ಚಲಿಸುತ್ತಿದ್ದ ರೈಲಿನಿಂದ ಸೇನಾ ಸಿಬ್ಬಂದಿಯನ್ನು ಹೊರಗೆ ತಳ್ಳಿದ ಟಿಟಿಇ | ಕಾಲು ಕಳೆದುಕೊಂಡ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ!

ಚಲಿಸುತ್ತಿದ್ದ ರೈಲಿನೊಳಗಿನಿಂದ ಟಿಟಿಇ ತಳ್ಳಿದ ಕಾರಣ ಸೇನಾ ಸಿಬ್ಬಂದಿಯೊಬ್ಬರು ತಮ್ಮ ಕಾಲನ್ನು ಕಳೆದುಕೊಂಡು ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಗಾಯಾಳುವನ್ನು ಸೋನು ಎಂದು ಗುರುತಿಸಲಾಗಿದ್ದು, ಗುರುವಾರ ಬೆಳಗ್ಗೆ ದಿಬ್ರುಗಢ-ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ನಿಂದ ಬರೇಲಿ ಜಂಕ್ಷನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ ೨ ರಲ್ಲಿ ಈ ಘಟನೆ ನಡೆದಿದೆ.

ಇದೀಗ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಸುಪಾನ್ ಬೋರೆ ವಿರುದ್ಧ ಕೊಲೆ ಯತ್ನದ ಆರೋಪ ಮಾಡಲಾಗಿದೆ. ಘಟನೆ ಬಳಿಕ ಆರೋಪಿ ಸುಪಾನ್ ತಲೆ ಮರೆಸಿಕೊಂಡಿದ್ದು, ಇದೀಗ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮೊರಾದಾಬಾದ್ ವಿಭಾಗದ ಹಿರಿಯ ಹಣಕಾಸು ವ್ಯವಸ್ಥಾಪಕ ಸುಧೀರ್ ಸಿಂಗ್ ತಿಳಿಸಿದ್ದಾರೆ.

ಈ ದುರ್ಘಟನೆ ಹೇಗೆ ನಡೆಯಿತೆಂದರೆ, ರೈಲಿನೊಳಗೆ ಸುಪಾನ್ ಬೋರೆ ಮತ್ತು ಸೋನು ನಡುವೆ ಟಿಕೆಟ್ ವಿಚಾರವಾಗಿ ವಾಗ್ವಾದ ನಡೆದಿದೆ. ನಂತರ ಮಾತು ಮಿತಿಮೀರಿದೆ. ಇದರಿಂದ ಕೋಪಗೊಂಡ ಸುಪಾನ್ ಬೋರೆ, ಸೇನಾ ಸಿಬ್ಬಂದಿಯನ್ನು ಹೊರಗೆ ತಳ್ಳಿದ್ದಾರೆ. ಆಗ ಸೋನು ರೈಲಿನ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೀಗ ಟಿಟಿಇ ಬೋರೆ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೦೭ (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಆತ ತಲೆಮರೆಸಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಸ್ಟೇಷನ್ ಹೌಸ್ ಆಫೀಸರ್ ಅಜಿತ್ ಪ್ರತಾಪ್ ಸಿಂಗ್ ಹೇಳಿದ್ದಾರೆ. ಹಾಗೂ ಘಟನೆಯ ಬಳಿಕ ಕೆಲ ಸಹ ಪ್ರಯಾಣಿಕರು ಟಿಟಿಇಯನ್ನು ಚೆನ್ನಾಗಿ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.