‘ ನೀಲಿಚಿತ್ರ ಕಳಿಸಿ ಅಶ್ಲೀಲ ಮಾತು ‘ ಆಡುಗೋಡಿ ಶ್ರೀನಿವಾಸ್ ವಿರುದ್ಧ ನಟಿ ಆರೋಪ!

ಸಿನಿಮಾರಂಗದಲ್ಲಿ ನಡೆಯುವ ವಿವಾದಗಳು ಒಂದೆರಡಲ್ಲ. ಇದೀಗ ಮತ್ತೊಂದು ಆರೋಪ ಕೇಳಿಬರುತ್ತಿದೆ. ಕನ್ನಡ ಚಿತ್ರರಂಗದ ಪೋಷಕ ಕಲಾವಿದರ ಸಂಘದಲ್ಲಿನ ಕೆಲವು ಪ್ರಮುಖರ ಮೇಲೆ ನಟಿ ರಾಣಿ ಅವರು ಗಂಭೀರ ಆರೋಪ ಮಾಡಿದ್ದಾರೆ.

 

ಪೋಷಕ ಕಲಾವಿದ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್​ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್​ ಅವರ ವರ್ತನೆ ಸರಿಯಿಲ್ಲ ಎಂದು ರಾಣಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಸಂಘದ ಮಹಿಳಾ ಸದಸ್ಯರಿಗೆ ಮುಜುಗರ ಆಗುವ ರೀತಿಯಲ್ಲಿ ಆಡುಗೋಡಿ ಶ್ರೀನಿವಾಸ್ ವರ್ತಿಸುತ್ತಾರೆ ಎಂದು ರಾಣಿ ಹೇಳಿದ್ದಾರೆ. ಈ ಬಗ್ಗೆ ಅವರು ಸುದ್ದಿಗೋಷ್ಠಿ ನಡೆಸಿ ಇನ್ನಷ್ಟು ಮಾಹಿತಿ ನೀಡಲಿದ್ದಾರೆ.

’ಪೋಷಕ ಕಲಾವಿದರ ಸಂಘದ ಮೇಲೆ ನಾನು ಆರೋಪ ಮಾಡುತ್ತಿಲ್ಲ. ಬದಲಾಗಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಮೇಲೆ ಮಾತ್ರ ನನ್ನ ಆರೋಪ ಇರುವುದು’ ಎಂದು ನಟಿ ರಾಣಿ ಹೇಳಿದ್ದಾರೆ.

ಸಂಘದ ಲೆಕ್ಕಾಚಾರ ಅಥವಾ ಯಾವುದೇ ವಿಷಯವನ್ನು ನಾವು ಕೇಳಲು ಹೋದರೆ ನಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಆಗಿದೆ. ನಾನು ಸಂಘದ ಉಪಾಧ್ಯಕ್ಷೆ, ನಾನು ಕೂಡ ಚುನಾವಣೆಯಲ್ಲಿ ಭಾಗವಹಿಸಿ ಗೆದ್ದಿರುವವಳು. ನಾನು ಅಲ್ಲಿನ ಮೆಂಬರ್​ ಆಗಿ 15 ವರ್ಷ ಆಯ್ತು. ಯಾವುದೇ ವಿಷಯವನ್ನೂ ನಮಗೆ ಬಿಟ್ಟುಕೊಡದೇ ಅವರವರೇ ಸೇರಿಕೊಂಡು ಮಾಡ್ತಾರೆ. ಇದನ್ನು ನಾವು ಕೇಳಲು ಹೋದರೆ ಬೇರೆ ಭಾಷೆ ಬಳಸುತ್ತಾರೆ. ಇಷ್ಟ ಇದ್ರೆ ಇರಿ, ಇಲ್ಲ ಅಂದ್ರೆ ರಾಜಿನಾಮೆ ಕೊಟ್ಟು ಹೋಗಿ ಎಂದು ಟೇಬಲ್​ ತಟ್ಟಿ ಹೇಳುತ್ತಾರೆ ಎಂದು ರಾಣಿ ಆರೋಪಿಸಿದ್ದಾರೆ.

ಇಷ್ಟೇ ಅಲ್ಲದೆ, ‘ಈ ಹಿಂದೆ ಇದ್ದ ಉಪಾಧ್ಯಕ್ಷೆಗೆ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್​ ಅವರು ಬ್ಲ್ಯೂ ಫಿಲ್ಮ್​ ಕಳಿಸುತ್ತಿದ್ದರು. ಕೆಲಸದ ಸಲುವಾಗಿ ನಮ್ಮನ್ನೆಲ್ಲ ಕರೆದುಕೊಂಡು ಹೋದಾಗ ಬರೀ ಅಂತದ್ದೇ ವಿಷಯ ಮಾತಾಡೋದು. ಇದರಿಂದಾಗಿ ನಮ್ಮ ಮನಸ್ಸಿಗೆ ಬಹಳ ನೋವಾಗಿದೆ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡುವ ಸಂಘ ಇದು. ನಮ್ಮ ಸಂಘದ ಯಾವುದೇ ಮಹಿಳೆಗೆ ಈ ರೀತಿ ಕಳಿಸಿದರೂ ಅದು ನಮಗೆ ಕಳಿಸಿದಂತೆ’ ಎಂದು ರಾಣಿ ಹೇಳಿದ್ದಾರೆ.

‘ಒಂದು ಬಾರಿ ಮೀಟಿಂಗ್​ನಲ್ಲಿ ಈ ವಿಚಾರ ಪ್ರಸ್ತಾಪ ಆದಾಗ ದೊಡ್ಡ ಗಲಾಟೆಯೇ ನಡೆದಿತ್ತು. ಸಂಘದ ಹೆಸರು ಹಾಳಾಗುತ್ತದೆ ಎಂದು ಅವರವರೇ ಕಾಂಪ್ರಮೈಸ್​ ಮಾಡಿದ್ದರು. ಆಗ ಕ್ಷಮಿಸಿ ವಿಷಯವನ್ನು ಸುಮ್ಮನೆ ಬಿಡಲಾಗಿತ್ತು. ಆದರೆ ಪದೇ ಪದೇ ಅದನ್ನೇ ರೂಢಿಸಿಕೊಂಡರೆ ನಾವೇನು ಮಾಡೋದು’ ಎಂದು ರಾಣಿ ಪ್ರಶ್ನಿಸಿದ್ದಾರೆ. ತಮಗಾಗುವ ಅನ್ಯಾಯವನ್ನು ಇದೀಗ ಬಹಿರಂಗಪಡಿಸಿದ್ದಾರೆ.

Leave A Reply

Your email address will not be published.