ರ‍್ಯಾಪಿಡೋ ಚಾಲಕನ ವಿರುದ್ಧ ನಟಿಯ ಲೈಂಗಿಕ ಕಿರುಕುಳದ ಕೇಸ್| ತನಿಖೆಯಿಂದ ಶಾಕಿಂಗ್ ಸತ್ಯ ಬಯಲು!
ರ‍್ಯಾಪಿಡೋ ಚಾಲಕನಿಂದ ಲೈಂಗಿಕ ದೌರ್ಜನ್ಯವಾಗಿದೆ ಎಂದು ನಟಿಯೊಬ್ಬರು ಪೋಲಿಸರಿಗೆ ದೂರು ನೀಡಿದ್ದರು. ಆತ ದೇಹದ ಅಂಗಾಂಗಗಳನ್ನು ಮುಟ್ಟಿ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ನಟಿ ಆರೋಪಿಸಿದ್ದರು.
ನಟಿ, ಮಾಡೆಲ್ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಯುವತಿಯೊಬ್ಬರು ತನಗೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಸುಳ್ಳು ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸತ್ಯವನ್ನು ಬಯಲಿಗೆಳೆದಿದ್ದಾರೆ. ಇದೀಗ ನಟಿಯು ತನ್ನ ಸುಳ್ಳು ಆರೋಪದಿಂದ ತಾನೇ ಸಿಕ್ಕಿ ಬಿದ್ದಿರುವ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ.
ಅಂದು ಅಕ್ಟೋಬರ್ 30ರ ರಾತ್ರಿ 10.30ರ ಸುಮಾರಿಗೆ ತಮ್ಮ ಮೇಲೆ ರ‍್ಯಾಪಿಡೋ ಚಾಲಕನಿಂದ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಯುವತಿಯು ದೂರು ನೀಡಿದ್ದರು. ಆದಿನ ಯುವತಿಯು rapido ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದು, ಮಂಜುನಾಥ್ ತಿಪ್ಪೇಸ್ವಾಮಿ ಎಂಬ ಚಾಲಕ ಬಂದು ನಟಿಯನ್ನು ಪಿಕ್ ಮಾಡಿದ್ದಾನೆ. ನಂತರ ಬೈಕ್ ಚಾಲಕ ಮಾರ್ಗ ಮಧ್ಯೆ ಬರುವಾಗ ತನ್ನ ದೇಹದ ಅಂಗಾಂಗಗಳನ್ನು ಮುಟ್ಟಿ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದಾಗ ಬೇರೊಂದು ಕಥೆಯೇ ಇದೆ ಎಂಬುದು ತಿಳಿದುಬಂದಿದೆ.
ಯುವತಿ ನೀಡಿರುವ ದೂರು ಸುಳ್ಳು ಎಂದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ದೂರಿನಲ್ಲಿ ಯುವತಿ ಹೇಳಿದ ರೀತಿ ಆ ದಿನ ಏನೂ ನಡೆದಿರಲಿಲ್ಲ. ಅವರು ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದು ನಿಜ. ಆದರೆ ಬುಕ್ ಮಾಡಿದ ಕೆಲವೇ ಹೊತ್ತಿನಲ್ಲಿ ಯುವತಿಯೇ ಕ್ಯಾನ್ಸಲ್ ಮಾಡಿದ್ದಾರೆ. ಕ್ಯಾನ್ಸಲ್ ಆಗಿದ್ದರಿಂದ ರ‍್ಯಾಪಿಡೋ ಚಾಲಕ ಆ ಜಾಗಕ್ಕೆ ಬಂದಿರಲಿಲ್ಲ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಹಾಗಾಗಿ ಚಾಲಕನನ್ನು ಪೋಲಿಸರು ಬಂಧಿಸಲಿಲ್ಲ.
ಈ ಘಟನೆಯ ಕುರಿತು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಅವರು ಹೇಳಿಕೆ ನೀಡಿದ್ದಾರೆ. ‘ಮಹಿಳೆ ಬೈಕ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ. ರ‍್ಯಾಪಿಡೋ ಚಾಲಕ ಅಲ್ಲಿಗೆ ಬಂದಿರುವುದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ. ಹಾಗಾಗಿ ಇದು ಸುಳ್ಳು ಕೇಸ್ ಎಂದು ಗೊತ್ತಾಗಿದೆ. ಅವರು ಯಾವ ಕಾರಣಕ್ಕೆ ಈ ಸುಳ್ಳು ದೂರು ದಾಖಲಿಸಿದ್ರೋ ಗೊತ್ತಿಲ್ಲ’ ಎಂದು ಹೇಳಿದರು.