ಪಾಕಿಸ್ತಾನದ ರೂಹ್ ಅಫ್ಜಾ ಮಾರಾಟ ಮಾಡದಂತೆ ದೆಹಲಿ ಹೈಕೋರ್ಟ್ ಆದೇಶ!
ಶತಮಾನಗಳಿಂದ ಭಾರತದಲ್ಲಿ ರೂಹ್ ಅಫ್ಜಾ ಮಾರಾಟವಾಗುತ್ತಿರುವುದನ್ನು ಗಮನಿಸಿದ ನ್ಯಾಯಾಲಯ, ಪಾಕಿಸ್ತಾನದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂದು ಅಮೆಜಾನ್ ಇಂಡಿಯಾಗೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ಟ್ರೇಡ್‌ಮಾರ್ಕ್ ಉಲ್ಲಂಘನೆ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ತಯಾರಿಸಿದ ರೂಹ್ ಅಫ್ಜಾವನ್ನು ಮಾರಾಟ ಮಾಡಬಾರದು ಎಂದು ಅಮೆಜಾನ್ ಇಂಡಿಯಾಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಹಮ್‌ದರ್ದ್ ನ್ಯಾಷನಲ್ ಫೌಂಡೇಶನ್ ಮತ್ತು ಹಮ್‌ದರ್ದ್ ಲ್ಯಾಬೋರೇಟರೀಸ್ ಇಂಡಿಯಾ (ಹಮ್‌ದರ್ದ್ ದವಾಖಾನ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅಮೆಜಾನ್ ಇಂಡಿಯಾ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪಾಕಿಸ್ತಾನದಲ್ಲಿ ತಯಾರಿಸಿದ ರೂಹ್ ಅಫ್ಜಾವನ್ನು ಮಾರಾಟ ಮಾಡದಂತೆ ನಿರ್ಬಂಧನೆ ಮಾಡಬೇಕು ಎಂದು ಕೋರಿದೆ.
ಪಾಕಿಸ್ತಾನದಿಂದ ತಯಾರಿಸಲ್ಪಟ್ಟ ರೂಹ್ ಅಫ್ಜಾ ಲೀಗಲ್ ಮೆಟ್ರೊಲಜಿ ಆಕ್ಟ್, 2009, ಲೀಗಲ್ ಮೆಟ್ರೊಲಜಿ (ಪ್ಯಾಕೇಜ್ ಮಾಡಲಾದ ಸರಕುಗಳು) ನಿಯಮಗಳು, 2011, ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ರ ನಿಬಂಧನೆಗಳನ್ನು ಅನುಸರಿಸುವುದಿಲ್ಲ ಎಂದು ಹಮ್‌ದರ್ದ್ ದವಾಖಾನ ವಕೀಲರು ವಾದಿಸಿದ್ದಾರೆ. ಈ ಎಲ್ಲಾ ವಾದಗಳನ್ನು ಆಲಿಸಿ, ಸೂಕ್ಷ್ಮವಾಗಿ ಪರೀಕ್ಷಿಸಿದ ನಂತರ, ಹೈಕೋರ್ಟ್ ಹಮ್‌ದರ್ದ್ ನ್ಯಾಷನಲ್ ಫೌಂಡೇಶನ್ (ಭಾರತ) ಪರವಾಗಿ ಶಾಶ್ವತ ತಡೆಯಾಜ್ಞೆ ನೀಡಿದೆ.
ಈ ಬಗ್ಗೆ ಮೊಕದ್ದಮೆಯು ಪ್ರತಿವಾದಿ ನಂ.2 ಮತ್ತು ಮಾರಾಟಗಾರರ ವಿರುದ್ಧದ ದೂರಿನ ಪ್ಯಾರಾಗ್ರಾಫ್ 38 (ಎ) ರ ಪ್ರಕಾರ (ಶಾಶ್ವತ ತಡೆಯಾಜ್ಞೆ ತಡೆಗೆ ಆದೇಶ) ತೀರ್ಪು ನೀಡುತ್ತದೆ. ಅಂದರೆ ಇದೇ ರೀತಿಯ ಹೆಸರನ್ನು ಹೊಂದಿರುವ ಅಥವಾ ಪಾಕಿಸ್ತಾನದಲ್ಲಿ ತಯಾರಿಸಲ್ಪಟ್ಟ ಉತ್ಪನ್ನಗಳನ್ನು ಭಾರತದಲ್ಲಿ ಅಮೆಜಾನ್‌ನಲ್ಲಿ ಮಾರಾಟ ಮಾಡಬಾರದು ಎಂದು ನ್ಯಾಯಾಲಯ ತಿಳಿಸಿದೆ.
ಮೊಕದ್ದಮೆಯ ಪ್ರಕಾರ, ರೂಹ್ ಅಫ್ಜಾವನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡಲಾಗುತ್ತಿದ್ದು, ಮಾರಾಟಗಾರರು ಅವರ ವಿವರಗಳನ್ನು ಬಹಿರಂಗಪಡಿಸಲಿಲ್ಲ. ವಾದದ ಈ ವಿಷಯವನ್ನು ಆಲಿಸಿದ ನ್ಯಾಯಾಲಯ ಮಾರಾಟಗಾರರ ಹೆಸರನ್ನು ಬಹಿರಂಗಪಡಿಸುವ ಜವಾಬ್ದಾರಿಯನ್ನು Amazon ಹೊಂದಿದೆ ಎಂದು ಗಮನಿಸಿದೆ.
ಹಕೀಮ್ ಹಫೀಜ್ ಅಬ್ದುಲ್ ಮಜೀದ್, ರೂಹ್ ಅಫ್ಜಾವನ್ನು ಪರಿಚಯಿಸಿದರು. ಇದನ್ನು ದೇಶ ವಿಭಜನೆಯ ಬಳಿಕ ಎರಡೂ ದೇಶಗಳಲ್ಲಿ ಮಾರಾಟ ಮಾಡಲಾಯಿತು. ದೇಶ ವಿಭಜನೆಯ ನಂತರ ಮಜೀದ್ ಅವರ ಹಿರಿಯ ಮಗ ಭಾರತದಲ್ಲಿಯೇ ಉಳಿದುಕೊಂಡರು. ಆದರೆ ಅವರ ಇನ್ನೊಬ್ಬ ಮಗ ಪಾಕಿಸ್ತಾನಕ್ಕೆ ಹೊರಟು ಹೋದರು. ಅವರು ಪಾಕಿಸ್ತಾನದಲ್ಲಿ ಹಮ್‌ದರ್ದ್ ಲ್ಯಾಬೋರೇಟರೀಸ್ (ವಕ್ಫ್) ಅನ್ನು ಪ್ರಾರಂಭಿಸಿದರು. ಹಾಗಾಗಿ ಸಹೋದರನ ಮೂಲಕ ಇದು ಭಾರತಕ್ಕೆ ಪ್ರವೇಶಿಸುತ್ತಿತ್ತು. ಆದರೆ ಇದೀಗ ರೂಹ್ ಅಫ್ಜಾವನ್ನು ಭಾರತದಲ್ಲಿ ಮಾರಾಟ ಮಾಡಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ.