ನಾಯಿ ನಿಷ್ಠೆ | ಹಾವಿನ ಜೊತೆ ಸೆಣಸಾಡಿ ಯಜಮಾನನ ಜೀವ ಉಳಿಸಿದ ನಾಯಿ, ಕೊನೆಗೆ ಪ್ರಾಣ ತ್ಯಾಗ
ನಾಯಿ ತುಂಬಾ ನಿಯತ್ತಿನ ಪ್ರಾಣಿ ಎಂದು ಎಲ್ಲರಿಗೂ ತಿಳಿದಿರುವುದೇ. ನಾಯಿಯ ಪ್ರಾಮಾಣಿಕತೆ,ಅದು ಮಾಲೀಕನಿಗೆ ಕಷ್ಟ ಬಂದಾಗ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಆತನನ್ನು ರಕ್ಷಿಸುವಂತದ್ದು ಹೀಗೇ ಹಲವಾರು ಘಟನೆಗಳನ್ನು ಕೇಳಿರುತ್ತೇವೆ. ಆದರೆ ಇಲ್ಲಿ ಮಾಲೀಕನನ್ನು ರಕ್ಷಿಸಲು ನಾಯಿಯು ವಿಷಪೂರಿತ ಹಾವಿನೊಂದಿಗೆ ಸೆಣಸಾಡಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ನಾಯಿಯು ತನ್ನ ಮಾಲೀಕನೊಂದಿಗೆ ವಾಕಿಂಗ್ ಹೋಗುತ್ತಿದ್ದ ವೇಳೆ ಹಾವೊಂದು ಎದುರಾಗಿ, ನಾಯಿ ಆತನನ್ನು ರಕ್ಷಿಸುವ ಸಲುವಾಗಿ ಹಾವನ್ನು ಕೊಂದು ಹಾಕಿದೆ. ಆದರೆ ದುರದೃಷ್ಟವಶಾತ್ ಈ ಸೆಣಸಾಟದಲ್ಲಿ ನಾಯಿಗೆ ಹಾವು ಕಚ್ಚಿದ ಕಾರಣ ಅದರ ವಿಷದಿಂದ ನಾಯಿಯು ಸಾವನ್ನಪ್ಪಿದೆ.
ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಅಮಿತ್ ರೈ ಅವರು ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮಧ್ಯಪ್ರದೇಶದ ಪ್ರತಾಪಪುರದಲ್ಲಿ ವಾಸವಾಗಿದ್ದರು. ಇವರಿಗೆ ಮೊದಲಿನಿಂದಲೂ ನಾಯಿ ಎಂದರೆ ತುಂಬಾ ಪ್ರೀತಿ. ಅಮಿತ್ ಐದು ವರ್ಷಗಳ ಹಿಂದೆ ಅಮೆರಿಕದ ಬುಲ್ಲಿ ಎಂಬ ನಾಯಿಯನ್ನು ಕೊಂಡು ಅದಕ್ಕೆ ಗಬ್ಬರ್ ಎಂದು ಹೆಸರಿಟ್ಟಿದ್ದರು. ತಾವು ಸಾಕಿದ್ದ ಎಲ್ಲಾ ನಾಯಿಗಳಿಗಿಂತಲೂ ಸ್ವಲ್ಪ ಹೆಚ್ಚು ಪ್ರೀತಿಯನ್ನು ಗಬ್ಬರ್ ಮೇಲೆ ಅಮಿತ್ ತೋರಿಸುತ್ತಿದ್ದರು. ಅದೇ ರೀತಿ ಗಬ್ಬರ್ ಗೂ ಕೂಡ ಅಮಿತ್ ಅಂದರೆ ಅತಿಯಾದ ಪ್ರೀತಿ. ಅಮಿತ್ ಗದರದೇ ಇದ್ದರೆ ಯಾರನ್ನೂ ಅವರ ಹತ್ತಿರಕ್ಕೆ ಬರಲು ಬಿಡದೇ ರಕ್ಷಣೆ ನೀಡುತ್ತಿತ್ತು. ಅಷ್ಟು ನಿಷ್ಠೆಯ ಶ್ವಾನವಾಗಿತ್ತು.
ಬುಧವಾರ ಪ್ರತಾಪ್ ಪುರದಲ್ಲಿರುವ ತಮ್ಮ ಫಾರ್ಮ್‍ಹೌಸ್‍ಗೆ ಅಮಿತ್ ತನ್ನ ಗಬ್ಬರ್ ನೊಂದಿಗೆ ವಾಕಿಂಗ್ ತೆರಳಿದ್ದರು. ಈ ವೇಳೆ ದೈತ್ಯವಾದ ವಿಷಕಾರಿ ಹಾವೊಂದು (ರಸ್ಸೆಲ್ಸ್ ವೈಪರ್) ತನ್ನ ಮಾಲೀಕನ ಕಡೆಗೆ ಬರುತ್ತಿರುವುದನ್ನು ನಾಯಿ ಗಮನಿಸಿದೆ ಆದರೆ ಅಮಿತ್ ಹಾವನ್ನು ನೋಡಿರಲಿಲ್ಲ.
ಆ ವೇಳೆ ತನ್ನ ಯಜಮಾನನ್ನು ರಕ್ಷಿಸಲು ನಾಯಿ ತಕ್ಷಣವೇ ಹಾವಿನ ಮೇಲೆ ಎಗರಿದೆ. ಸುದೀರ್ಘ ಕಾಲ ನಡೆದ ಹಾವು ಮತ್ತು ನಾಯಿ ಕಾಳಗದಲ್ಲಿ ಕೊನೆಗೆ ಗಬ್ಬರ್ ವಿಷಪೂರಿತ ಹಾವನ್ನು ಎರಡು ತುಂಡುಗಳಾಗಿ ಕಚ್ಚಿ ಕೊಂದು ಹಾಕುವಲ್ಲಿ ಯಶಸ್ವಿಯಾಗಿದೆ. ಆದರೆ, ಕಾಳಗದಲ್ಲಿ ಹಾವಿನ ವಿಷ ನಾಯಿಯ ದೇಹದೊಳಗೆ ಹರಡಿದ್ದರಿಂದ ನಾಯಿ ಕೂಡ ಕೆಲವೇ ನಿಮಿಷಗಳಲ್ಲಿ ಕೆಳಗೆ ಬಿದ್ದು ಸಾವನ್ನಪ್ಪಿದೆ. ನಿಷ್ಠೆಯ ನಾಯಿ ಯಜಮಾನನಿಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದು, ಇದೀಗ ಗಬ್ಬರ್ ನನ್ನು ಕಳೆದುಕೊಂಡು ಅಮಿತ್ ಹಾಗೂ ಆತನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.