿಂದಲೂ ಕುರಿಗಳು ಈ ರೀತಿ ವೃತ್ತಾಕಾರವಾಗಿ ಸುತ್ತು ಹಾಕುತ್ತಿವೆ. ಕುರಿಗಳ ಈ ವಿಚಿತ್ರ ವರ್ತನೆಗೆ ಬ್ಯಾಕ್ಟೀರಿಯಾ ಸೋಂಕು ಕಾರಣವಿರಬಹುದೇ ಎಂಬ ಶಂಕೆಗಳೂ ವ್ಯಕ್ತವಾಗುತ್ತಿವೆ. ಆದರೆ ಕುರಿಗಳ ಈ ವಿಚಿತ್ರ ವರ್ತನೆ ಮಾನಸಿಕ ಸಮಸ್ಯೆಯಿಂದ ಇರಬಹುದೇ ಎಂದೂ ವ್ಯಾಖ್ಯಾನಿಸಿದ್ದಾರೆ.
ಕೋವಿಡ್ಗೆ ಚೀನಾ ದೇಶವೇ ಮೂಲ ಎಂಬ ಅಪವಾದಗಳ ಹಿನ್ನೆಲೆಯಲ್ಲಿ ಕುಖ್ಯಾತವಾಗಿರುವ ಕಮ್ಯುನಿಸ್ಟ್ ರಾಷ್ಟ್ರದಲ್ಲಿ ಈ ರೀತಿಯಾದ ವಿಚಿತ್ರ ವರ್ತನೆ ತೋರುವ ಕುರಿಗಳ ವಿಡಿಯೋ ವಿಶ್ವದಾದ್ಯಂತ ಇದೀಗ ವೈರಲ್ ಆಗಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪಶು ತಜ್ಞರು, ಪ್ರಾಣಿ ಮನೋ ವಿಜ್ಞಾನಿಗಳು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಕುರಿಗಳ ಈ ವಿಚಿತ್ರ ವರ್ತನೆಯಿಂದ ಅಲ್ಲಿನ ಫಾರ್ಮ್ ಮಾಲೀಕರೂ ಕಾರಣ ತಿಳಿಯದೆ ದಿಗಿಲುಗೊಂಡಿದ್ದಾರೆ. ಜನರು, ಮಾಧ್ಯಮ ಪ್ರತಿನಿಧಿಗಳು ಕುತೂಹಲ, ಆಶ್ಚರ್ಯದಿಂದ ತಂಡೋಪತಂಡವಾಗಿ ಆ ಸ್ಥಳಕ್ಕೆ ಧಾವಿಸುತ್ತಿದ್ದಾರೆ.