Mysuru Bus Shelter: ಗುಂಬಜ್ ಮಾದರಿ ಬಸ್ ನಿಲ್ದಾಣದ ವಿವಾದ : ಖಾದರ್ ಹೇಳಿಕೆ! ಶಾಸಕ ರಾಮ್ ದಾಸ್ ಸ್ಪಷ್ಟನೆ

ಮೈಸೂರಿನ ಗುಂಬಜ್ ಮಾದರಿಯ ಬಸ್ ನಿಲ್ದಾಣದ (Mysu Bus Shelter) ನಿರ್ಮಾಣದ ವಿವಾದ ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರಿಂದಾಗಿ ಬಿಜೆಪಿಯ ಶಾಸಕ ಎಸ್​ಎ ರಾಮದಾಸ್ (MLA SA Ramdas) ಮತ್ತು ಸಂಸದ ಪ್ರತಾಸ್ ಸಿಂಹ (MP Pratap Simha) ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ. ಈಗ ಈ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ (UT Khader) ಅವರು ಪ್ರತಿಕ್ರಿಯೆ ನೀಡಿದ್ದಾರೆ, “ನಮ್ಮದು ಊರು ಮತ್ತು ಜನರ ಮನಸ್ಸು ಕಟ್ಟುವ ಕೆಲಸ. ಕೆಲವರದ್ದು ಜನರ ಮನಸ್ಸು ಮತ್ತು ಊರು ಒಡೆಯುವ ಕೆಲಸ. ಅವರು ಒಡೆದುಕೊಂಡು ಹೋಗಲಿ, ನಾವು ಕಟ್ಟಿಕೊಂಡು ಹೋಗ್ತೇವೆ” ಎಂದು ಹೇಳಿದ್ದಾರೆ.

 

ತನ್ವೀರ್ ಸೇಠ್​​ ಅವರ ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ತನ್ವೀರ್ ಸೇಠ್​​ಗೆ ಪ್ರಜಾಪ್ರಭುತ್ವದಲ್ಲಿ ಹೇಳಿಕೆ ಕೊಡುವ ಅವಕಾಶ ಇದೆ. ಪಕ್ಷದ ಹಿರಿಯರ ಜೊತೆ ಚರ್ಚಿಸಿ ಅವರು ನಿರ್ಧಾರ ಮಾಡ್ತಾರೆ. ಕಾನೂನು ಮತ್ತು ನಿಯಮದ ಪ್ರಕಾರ ಅವರು ಏನು ಬೇಕಾದರೂ ಮಾಡಲಿ ಎಂದು ಹೇಳಿದರು.

ಇಷ್ಟು ಮಾತ್ರವಲ್ಲದೇ, ರಾಜ್ಯ ಸರ್ಕಾರದ ಅನುಮತಿ ಪಡೆದು ‌ಮಾಡಲು ಅವಕಾಶ ಇದೆ. ನಮ್ಮ ದೇಶದ ಎಲ್ಲಾ ಇತಿಹಾಸಕಾರರು, ಸ್ವತಂತ್ರ ಹೋರಾಟಗಾರರಿಗೆ ಗೌರವ ಸಲ್ಲಬೇಕು. ಅವರಿಗೆ ಗೌರವ ಸಲ್ಲಿಸುವ ಎಲ್ಲದಕ್ಕೂ ಈ ರಾಜ್ಯದ ನಾಗರಿಕರ ಬೆಂಬಲ ಇದೆ. ರಾಜ್ಯದಲ್ಲಿ ಸರ್ವಧರ್ಮಕ್ಕೆ ಕೊಡುಗೆ ಕೊಟ್ಟ ಹಲವು ಜನರಿದ್ದಾರೆ. ಅವರು ಕೊಟ್ಟ ಕೊಡುಗೆ ಮುಂದಿನ ಪೀಳಿಗೆಗೆ ಗೊತ್ತಾಗಬೇಕು ಎಂದರು.

ಶಾಸಕ ರಾಮದಾಸ್​ ಗುಂಬಜ್ ವಿವಾದದ ಕುರಿತು ತಮ್ಮ ಮಾತನ್ನು ಹೇಳಿದ್ದಾರೆ. ಇಂದು ಪತ್ರದ ಮೂಲಕ ಮಾಧ್ಯಮಗಳ ಹೇಳಿಕೆ ನೀಡಿರುವ ಶಾಸಕರು, ಅರಮನೆ ಮಾದರಿಯಲ್ಲಿ ನಿರ್ಮಾಣವಾಗಿರುವ ಕಟ್ಟಡವನ್ನು ಮಸೀದಿಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿದವರ ವಿರುದ್ಧ ಅವರು ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಪ್ರತಾಪ್ ಸಿಂಹ ಅವರು ಹೇಳಿದ ಹಾಗೇ ಇದನ್ನು ರಾತ್ರೋರಾತ್ರಿ ಕಳಸ ನಿರ್ಮಾಣ ಮಾಡಿಲ್ಲ. ಯಾವುದೇ ಧರ್ಮದ ಆಧಾರದ ಮೇಲೆ ಬಸ್ ನಿಲ್ದಾಣ ನಿರ್ಮಿಸಿಲ್ಲ ಎಂದು ಪ್ರತಾಪ್ ಸಿಂಹ ಆರೋಪಕ್ಕೆ ಉತ್ತರ ನೀಡಿದ್ದಾರೆ.

ಮೈಸೂರಿನ ಪಾರಂಪರಿಕ ಮಹತ್ವ ಸಾರಲು ಮೈಸೂರು ಅರಮನೆಯ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಆರೋಪಿಸಿದರು. ಈ ಸಂಬಂಧ ಪೋಲಿಸ್ ಕಮಿಷನರ್​​ಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ವಿವಾದಿತ ಬಸ್​ ನಿಲ್ದಾಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಧ್ಯ ಪ್ರವೇಶ ಮಾಡಿದೆ. ಹಾಗೂ ನೋಟಿಸ್ ಕೂಡಾ ನೀಡಿದ್ದು, ಊಟಿ ಮಾರ್ಗದ ಬಲಭಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಬಸ್​ ನಿಲ್ದಾಣವನ್ನು ಒಂದು ವಾರದೊಳಗೆ ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿದೆ.

Leave A Reply

Your email address will not be published.